ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು 17ನೇ ಸೀಸನ್ ನ ಐಪಿಎಲ್ ನಲ್ಲಿ ಮಿಂಚುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿ ತಂಡದ ಬೆನ್ನೆಲುಬಾಗಿ ನಿಲ್ಲುವ ವಿರಾಟ್, ಇದೀಗ ಟೀಕೆಗೂ ಒಳಗಾಗಿದ್ದಾರೆ.
ಶನಿವಾರ, ಕೊಹ್ಲಿ ಅಜೇಯ 113 ರನ್ ಗಳಿಸಿದರು. ಇದು ಟಿ20 ಲೀಗ್‌ನ ಒಂದು ಇನ್ನಿಂಗ್ ನಲ್ಲಿ ಅವರ ಅತ್ಯುತ್ತಮ ಗಳಿಕೆಯಾಗಿದೆ. ಅಭಿಮಾನಿಗಳು ಮತ್ತು ಪಂಡಿತರು ಕೊಹ್ಲಿಯ ಸ್ಟ್ರೈಕ್-ರೇಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ಕ್ರಿಕೆಟಿಗ ಜುನೈದ್ ಖಾನ್ ‘ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ ಶತಕ’ ಗಳಿಸಿದ್ದಕ್ಕಾಗಿ ಭಾರತದ ತಾರಾ ಆಟಗಾರನನ್ನು ಟ್ರೋಲ್ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 72 ಎಸೆತಗಳಲ್ಲಿ 113 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಟಿ20 ಲೀಗ್‌ನಲ್ಲಿ ಅವರ ಜಂಟಿ-ಅತ್ಯುತ್ತಮ ಸ್ಕೋರ್ ಆಗಿದೆ, 2016 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧವೂ 113 ರನ್ ದಾಖಲಿಸಿದ್ದಾರೆ.
ಆದರೆ, ವಿರಾಟ್ ಶತಕವು ಐಪಿಎಲ್ ನ ನಿಧಾನದ ಶತಕದ ಪಟ್ಟಿಯಲ್ಲಿಯೂ ಜಂಟಿಯಾಗಿ ಮೊದಲ ಸ್ಥಾನದಲ್ಲಿದೆ. 2009ರಲ್ಲಿ ಗಳಿಸಿದ 67 ಎಸೆತಗಳಲ್ಲಿ ಮನೀಷ್ ಪಾಂಡೆ ಶತಕ ಗಳಿಸಿದ್ದರು.
ವಿರಾಟ್ ಶತಕವನ್ನು ಟೀಕೆ ಮಾಡಿದ ಜುನೈದ್ ಖಾನ್, ತನ್ನ ಎಕ್ಸ್ ಖಾತೆಯಲ್ಲಿ “ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ 100 ರನ್ ಗಳಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.
ಇನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ ಕೊಹ್ಲಿ, ಪಿಚ್ ನಲ್ಲಿ ಸ್ಕೋರ್ ಮಾಡುವುದು ಕಠಿಣವೆಂದು ಒಪ್ಪಿಕೊಂಡರು. ಇದು ಹೊರಗಿನಿಂದ ಸಮತಟ್ಟಾದ ಮೇಲ್ಮೈಯಂತೆ ಕಂಡರೂ, ವಾಸ್ತವದಲ್ಲಿ ಹಾಗಿರಲಿಲ್ಲ ಎಂದು ವಿರಾಟ್ ಹೇಳಿದರು.