Advertisement

ಅದಾಲತ್‌ ಮೂಲಕ ಪುನರ್‌ ನೇಮಕ

01:06 AM Jun 22, 2019 | Lakshmi GovindaRaj |

ಬೆಂಗಳೂರು: ಸಣ್ಣಪುಟ್ಟ ಕಾರಣಗಳಿಗೆ ಚಾಲಕರು, ನಿರ್ವಾಹಕರನ್ನು ಸೇವೆಯಿಂದ ಅಮಾನತು ಹಾಗೂ ವಜಾ ಮಾಡಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಅದಾಲತ್‌ ನಡೆಸಿ, ಸೇವೆಗೆ ಪುನರ್‌ನೇಮಕ ಮಾಡಿಕೊಳ್ಳುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತಿ ಹಾಗೂ ಸಾಧಕರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಸಾರಿಗೆ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಚಾಲಕ ಮತ್ತು ನಿರ್ವಾಹಕರು ಮಾಡಿದ ತಪ್ಪಿಗೆ ಸಣ್ಣ ಪ್ರಮಾಣದ ಶಿಕ್ಷೆ ನೀಡಿ ಅವರಿಗೆ ಉದ್ಯೋಗದಲ್ಲಿ ಮುಂದುವರಿಯಲು ಅವಕಾಶ ನೀಡುವುದು ಈ ಅದಾಲತ್‌ ಉದ್ದೇಶವಾಗಿದೆ ಎಂದು ತಿಳಿಸಿದರು.

ನಿಗಮಗಳಲ್ಲಿ ಜರುಗುವ ಭ್ರಷ್ಟಾಚಾರದ ಬಗ್ಗೆಯೂ ಗಮನಕ್ಕೆ ಬಂದಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತಿದೆ. ಚಾಲಕ, ನಿರ್ವಾಹಕರು ಸೇರಿದಂತೆ ಕೆಳ ಹಂತದ ಸಿಬ್ಬಂದಿ ಸಂಸ್ಥೆಯ ಆಧಾರಸ್ತಂಭವಾಗಿದೆ ಎಂದರು.

ರಾಜ್ಯ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದೇನೆ. ಇಲಾಖೆಯ ನಾಲ್ಕು ನಿಗಮಗಳು 600 ಕೋಟಿ ರೂ. ನಷ್ಟದಲ್ಲಿದ್ದು, ಸರ್ಕಾರದ ನೆರವು ಅತ್ಯಗತ್ಯವಾಗಿದೆ. ಮುಖ್ಯಮಂತ್ರಿಗಳು ಇಲಾಖೆಯ ಪ್ರಗತಿ ಪರಿಶೀಲನೆಗೆ ಸಮಯ ಕೊಡುವುದಾಗಿ ಹೇಳಿದ್ದಾರೆ. ಆಗ ಸಿಬ್ಬಂದಿ ಬೇಡಿಕೆಯನ್ನು ಮುಖ್ಯಮಂತ್ರಿಗಳ ಎದುರು ಇಡಲಾಗುತ್ತದೆ ಎಂದು ಭರವಸೆ ನೀಡಿದರು.

ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಗುಡಿ, ಚರ್ಚ್‌ ಮಸೀದಿಗಳಿಂದ ಭಾರತ ಬದಲಾಗಲಿಲ್ಲ. ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಬದಲಾಗಿದೆ. ದೇಶದ ಸಂವಿಧಾನ ಬದಲಾಯಿಸುವುದು ತಾಯಿಯ ಗರ್ಭ ಬದಲಿಸಿದಂತೆ. ಅಂಬೇಡ್ಕರ್‌ ಕೇವಲ ದಲಿತರಿಗೆ ಮೀಸಲಾತಿ ಕಲ್ಪಿಸಿಲ್ಲ. ಎಲ್ಲ ಸಮುದಾಯಗಳಿಗೂ ಮೀಸಲಾತಿ ನೀಡಿದ್ದಾರೆ ಎಂದರು.

Advertisement

ಸಾರಿಗೆ ನಿಗಮಗಳ ವ್ಯಾಪ್ತಿಯ ಸಾಧಕ ಅಧಿಕಾರಿ ಹಾಗೂ ನೌಕರರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಸಾರಿಗೆ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಎಫ್.ಎಚ್‌.ಜಕ್ಕಪ್ಪ, ಬಸವ ಮರಿದೇವ ಸ್ವಾಮೀಜಿ, ಕೆಎಸ್‌ಆರ್‌ಟಿಸಿ ಕಾನೂನು ಅಧಿಕಾರಿ ಮನೋಹರ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಟಿ.ಎಸ್‌.ಲತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next