Advertisement

ಮಳಿಗೆಗಳ ಮರು ಹರಾಜು

05:31 PM Aug 01, 2018 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸೂಪರ್‌ ಮಾರ್ಕೆಟ್‌ ಮಳಿಗೆಗಳ ಹರಾಜು
ಪ್ರಕ್ರಿಯೆ ಸಂದರ್ಭದಲ್ಲಿ ಈ ಹಿಂದೆ ಬಾಡಿಗೆ ಪಡೆದವರು, ನಗರಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ
ಮಾತಿನ ಚಕಮಕಿ, ವಾಗ್ವಾದ ನಡೆಯಿತು.

Advertisement

ಸೂಪರ್‌ ಮಾರ್ಕೆಟ್‌ನಲ್ಲಿರುವ ಒಟ್ಟು 32 ಮಳಿಗೆಗಳಲ್ಲಿ 2006-07ನೇ ಸಾಲಿನಲ್ಲಿ 13, 2012-13ನೇ ಸಾಲಿನಲ್ಲಿ
14 ಮಳಿಗೆಗಳನ್ನ ಬಹಿರಂಗ ಹರಾಜು ಮೂಲಕ ಬಾಡಿಗೆಗೆ ನೀಡಲಾಗಿದೆ.

2012-13ನೇ ಸಾಲಿನಲ್ಲಿ ತಿಂಗಳಿಗೆ 4800, 5,500 ರೂಪಾಯಿ ಬಾಡಿಗೆಯಂತೆ ಮಳಿಗೆ ಪಡೆಯಲಾಗಿತ್ತು. 23 ಸಾವಿರ ರೂಪಾಯಿ ಇಎಂಡಿ ಸಹ ಕಟ್ಟಲಾಗಿತ್ತು. ಆದರೆ, ಸೂಪರ್‌ ಮಾರ್ಕೆಟ್‌ನಲ್ಲಿ ರಸ್ತೆ, ವಿದ್ಯುತ್‌ ದೀಪ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯವೇ ಇಲ್ಲದ ಕಾರಣಕ್ಕೆ ಮಳಿಗೆಯಲ್ಲಿ ವ್ಯಾಪಾರ-ವಹಿವಾಟು ಪ್ರಾರಂಭಿಸಿರಲಿಲ್ಲ.
ಈಗ ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಮಳಿಗೆಗಳ ಮರು- ಹರಾಜು ನಡೆಸಲಾಗುತ್ತಿದೆ ಎಂದು ಈ ಹಿಂದೆ
ಮಳಿಗೆಯನ್ನ ಬಾಡಿಗೆ ಪಡೆದಿರುವ ಪಿ.ಸಿ. ಶ್ರೀನಿವಾಸ್‌, ಸತೀಶ್‌. ರವಿಕುಮಾರ್‌, ಚಂದ್ರಪ್ಪ ಇತರರು ಹರಾಜು ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಮಳಿಗೆಗಳನ್ನು ಬಾಡಿಗೆಗೆ ತೆಗೆದುಕೊಂಡ ಮೇಲೆ ಅನೇಕ ಬಾರಿ ಸೂಪರ್‌ ಮಾರ್ಕೆಟ್‌ನಲ್ಲಿ ಅಗತ್ಯ ಮೂಲಭೂತ
ಸೌಲಭ್ಯ ಒದಗಿಸಿ, ವ್ಯಾಪಾರ-ವಹಿವಾಟು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಮೂಲಭೂತ ಸೌಲಭ್ಯ ಒದಗಿಸಲೇ ಇಲ್ಲ. ಈಗ ಏಕಾಏಕಿ ಮರು ಹರಾಜು ಮಾಡಲಾಗುತ್ತಿದೆ. ಕಡೆಯ ಪಕ್ಷ ಒಂದು ನೋಟೀಸ್‌ ಸಹ ನೀಡಿಲ್ಲ. ಹಾಗಾಗಿ ಮರು ಹರಾಜು ಮಾಡಬಾರದು ಎಂದು ಬಾಡಿಗೆ ಪಡೆದವರು ಒತ್ತಾಯಿಸಿದರಲ್ಲದೆ, ನಗರಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು. 

10 ವರ್ಷಗಳ ಕಾಲ ಸೂಪರ್‌ ಮಾರ್ಕೆಟ್‌ನಲ್ಲಿ ರಸ್ತೆ ಇತರೆ ಮೂಲಭೂತ ಸೌಲಭ್ಯ ಒದಗಿಸಲು ಪರಿಪರಿಯಾಗಿ
ಮನವಿ ಮಾಡಿಕೊಂಡರೂ ಯಾವುದೇ ಸೌಲಭ್ಯ ಒದಗಿಸಲಿಲ್ಲ. ಈಗ ಮಾಜಿ ಶಾಸಕರೊಬ್ಬರಿಗೆ ಸೇರಿದ ಅಪಾರ್ಟ್‌ಮೆಂಟ್‌ ಪ್ರಾರಂಭವಾಗುತ್ತಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

Advertisement

ಸೂಪರ್‌ ಮಾರ್ಕೆಟ್‌ ಮಳಿಗೆಗಳ ಮರು ಹರಾಜು ಬಗ್ಗೆ ಪ್ರಕಟಣೆ ನೀಡಲಾಗಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ
ಮರು ಹರಾಜು ನಡೆಸಲಾಗುತ್ತಿದೆ. ಈಗಾಗಲೇ ಮಳಿಗೆಗಳನ್ನು ಬಾಡಿಗೆ ಪಡೆದವರಿಗೆ ನೋಟಿಸ್‌ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬೇಕಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಅಧಿಕಾರಿಗಳು ತಿಳಿಸಿದರು. ಮಧ್ಯಾಹ್ನ ಮರು ಹರಾಜು ಪ್ರಕ್ರಿಯೆ ನಡೆಯಿತು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಡೆಪ್ಯುಟಿ ಮೇಯರ್‌ ಕೆ. ಚಮನ್‌ಸಾಬ್‌, ಸದಸ್ಯರಾದ ಜೆ.ಎನ್‌. ಶ್ರೀನಿವಾಸ್‌, ಎಂ.
ಹಾಲೇಶ್‌, ಅನ್ನಪೂರ್ಣ ಬಸವರಾಜ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next