Advertisement

Retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

05:56 PM Jan 08, 2025 | Team Udayavani |

ನವದೆಹಲಿ: ಕ್ರಿಕೆಟ್‌ ಲೋಕದ ಖ್ಯಾತ ಬ್ಯಾಟರ್‌, ಸ್ಫೋಟಕ ಆಟಗಾರ, ಮಾರ್ಟಿನ್ ಗಪ್ಟಿಲ್ (Martin Guptill) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ (ಜ.8ರಂದು) ನಿವೃತ್ತಿ ಘೋಷಿಸಿದ್ದಾರೆ.

Advertisement

38ರ ವಯಸ್ಸಿನಲ್ಲಿ ತಮ್ಮ 14 ವರ್ಷಗಳ ಸುದೀರ್ಘ ಕ್ರಿಕೆಟ್‌ ಬದುಕಿಗೆ ಗಪ್ಟಿಲ್‌ ನಿವೃತ್ತಿ ಘೋಷಿಸಿದ್ದಾರೆ.

2009ರ ಜನವರಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಮೂಲಕ ಅವರು ತಂಡಕ್ಕೆ ಪದಾರ್ಪಣೆ‌ ಮಾಡಿದ್ದರು. ಈಡನ್‌ ಪಾರ್ಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಗಪ್ಟಿಲ್‌ ಶತಕವನ್ನು ಸಿಡಿಸಿದ್ದರು. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಕಿವೀಸ್‌ ಆಟಗಾರನಾಗಿ ಗಪ್ಟಿಲ್‌ ಹೊರಹೊಮ್ಮಿದ್ದರು. ಆ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಅವರು ಟಿ-20 ತಂಡದಲ್ಲೂ ಸ್ಥಾನ ಪಡೆದಿದ್ದರು.

ಗಪ್ಟಿಲ್ ಕೊನೆಯದಾಗಿ 2022 ರಲ್ಲಿ ನ್ಯೂಜಿಲೆಂಡ್‌ ಪರ ಆಡಿದ್ದರು. ಓಪನರ್‌ ಆಗಿ ತಂಡದಲ್ಲಿ ಗುರುತಿಸಿಕೊಂಡಿದ್ದ ಅವರು ಮೂರು ಮಾದರಿಯಲ್ಲಿ 350ಕ್ಕೂ ಹೆಚ್ಚಿನ ಪಂದ್ಯದಲ್ಲಿ ಆಡಿ ತಂಡವನ್ನು ಪ್ರತಿನಿಧಿಸಿದ್ದಾರೆ.

Advertisement

198 ಏಕದಿನ, 122 ಟಿ-20 ಮತ್ತು 47 ಟೆಸ್ಟ್‌ಗಳನ್ನು ಪಂದ್ಯಗಳನ್ನು ಆಡಿದ್ದಾರೆ. ಗಪ್ಟಿಲ್ T20ಯಲ್ಲಿ 3531 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಅತೀ ಹೆಚ್ಚು ಟಿ-20 ರನ್‌ ಗಳಿಸಿದ ಆಟಗಾರನಾಗಿದ್ದಾರೆ.

ಇದಲ್ಲದೆ ಕ್ರಿಕೆಟ್‌ ಬದುಕಿನಲ್ಲಿ ಗಪ್ಟಿಲ್‌ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.  ವೆಲ್ಲಿಂಗ್‌ಟನ್‌ನಲ್ಲಿ ನಡೆದ 2015ರ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಮೋಘ 237 ರನ್‌ ಗಳಿಸಿದ್ದರು. ಇದು ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಮತ್ತು ನ್ಯೂಜಿಲೆಂಡ್‌ನ ಮೊದಲನೆಯ ದ್ವಿಶತಕವಾಗಿತ್ತು.

2013ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 189 ಮತ್ತು 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 180 ರನ್ ಗಳಿಸಿದ್ದು ಕೂಡ ಅವರ ಅವಿಸ್ಮರಣೀಯ ಇನ್ನಿಂಗ್ಸ್‌ ಆಗಿದೆ.

ಟಿ-20ಯಲ್ಲಿ ಗಪ್ಟಿಲ್ ಎರಡು ಸ್ಮರಣೀಯ ಶತಕಗಳನ್ನು ಸಿಡಿಸಿದ್ದಾರೆ.  2012ರಲ್ಲಿ ಈಸ್ಟ್ ಲಂಡನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 69 ಎಸೆತಗಳಲ್ಲಿ ಔಟಾಗದೆ 101 ರನ್‌ ಗಳಿಸಿದ್ದರು.  2018 ರಲ್ಲಿ ಆಕ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 54 ಎಸೆತಗಳಲ್ಲಿ 105 ರನ್ ಸಿಡಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ ನಲ್ಲಿ ಗಪ್ಟಿಲ್ 47 ಪಂದ್ಯಗಳಲ್ಲಿ 2,586 ರನ್ ಗಳಿಸಿದ್ದಾರೆ. 2010ರಲ್ಲಿ ಬಾಂಗ್ಲಾದೇಶ ವಿರುದ್ಧ 189, 2011 ರಲ್ಲಿ ಜಿಂಬಾಬ್ವೆ ವಿರುದ್ಧ 109 ಮತ್ತು 2015 ರಲ್ಲಿ ಶ್ರೀಲಂಕಾ ವಿರುದ್ಧ 156 ರನ್‌ ಗಳಿಸಿ ಒಟ್ಟು ಮೂರು ಶತಕಗಳನ್ನು ಸಿಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next