ಮಂಗಳೂರು: ತುಳುನಾಡಿನಲ್ಲಿ ಧರ್ಮ ಕ್ಷೇತ್ರಗಳ ಜೀರ್ಣೋದ್ಧಾರ ನಿರಂತರವಾಗಿ ನಡೆಯುವ ಮೂಲಕ ಧರ್ಮ ಕಾರ್ಯಗಳು ಸಾಕಾರವಾಗುತ್ತಿದೆ. ಈ ಮೂಲಕ ಸಮಾಜದ ಅಭ್ಯುದಯವಾಗುತ್ತಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಬಿಜೈ-ಕಾಪಿಕಾಡ್‌ನ ದೈವರಾಜ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ವ್ಯವಸ್ಥೆಯೊಳಗೆ ನಾವು ಬಂಧಿಯಾಗುತ್ತಿದ್ದರೂ ತುಳುನಾಡಿನಲ್ಲಿರುವ ಧರ್ಮ ಕ್ಷೇತ್ರಗಳ ಕಾರ್ಯದಲ್ಲಿ ಎಲ್ಲರೂ ಶ್ರದ್ಧೆಯಿಂದ ಸೇವೆ ಸಲ್ಲಿಸುವ ಮನೋಭಾವ ಜಾಗೃತವಾಗಿದೆ. ದೈವ-ದೇವಸ್ಥಾನಗಳ ಅಭಿವೃದ್ಧಿಯಾದರೆ ಅದರ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಗೊಳ್ಳಲು ಸಾಧ್ಯ ಎಂದರು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ದೇವರ ಆಶೀರ್ವಾದದಿಂದ ಹಾಗೂ ಸರ್ವರ ಸಹಕಾರದಿಂದ ಸಾಂಗವಾಗಿ ನೆರವೇರಿದೆ ಎಂದರು.
ಶ್ರೀ ಕ್ಷೇತ್ರ ಕದ್ರಿಯ ಬ್ರಹ್ಮಶ್ರೀ ದೇರೆಬೈಲ್ ವಿಠಲದಾಸ ತಂತ್ರಿ ಅವರು ಆಶೀರ್ವಚನವಿತ್ತರು. ಕಚ್ಚಾರು ಶ್ರೀ ಮಾಲ್ತಿದೇವಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು ಉದ್ಘಾಟಿಸಿದರು. ಕ್ಷೇತ್ರದ ಗುರಿಕಾರರಾದ ರಾಜೇಂದ್ರ ಕಿರೋಡಿಯನ್ ಉಪಸ್ಥಿತರಿದ್ದರು.
ಕದ್ರಿ ಕೃಷ್ಣ ಅಡಿಗ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ ಸಾಲ್ಯಾನ್, ಮಾಜಿ ಮೇಯರ್ ಕೆ. ಭಾಸ್ಕರ್, ಮಾಜಿ ಉಪಮೇಯರ್ ಪೂರ್ಣಿಮಾ, ಉದ್ಯಮಿಗಳಾದ ಕರುಣಾಕರ, ರತನ್ ಶೆಟ್ಟಿ, ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಪ್ರ.ಕಾರ್ಯದರ್ಶಿ ಬಾಲಕೃಷ್ಣ ಕೊಟ್ಟಾರಿ, ಪ್ರಮುಖರಾದ ಡಾ| ಮುರಳೀ ಕುಮಾರ್, ಪ್ರಮುಖ್ ರೈ, ಯೋಗೀಶ್ವರಿ ಉಪಸ್ಥಿತರಿದ್ದರು.
ಯೋಗ ತರಬೇತುದಾರ ಡಾ| ಜಗದೀಶ್ ಶೆಟ್ಟಿ ಬಿಜೈ ಸ್ವಾಗತಿಸಿದರು. ರತನ್ ಬಾಬುಗುಡ್ಡೆ ಪ್ರಸ್ತಾವಿಸಿದರು. ಕೆ.ಕೆ. ಪೇಜಾವರ ನಿರೂಪಿಸಿದರು.