ವಿಜಯಪುರ: ಕೃಷ್ಣಾ ನೀರಿನ ಮರು ಹಂಚಿಕೆ ಕುರಿತು ಹೊಸ ನ್ಯಾಯಾಧೀಕರಣ ರಚನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ನಡುವಿನ ಸಭೆಯ ವರದಿಗಳು ಗುರುವಾರದ ಮಾಧ್ಯಮದಲ್ಲಿ ಪ್ರಕಟವಾಗಿವೆ. ಮಾಧ್ಯಮಗಳ ವರದಿಯಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹೇಳಿಕೆ ಗೊಂದಲದಿಂದ ಕೂಡಿದೆ. ರಾಜ್ಯ ಹಿತರಕ್ಷಣೆಗಾಗಿ ಕೂಡಲೇ ಸರ್ವಪಕ್ಷಗಳ ಸಭೆ ಕರೆಯುವಂತೆ ಜಲಸಂಪನ್ಮೂಲ ಖಾತೆ ನಿರ್ವಹಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರಿಕೆಗಳ ವರದಿಗಳ ನಕಲು ಪ್ರತಿ ಸಹಿತ ಪತ್ರ ಬರೆದಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ಕೃಷ್ಣಾ ನೀರಿನ ಬಳಕೆ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಹೊಂದಿರುವ ನಿಲುವಿನ ಕುರಿತು ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಕುರಿತು ನಮಗೆ ಅನ್ಯಾಯ ಆಗಿದೆ ಎಂದು ರಾಜ್ಯಗಳ ವಿಭಜನೆಯ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಪರಸ್ಪರ ಸುಪ್ರಿಂ ಕೋರ್ಟ್ ಹಾಗೂ ನ್ಯಾಯಾಧೀಕರಣದಲ್ಲಿ ದಾವೆ ಹೂಡಿವೆ. ರಾಜ್ಯ ಪುನರ್ ವಿಂಗಡನೆ ಕಾಯ್ದೆ ಸೆಕ್ಷನ 80ರ ಪ್ರಕಾರ ನ್ಯಾಯಾಧೀಕರಣ ಈಗಾಗಲೇ ನಿರ್ಣಯಿಸಿದಂತೆ ವಿಭಜನೆಗೊಂಡಿರುವ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳ ನಡುವಿನ ಆಂತರಿಕ ವ್ಯಾಜ್ಯ. ಈಗಾಗಲೇ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದೆ. ಸುಪ್ರೀಂಕೋರ್ಟನಲ್ಲಿ ಕೇಂದ್ರ ಸರ್ಕಾರವು ಕೂಡ ಇದೇ ನಿಲುವು ಹೊಂದಿದ್ದಾಗಿ ಅಫಿಡಿವೆಟ್ ಮೂಲಕ ಸಲ್ಲಿಸಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕೆ.ಕಲ್ಯಾಣ್ ಜೀವನದಲ್ಲಿ ಮತ್ತೆ ಅರಳಿದ ಪ್ರೇಮರಾಗ: ಮೋಸ ಮಾಡಿದ ಆರೋಪಿ ಸೆರೆ
ಆದ್ದರಿಂದ ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ನೀರಿನ ಮರು ಹಂಚಿಕೆ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಕರ್ನಾಟಕಕ್ಕೆ ಇದು ಅನ್ವಯಿಕೆ ಆಗದು. ಆದರೆ ಈ ಹಂತದಲ್ಲಿ ಕೇಂದ್ರದ ಮಂತ್ರಿ ಜಲಸಂಪನ್ಮೂಲ ಸಚಿವ ಗಜೇಂದ್ರ ಶೇಖಾವತ್ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ನಡೆಸಿರುವ ಸಭೆ ಕರ್ನಾಟಕ ಹಿತಾಸಕ್ತಿಗೆ ಧಕ್ಕೆಯಾಗುವ ಅನುಮಾನಕ್ಕೆ ಎಡೆಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರವಾಗಿರುವ ನ್ಯಾಯದ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕು. ಜೊತೆಗೆ ರಾಜ್ಯದ ನೀರಿನ ಹಿತಾಸಕ್ತಿ ಕಾಪಾಡಲು ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸ್ಟಾಕ್ ಹೋಮ್: ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ