ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಡಿಸ್ಟ್ರಿಬ್ಯೂಟರ್ 85 ರಿಂದ 92 ರವರೆಗಿನ ಕಾಲುವೆ ಗಳಿಗೆ ಸಮರ್ಪಕ ನೀರು ಹರಿಸಲು ಹತ್ತು ಹಲವು ಬಾರಿ ಹೋರಾಟ, ರಸ್ತಾ ರೋಖೋಗಳನ್ನು ಮಾಡಿದರೂ ಇವತ್ತಿಗೂ ಮುಖ್ಯ ಕಾಲುವೆಗೆ 6 ಅಡಿ ಇರಬೇಕಾದ ನೀರು 2 ಅಡಿಗಿಂತ ಹೆಚ್ಚು ಹರಿಸಿಲ್ಲ. ಇದೇ ರೀತಿ ನೀರಿನ ಹರಿವು ಮುಂದುವರೆದರೆ ಮಾ.9ರಂದು ಪಕ್ಷಾತೀತವಾಗಿ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ
ಎನ್.ಎಸ್. ಭೋಸರಾಜು ಎಚ್ಚರಿಕೆ ನೀಡಿದರು.
ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳ ನಡೆದ ಹೋರಾಟದ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಗಳು ಮುಖ್ಯ ಕಾಲುವೆಗಳ ಮೇಲೆ ಸೂಕ್ತ ಪೊಲೀಸ್ ಬಂದ್ ಒದಗಿಸಿ, ನಾಕಾ ಬಂದಿ ಹಾಕಿ, ಹಗಲು-ರಾತ್ರಿ ಗಸ್ತು ತಿರುಗಿ ನೀರೊದಗಿಸುವ ಭರವಸೆ ನೀಡಿದ್ದಕ್ಕಾಗಿ ಧರಣಿ ಹಿಂಪಡೆಯಲಾಯಿತು.
ಆದರೆ, ಇಂದಿನವರೆಗೂ ಸತತವಾಗಿ ಸಮಪ್ರಮಾಣದ ಗೇಜ್‌ನ ನೀರು ಕೆಳಭಾಗದ ರೈತರಿಗೆ ಸಿಗುತ್ತಿಲ್ಲ. ನೀರಿನ ಗೇಜ್ ಅನ್ನು ಕಾಪಾಡುವಲ್ಲಿ ನೀರಾವರಿ ಅಧಿ ಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ ಬಿಜೆಪಿ ಮುಖಂಡ ಗಂಗಾಧರ ನಾಯಕ, ಅಧಿ ಕಾರಿಗಳು ಪ್ರತಿ ಬಾರಿಯೂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಈಗಾಗಲೇ ರೈತರು ಬೆಳೆದ ಬೆಳೆ ಅರ್ಧಕ್ಕೆ ಬಂದು ನಿಂತಿದೆ.
ನೀರಿನ ಕೊರತೆ ಇದೆ ರೀತಿ ಮುಂದುವರಿದರೆ ರೈತರ ಜೀವನ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು. ಮುಖಂಡ ಜೆ.ಶರಣಪ್ಪಗೌಡ ಮಾತನಾಡಿದರು. ಮಾಜಿ ಶಾಸಕ ಹಂಪಯ್ಯ ನಾಯಕ, ದೊಡ್ಡ ಬಸಪ್ಪಗೌಡ ಭೋಗಾವತಿ, ಶರಣಯ್ಯ ಗುಡದಿನ್ನಿ, ಚುಕ್ಕಿ ಶಿವಕುಮಾರ, ಎಂ.ಶ್ರೀನಿವಾಸ, ಮಾಕಂìಡೇಯ ಜಾಲಾಪುರ ಕ್ಯಾಂಪ್, ಶಿವಶರಣಗೌಡ ಲಕ್ಕಂದಿನ್ನಿ, ಎಸ್. ದಾನನಗೌಡ, ನರಸಿಂಹರಾವ್ ಕುಲಕರ್ಣಿ, ರಮೇಶ ದರ್ಶನಕರ್, ಚಂದ್ರು ಕಳಸ, ಕಲ್ಲೂರು ಬಸವರಾಜ ನಾಯಕ, ಸೂರಿ ದುರುಗಣ್ಣ ನಾಯಕ, ಬಸವರಾಜ ದಳಪತಿ ಜಾಲಾಪುರ, ಮಹಿಬೂಬ್ ಬಡೇಗರ್, ಕಡದಿನ್ನಿ ಬೀರಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸಿದ್ಧರಾಮಯ್ಯ ಸ್ವಾಮಿ, ಬೈನೇರ್ ರಾಮಯ್ಯ, ಪಪಂ ಸದಸ್ಯರು, ಕೆಳ ಭಾಗದ ರೈತ ಮುಖಂಡರು ಇದ್ದರು.