Advertisement

EXAM ದಿನಾಂಕ, ಪಟ್ಟಿ ಬಿಡುಗಡೆಗೆ ಆರ್‌.ಡಿ. ಪಾಟೀಲನಿಂದಲೇ ದಿನ ನಿಗದಿ?

11:52 PM Nov 08, 2023 | Team Udayavani |

ಕಲಬುರಗಿ: ಅಚ್ಚರಿ ಸಂಗತಿ ಏನೆಂದರೆ ವಿವಿಧ ನೇಮಕಾತಿ ಪರೀಕ್ಷೆಗಳ ಅಕ್ರಮದ ರೂವಾರಿ ಆರ್‌.ಡಿ.ಪಾಟೀಲನೇ ಪರೀಕ್ಷೆ ದಿನಾಂಕ ಹಾಗೂ ಆಯ್ಕೆ ಪಟ್ಟಿಗೆ ಮುಹೂರ್ತ ನಿಗದಿ ಮಾಡುತ್ತಿದ್ದನಂತೆ!

Advertisement

ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಸಂಬಂಧಿಕರು ಹಾಗೂ ಹುದ್ದೆಗಳ ಆಯ್ಕೆ ಸಂಬಂಧ ಹಣ ನೀಡಿ ಅಕ್ರಮದಲ್ಲಿ ಸಿಕ್ಕಿ ಬೀಳದೆ ಹೊರ ಗುಳಿದಿರುವ ಅಭ್ಯರ್ಥಿಗಳ ಅಭಿಪ್ರಾಯ ಕ್ರೋಡೀ ಕರಿಸಿದರೆ ಈಚೆಗೆ ನಡೆದ ಎಫ್ಡಿಎ ಪರೀಕ್ಷೆ ಜೂನ್‌ ಅಥವಾ ಅಕ್ಟೋಬರ್‌ ಕೊನೆ ವಾರದಲ್ಲಿ ನಡೆಯುತ್ತದೆ. ಜತೆಗೆ ಪೊಲೀಸ್‌ ಪೇದೆಗಳ ನೇಮಕಾತಿ ಪರೀಕ್ಷೆಯೂ ನಡೆಯುತ್ತದೆ ಎಂದು ನಿಖರವಾಗಿ ಹೇಳಿದ್ದನಂತೆ.

ಕಳೆದ ದಶಕದ ಅವಧಿಯಿಂದಲೂ ವಿವಿಧ ಪರೀಕ್ಷೆಗಳಲ್ಲಿ ಅಕ್ರಮ ಮಾಡುವುದನ್ನೇ ದಂಧೆ ಮಾಡಿಕೊಳ್ಳುತ್ತಾ ಬಂದಿರುವ ಆರ್‌. ಡಿ. ಪಾಟೀಲ್‌ ಸಲೀಸಾಗಿ ಅಕ್ರಮ ಎಸಗಿ ಸುಲಭವಾಗಿ ಬಚಾವ್‌ ಆಗಿದ್ದನ್ನು ನೋಡಿದರೆ ಯಾವ ಕೆಲಸ ಯಾವಾಗ ಮಾಡಬೇಕು ಎಂಬುದನ್ನು ಸಂಪೂರ್ಣ ಅರಿತಿದ್ದಾನೆಂಬುದು ಗೊತ್ತಾಗುತ್ತದೆ. ಪರೀಕ್ಷೆ ದಿನಾಂಕದಿಂದ ಹಿಡಿದು ಇಂತಹ ಅಭ್ಯರ್ಥಿ ಇಂತಹ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯುವಂತಾಗಬೇಕು. ಪ್ರಶ್ನೆಗಳು ಪರೀಕ್ಷೆ ಮುಂಚೆಯೇ ಕೈ ಸೇರುವುದು ಹಾಗೂ ಫ‌ಲಿತಾಂಶ ಪ್ರಕಟ ಜತೆಗೆ ಅಂತಿಮ ಪಟ್ಟಿ ಹೊರ ಬೀಳುವ ಮುನ್ನ ಆರ್‌.ಡಿ.ಪಾಟೀಲ್‌ಗೆ ಗೊತ್ತಾಗುತ್ತಿತ್ತು ಎಂದರೆ ಆತನೇ ಮುಹೂರ್ತ ನಿಗದಿ ಮಾಡುತ್ತಿದ್ದನೇ ಎಂಬ ಅನುಮಾನ ಕಾಡುತ್ತಿದೆ. ಒಟ್ಟಾರೆ ಕೆಪಿಎಸ್ಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಿತ ಇತರ ನೇಮಕಾತಿ ಸಂಸ್ಥೆಗಳ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಅರಿತು ಇಡೀ ವ್ಯವಸ್ಥೆಯನ್ನೇ ತನ್ನ ಅಂಗೈ ಅಳತೆಗೆ ತೆಗೆದುಕೊಂಡ ಪರಿಣಾಮವೇ ಆತನಿಗೆ ಎಲ್ಲ ಕೆಲಸ ಸರಳವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಲು ನಿಂತು ಹಣ ಕೊಟ್ಟವರು
ಪಿಎಸ್‌ಐ ಹಗರಣದಲ್ಲಿ ಜಾಮೀನಿನ ಮೇಲೆ ಹೊರ ಬಂದು ಕಳೆದ ವಿಧಾನಸಭೆಗೆ ಸ್ಪರ್ಧಿಸಿದ್ದ ಆರ್‌.ಡಿ.ಪಾಟೀಲ್‌ ಪರಾಭವಗೊಂಡ ಬಳಿಕ ಮನೆಯಲ್ಲೇ ಕುಳಿತಿದ್ದರೂ ಹಿಂದೆ ಮಾಡಿದ ಎಲ್ಲ ದಂಧೆಗಳು ಮತ್ತೆ ಆಕರ್ಷಿತವಾದವು. ಆರ್‌.ಡಿ.ಪಾಟೀಲ್‌ ಅಕ್ರಮ ನೇಮಕಾತಿ ದಂಧೆಗೆ ಇಳಿದಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸ್‌ ಪೇದೆ, ಎಫ್ಡಿಎಗೆ ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಂದ ಹಿಡಿದು ಹಲವರು ಆರ್‌.ಡಿ. ಪಾಟೀಲ್‌ ಮನೆ ಎದುರು ಕ್ಯೂನಲ್ಲಿ ನಿಂತು ಹಣ ನೀಡಿ ಬಂದಿದ್ದಾರೆ ಎನ್ನಲಾಗಿದೆ.

ಸಿಕ್ಕಿ ಬಿದ್ದರೆ ಏನು ಮಾಡಬೇಕೆಂದು
ಮೊದಲೇ ನಿರ್ಧರಿಸುತ್ತಿದ್ದ ಕಿಲಾಡಿ
ಪಿಎಸ್‌ಐ ಹಗರಣ ಬಯಲಿಗೆ ಬರುತ್ತಿ ದ್ದಂತೆ ಹತ್ತು ದಿನಗಳ ಕಾಲ ನಾಪತ್ತೆಯಾಗಿ ಹನ್ನೊಂದನೆ ದಿನಕ್ಕೆ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದ ಆರ್‌.ಡಿ.ಪಾಟೀಲ್‌ ಎಫ್ಡಿಎ ಅಕ್ರಮದ ಪ್ರಕರಣದಲ್ಲೂ 11ನೇ ದಿನಕ್ಕೆ ಜಾಮೀನು ಮೇಲೆ ಹೊರ ಬರಬೇಕು ಇಲ್ಲವೇ ಶರಣಾಗತಿ ಆಗಬೇಕೆಂದು ನಿರ್ಧರಿಸಿದ್ದನಂತೆ. ಆದರೆ ಜಾಮೀನು ಅರ್ಜಿ ವಿಚಾರಣೆ ಮುಂಚೆಯೇ ನಗರದಲ್ಲಿದ್ದರೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಎಂಬ ವರದಿ ಬಹಿರಂಗಗೊಂಡು ತನಗೆ ಎಲ್ಲಿ ಕಂಟಕವಾಗುತ್ತದೆ ಎಂದು ತಿಳಿದು ಪರಾರಿಯಾಗಿದ್ದಾನೆ. ಎಫ್ಡಿಎ ಅಕ್ರಮ ಬಯಲಿಗೆ ಬಂದರೆ ಮೊದಲನೇ ದಿನ ಏನು ಕೆಲಸ ಮಾಡಬೇಕು, ಪರೀಕ್ಷೆ ನಡೆಯುವ ದಿನ ತಾನೆಲ್ಲಿ ಇರಬೇಕು? ಜತೆಗೆ ತಮ್ಮ ವಕೀಲರು ಜಾಮೀನು ಸಹಿತ ಇತರ ಯಾವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂಬುದನ್ನೂ ಆರ್‌.ಡಿ.ಪಾಟೀಲ್‌ ಮೊದಲೇ ನಿರ್ಧರಿಸುತ್ತಿದ್ದನಂತೆ. ಅಲ್ಲದೇ ಕಸ್ಟಡಿಯಲ್ಲಿದ್ದಾಗ ಏನು ಮಾಡಬೇಕು ಎಂಬುದನ್ನೂ ನಿರ್ಧರಿಸಿದ್ದನಂತೆ!

Advertisement

-ಹಣಮಂತರಾವ್‌ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next