Advertisement

ಎಫ್ಆರ್‌ಪಿ ಮರು ಪರಿಶೀಲಿಸಿ: ಕಬ್ಬು ಬೆಳೆಗಾರರ ಆಗ್ರಹ

11:01 PM Oct 05, 2021 | Team Udayavani |

ಬೆಂಗಳೂರು: ಕಬ್ಬಿಗೆ ನೀಡಲಾಗುವ ಮುಕ್ತ ಮತ್ತು ನ್ಯಾಯಸಮ್ಮತ ದರ (ಎಫ್ಆರ್‌ಪಿ)ವನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಬ್ಬು ಬೆಳೆಗಾರರು ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

Advertisement

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಸುದ್ದಿ ಕೇಳಿದೊಡನೆಯೇ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಹೋರಾಟಗಾರರ ಮನವೊಲಿಸಲು ಯತ್ನಿಸಿದರು. ಈ ವೇಳೆ ರೈತ ಮುಖಂಡರು, ಎಫ್ಆರ್‌ಪಿ ದರ ಪುನರ್‌ ಪರಿಶೀಲನೆ, ಕಳೆದ ವರ್ಷದ ಕಬ್ಬಿನ ಬಾಕಿ, ಕಬ್ಬನ್ನು ಫ‌ಸಲ್‌ ಭೀಮಾ ಯೋಜನೆ ವ್ಯಾಪ್ತಿಗೆ ಸೇರಿವುದು, ರಾಜ್ಯದಲ್ಲಿ ಉಂಟಾಗಿರುವ ಡಿಎಪಿ ಗೊಬ್ಬರ ಅಭಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಸಚಿವದ್ವಯರ ಬಳಿ ಹೇಳಿಕೊಂಡರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿದ ರೈತ ಮುಖಂಡರು, ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದರು.

ಮಂಗಳವಾರ ಬೆಳಗ್ಗೆ ನೂರಾರು ರೈತರು ಸಿಟಿ ರೈಲ್ವೇ ನಿಲ್ದಾಣದಿಂದ ವಿಧಾನಸೌಧದತ್ತ ಮೆರವಣಿಗೆಯಲ್ಲಿ ತೆರಳಿದ್ದಾರೆ. ಶೇಷಾದ್ರಿ ರಸ್ತೆಗೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಹೀಗಾಗಿ, ಫ್ರೀಡಂ ಪಾರ್ಕ್‌ ಬಳಿ ಮಾರ್ಗ ಮಧ್ಯೆ ಧರಣಿ ನಡೆಸಿದ ರೈತರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪರ ಸರಕಾರ
ರಾಜ್ಯ ಸರಕಾರ ರೈತರ ಪರವೇ ಇದೆ. ಈ ತಿಂಗಳೊಳಗೆ ಕಬ್ಬು ಅರೆಯುವುದನ್ನು ಆರಂಭಿಸುವಂತೆ ಇನ್ನು ಎರಡು ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಬ್ಬು ಬೆಳೆಗಾರರಿಗೆ ಭರವಸೆ ನೀಡಿದರು. ಫ್ರೀಡಂ ಪಾರ್ಕ್‌ ಬಳಿ ಮತ್ತು ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಶೀಘ್ರವೇ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ರೈತರು ಮನವಿ ಮಾಡಿದ್ದಾರೆ. ಈ ಕುರಿತು ಇನ್ನೆರಡು ದಿನದಲ್ಲಿ ಕಾರ್ಖಾನೆಗಳ ಆರಂಭದ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಕೃಷ್ಣೆಗಾಗಿ ಪಾದಯಾತ್ರೆ: ರಾಜಕೀಯ ಗಿಮಿಕ್‌ : ಸಚಿವ ಮುರಗೇಶ ನಿರಾಣಿ

Advertisement

ಕೇಂದ್ರ ಸರಕಾರಕ್ಕೆ ಪತ್ರ
ರೈತರ ಇತರೆ ಬೆಳೆಗಳಂತೆ ಕಬ್ಬನ್ನು ಕೂಡ ಫ‌ಸಲ್‌ ಭೀಮಾನ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಈ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದರು. ರಾಜ್ಯದಲ್ಲಿ ಉಂಟಾಗಿರುವ ಡಿಎಪಿ ಗೊಬ್ಬರ ಅಭಾವವನ್ನು ನೀಗಿಸಲಾಗುವುದು ಎಂದರು.

ಒಂದು ತಿಂಗಳ ಗಡುವು
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಸರಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದೆ ಇದ್ದರೆ ಮತ್ತೆ ಹೋರಾಟಕ್ಕೆ ಕರೆ ನೀಡುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಗಳು ಸಹನೆಯಿಂದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಿದ್ದಾರೆ. ಹೀಗಾಗಿ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರೆಯುವ ಭರವಸೆ ಇದೆ. ಸರಕಾರದ ನಿರ್ಧಾರವನ್ನು ಕಾದು ನೋಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next