Advertisement
ಚೀನ ಸರಕುಗಳು ದಂಡಿಯಾಗಿ ಭಾರತದ ಮಾರುಕಟ್ಟೆಗೆ ಬೀಳುವುದರೊಂದಿಗೆ ಇಲ್ಲಿನ ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂಬ ಹಿನ್ನೆಲೆಯಲ್ಲಿ ಭಾರತ ಕೆಲವೊಂದು ಹೊಸ ಬೇಡಿಕೆಗಳನ್ನು ಮುಂದಿಟ್ಟಿದ್ದು ಒಪ್ಪಂದ ಪ್ರಕ್ರಿಯೆ ಮುಂದೆ ಹೋಗಲಿದೆ ಎನ್ನಲಾಗಿದೆ.
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ಸಮ್ಮೇಳನದಲ್ಲಿ ಆರ್‌ಸಿಇಪಿ ಕುರಿತು 10 ದೇಶಗಳು ಬಹುತೇಕ ಅಂತಿಮ ಒಪ್ಪಂದಕ್ಕೆ ಬರಲಿವೆ ಎಂದು ಹೇಳಲಾಗಿತ್ತು. ಆದರೆ ಭಾರತ ಕೆಲವೊಂದು ಪ್ರಶ್ನೆಗಳನ್ನು, ಬೇಡಿಕೆಗಳನ್ನು ಕೊನೆ ಕ್ಷಣದಲ್ಲಿ ಇಟ್ಟಿದ್ದರಿಂದ ಒಪ್ಪಂದ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಒಪ್ಪಂದದ ಎಲ್ಲ 20 ಅಧ್ಯಾಯಗಳು ಪೂರ್ಣಗೊಂಡಿವೆ. ಆದರೆ, ಒಂದು ದೇಶ ಮಾತ್ರ ನಿರ್ಧಾರಕ್ಕೆ ಬರಬೇಕಿದೆ. ಅದು ಭಾರತವೆಂದು ನಂಬಲಾಗಿದೆ ಎಂದು ಒಪ್ಪಂದದ ಬಗ್ಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆಸಿಯಾನ್ ರಾಷ್ಟ್ರದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ಆರ್‌ಸಿಇಪಿ ಒಪ್ಪಂದವನ್ನು ಪ್ರಸ್ತಾವಿಸದಿದ್ದರೂ, ಎಲ್ಲ ದೇಶಗಳ ಮಾರುಕಟ್ಟೆಗಳ ಸಂಪರ್ಕ ಅರ್ಥವತ್ತಾಗಿ, ಸಮಾಂತರವಾಗಿರಬೇಕು ಎಂಬರ್ಥದ ಮಾತುಗಳನ್ನು ಆಡಿದ್ದರು. ಆದಾಗ್ಯೂ ಈ ವರ್ಷದೊಳಗೆ ಒಪ್ಪಂದದ ವಿಚಾರಗಳ ಬಗ್ಗೆ ನಾವು ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಥೈಲೆಂಡ್ ಪ್ರಧಾನಿ ಹೇಳಿದ್ದಾರೆ.
Related Articles
ಭಾರತದಿಂದ ನ್ಯೂಜಿಲೆಂಡ್‌ವರೆಗೆ 16 ದೇಶಗಳು ಆರ್‌ಸಿಇಪಿ ಒಪ್ಪಂದದಲ್ಲಿವೆ. ಪಾಶ್ವಿಮಾತ್ಯ ರಾಷ್ಟ್ರಗಳ ಹೊರತಾದ ಮಾರಾಟ ಒಪ್ಪಂದ ಇದಾಗಿದ್ದು ಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ಚೀನ-ಅಮೆರಿಕ ವ್ಯಾಪಾರ ಯುದ್ಧದಿಂದ ಹೆಚ್ಚಿನ ಸಮಸ್ಯೆಗಳಾಗುವುದನ್ನು ತಪ್ಪಿಸಲು ಈ ಒಪ್ಪಂದ ಪೂರಕವಾಗಲಿದೆ ಎಂದು ಹೇಳಲಾಗಿತ್ತು. ಈ ಒಪ್ಪಂದದಲ್ಲಿ ಚೀನ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಜತೆಗೆ ಒಪ್ಪಂದ ಅನ್ವಯ ದೇಶಗಳ ನಡುವೆ ಶೇ.90ರಷ್ಟು ತೆರಿಗೆ ವಿನಾಯಿತಿಯಲ್ಲಿ ಸರಕು ಮಾರಾಟ ನಡೆಯಲಿದೆ.
Advertisement
ಸದ್ಯ ಚೀನದ ಸರಕುಗಳ ಮೇಲೆ ಶೇ.70-80ರಷ್ಟು ತೆರಿಗೆ ಇದೆ. ಇನ್ನು ಆರ್‌ಸಿಇಪಿ ಒಪ್ಪಂದಕ್ಕೆ ಚೀನ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ತನ್ನ ಸರಕಗಳನ್ನು ಬೇಕಾದಷ್ಟು ರಫ್ತುಮಾಡುವ ಉತ್ಸಾಹದಲ್ಲಿದೆ. ಇದರಿಂದ ತನ್ನ ಆರ್ಥಿಕತೆ ಇನ್ನಷ್ಟು ಬಲಿಷ್ಠವಾಗಬಹುದು ಎಂಬ ಲೆಕ್ಕಾಚಾರವನ್ನು ಅದು ಹೊಂದಿದೆ.