ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ನಡೆ ತೋರಿದ ಘಟನೆ ಮಾಸುವ ಮುನ್ನವೇ ಅದೇ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಅತಿಕ್ರಮ ಪ್ರವೇಶಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತುಕೊಂಡಿರುವ ನಿಲ್ದಾಣದ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸರಿಗೊಪ್ಪಿಸಿದ್ದಾರೆ.
ಚಾಮರಾಜನಗರದ ಯದುವೀರ(21) ಮತ್ತು ಹುಬ್ಬಳ್ಳಿಯ ಶಶಿಧರ್(20) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೇ 15ರಂದು ರಾತ್ರಿ 7.30ಕ್ಕೆ ನಿಲ್ದಾಣದೊಳಗೆ ಅತಿಕ್ರಮ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದರು. ಈ ಸಂಬಂಧ ಮೆಟ್ರೋ ನಿಲ್ದಾಣದ ಕಂಟ್ರೋಲರ್ ಕೆ.ರಾಘವೇಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಅವರ ಪೂರ್ವಪರ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇಬ್ಬರು ಆರೋಪಿಗಳು ಮೇ 15ರಂದು ರಾತ್ರಿ 7.30ಕ್ಕೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮುಖ್ಯದ್ವಾರದ ಮೂಲಕವೇ ಒಳಗಡೆ ಪ್ರವೇಶಿಸಿದ್ದಾರೆ. ನಂತರ ಟಿಕೆಟ್ ಪಡೆಯದೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಫ್ಲಾಟ್‌ಫಾರಂ-4ಕ್ಕೆ ಹೋಗಿದ್ದು, ಅಲ್ಲಿಂದ ನೇರವಾಗಿ ರೈಲು ಹೋಗುವ ಟ್ಯಾ†ಕ್(ಹಳಿ) ಮೇಲೆಯೇ ನಡೆದುಕೊಂಡು ಸಂಪಿಗೆ ರಸ್ತೆ ನಿಲ್ದಾಣದ ಕಡೆಗೆ ಸಾರ್ವಜನಿಕ ನಿರ್ಬಂಧಿತ ಸುರಂಗ ಮಾರ್ಗದಲ್ಲೇ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಇತರೆ ಸಿಬ್ಬಂದಿ ಜತೆ ಹಳಿ ಪಕ್ಕದ ಕಾಲು ದಾರಿಯಲ್ಲಿ ಸಾಗಿ ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಎಷ್ಟೇ ವಿಚಾರಣೆ ನಡೆಸಿದರೂ ಆರೋಪಿಗಳು ಹೆಚ್ಚಿನ ಮಾಹಿತಿಯನ್ನು ಹೇಳಿಲ್ಲ. ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ ಆರೋಪಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದರು.
ಜಿಗಿದು ಹೋಗಿರಬಹುದು: ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ಆರೋಪಿಗಳು ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿರುವ ಆರೋಪಿಗಳು, ಪ್ರವೇಶ ದ್ವಾರ (ಟೋಕನ್ ಹಾಕುವ ಸ್ಥಳ)ದಲ್ಲಿ ಜಿಗಿದು ನೇರವಾಗಿ ಟ್ಯಾ†ಕ್ ಮೇಲೆ ಹೋಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.