ಬೆಂಗಳೂರು: ಭಾರತದಲ್ಲಿ ಹಾಲಿನ ಉತ್ಪಾದನೆಗಿಂತಲೂ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಯುಎಸ್‌ಎ ಒಕ್ಕೂಟಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ, ಹಣ ಮಾಡಲು ಹವಣಿಸುತ್ತಿವೆ ಎಂದು ಗುಜರಾತ್‌ನ ಆನಂದ್ ಡೈರಿ ಮುಖ್ಯಸ್ಥ ಜೈನ್ ಮೆಹ್ತಾ ಆರೋಪಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಶನಿವಾರ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ (ಆರ್‌ಸಿಇಪಿ) ಒಪ್ಪಂದ ಕುರಿತ ವಿಚಾರ ಸಂಕಿರಣದಲ್ಲಿ “ಹಾಲಿನ ಉತ್ಪನ್ನದ ಮೇಲೆ ಆರ್‌ಸಿಇಪಿ ಪರಿಣಾಮ’ ಕುರಿತು ಮಾತನಾಡಿದರು.
ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಂತಹ ಪುಟ್ಟ ದೇಶಗಳು ಅಲ್ಲಿನ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಡೈರಿ ಉತ್ಪನ್ನವನ್ನು ಉತ್ಪಾದಿಸುತ್ತಿವೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ ಮೂಲಕ ಭಾರತದ ಮಾರುಕಟ್ಟೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ರೈತರ ಹಿತಕ್ಕೆ ಮಾರಕವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತಪ್ಪು ಮಾಹಿತಿಗಳನ್ನು ನೀಡುತ್ತಿದೆ ಎಂದು ದೂರಿದರು.
ಜಿಡಿಪಿಯಲ್ಲಿ ಕೃಷಿ ಪಾಲು ಶೇ.18: ದೇಶದ ಜಿಡಿಪಿಗೆ ಶೇ.18ರಷ್ಟು ಭಾಗ ಕೃಷಿಯಿಂದ ಸಂದಾಯವಾಗುತ್ತದೆ. ಇದರಲ್ಲಿ ಶೇ.32 ಭಾಗ ಹೈನುಗಾರಿಕೆಯದ್ದಾಗಿದೆ. ಭಾರತದಲ್ಲಿ ಪ್ರತಿ ವರ್ಷ ಶೇ.2ರಿಂದ 3ರಷ್ಟು ಹಾಲು ಉತ್ಪಾದನೆ ಅಧಿಕವಾಗುತ್ತಿದೆ. ಮುಂದಿನ 50 ವರ್ಷದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಭಾರತದಲ್ಲಿ 13 ದಶಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು. ಯುಎಸ್‌ಎ ಸೇರಿದಂತೆ ಐರೋಪ್ಯ ಒಕ್ಕೂಟಗಳ ಕಣ್ಣು ಭಾರತದ ಮೇಲೆ ಬಿದ್ದಿದೆ. ಭಾರತದ ಕೃಷಿ ಕ್ಷೇತ್ರ ಪ್ರವೇಶಿಸಲು ಎದುರು ನೋಡುತ್ತಿವೆ.
ಯಾವುದೇ ಕಾರಣಕ್ಕೂ ಈ ದೇಶದ ರೈತರು ಇದಕ್ಕೆ ಅವಕಾಶ ನೀಡಬಾರದು. ರೈತಪರ ಹೋರಾಟದ ವಿಚಾರದಲ್ಲಿ ಕರ್ನಾಟಕ ರೈತರು ದೇಶ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ರೈತರ ಸಮಸ್ಯೆಗೆ ಸಂಬಂಧಿಸಿದ ವರದಿ ನೀಡಲು ನಮ್ಮ ಸರ್ಕಾರ ಸುಮಾರು 15 ವರ್ಷ ತೆಗೆದು ಕೊಳ್ಳುತ್ತದೆ. ಆದರೆ, ಕೆಲವು ಮಸೂದೆಯನ್ನು ಚರ್ಚೆ ಮಾಡದೆ ಒಂದು ನಿಮಿಷ ದಲ್ಲಿ ಅಂಗೀಕಾರ ಮಾಡುತ್ತದೆ. ಇಂತಹ ಸರ್ಕಾರ ಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ.
ಸ್ವಾಮಿನಾಥನ್ ವರದಿ ಅಂಗೀಕಾರವಾಗದ ಹೊರತು ರೈತರ ಸಮಸ್ಯೆ ಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದರು. ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದ ವಾಗುವಾಗ ರೈತರಿಗೂ ಆ ಬಗ್ಗೆ ಮನವರಿಕೆ ಮಾಡಬೇಕು. ಆದರೆ, ನಮ್ಮನ್ನಾಳುವ ಯಾವ ಸರ್ಕಾರಗಳೂ ಕೂಡ ಆ ಕೆಲಸ ಮಾಡುತ್ತಿಲ್ಲ. ರೈತರಿಗೆ ಸರ್ಕಾರ ಸಬ್ಸಿಡಿ ನೀಡುವ ಬದಲು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಆರ್ಥಿಕ ತಜ್ಞ ದೇವೇಂದ್ರ ಶರ್ಮಾ, ಹಿರಿಯ ರಂಗಕರ್ಮಿ ಪ್ರಸನ್ನ, ರೈತ ಮುಖಂಡ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಅಡಕೆ ಬೆಳೆಗಾರರ ಮೇಲೆ ತೂಗುಗತ್ತಿ: “ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ’ಕ್ಕೆ ಭಾರತ ಸಹಿ ಹಾಕಿದರೆ ಅದು ಅಡಕೆ ಬೆಳೆಗಾರರ ಮೇಲೂ ಪ್ರಭಾವ ಬೀರಲಿದೆ. ಈಗಾಗಲೇ ಚೀನಾ ದೇಶ ಭಾರತದ ಮಾರುಕಟ್ಟೆ ಪ್ರವೇಶಿಸಲು ಹವಣಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ನೇಪಾಳ, ಶ್ರೀಲಂಕಾ ಮೂಲಕ ಭಾರತದ ಮಾರುಕಟ್ಟೆಗೆ ಕಳಪೆ ಅಡಕೆ ನೂಕಲು ಪ್ರಯತ್ನಿಸುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಕರ್ನಾಟಕ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಅರಗ ಜ್ಞಾನೇಂದ್ರ ದೂರಿದರು. ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ಅಡಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತಿದೆ ಎಂದು ಸುಳ್ಳು ಪ್ರಮಾಣ ಪತ್ರ ಸೃಷ್ಟಿಸಿಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಹೀಗಾಗಿ, ಕೋರ್ಟ್ ತೂಗುಗತ್ತಿ ಅಡಕೆ ಬೆಳೆಗಾರರ ಮೇಲೆ ಇದೆ ಎಂದರು.
ಕೇಂದ್ರ ಸರ್ಕಾರದ ಅಸ್ತಿತ್ವ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೈಗಾರಿಕೋದ್ಯಮಿಗಳ ಹಿತ ಕಾಯುವಲ್ಲಿ ನಿರತವಾಗಿದೆ.
-ತೀರ್ಥ ಮಲ್ಲೇಶ್, ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ