ಬೆಂಗಳೂರು: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಎಲ್ಲಾ ಹತ್ತು ಪ್ರಾಂಚೈಸಿಗಳು ಸಿದ್ದತೆ ನಡೆಸುತ್ತಿದೆ. ರಾಷ್ಟ್ರೀಯ ಆಟಗಾರರು ಸದ್ಯ ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿದ್ದಾರೆ. ಉಳಿದ ಆಟಗಾರರು ಈಗಾಗಲೇ ಫ್ರಾಂಚೈಸಿಗಳ ಕ್ಯಾಂಪ್ ಸೇರಿ ಅಭ್ಯಾಸ ನಡೆಸುತ್ತಿದ್ದಾರೆ.
ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದೆ. ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯವು ಗುರುವಾರ ಧರ್ಮಶಾಲಾದಲ್ಲಿ ಆರಂಭವಾಗಿದೆ. ಈ ಪಂದ್ಯದ ಬಳಿಕ ಆಟಗಾರರು ಐಪಿಎಲ್ ಕ್ಯಾಂಪ್ ಸೇರಲಿದ್ದಾರೆ.
ಮಾರ್ಚ್ 22ರಂದು ಐಪಿಎಲ್ 17ನೇ ಸೀಸನ್ ಆರಂಭವಾಗಲಿದೆ. ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಚೆನ್ನೈನಲ್ಲಿ ನಡೆಯಲಿದೆ.
ಕೂಟಕ್ಕೆ ಸಿದ್ದತೆ ನಡೆಸುತ್ತಿರುವ ಆರ್ ಸಿಬಿ ಫ್ರಾಂಚೈಸಿಗೆ ಇದೀಗ ಆಘಾತವೊಂದು ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಅವರು ಗಾಯಗೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾದ ರಜತ್ ಪಾಟಿದಾರ್ ಅವರು ಗಾಯಗೊಂಡಿರುವುದು ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 6ರಂದು ಟೀಮ್ ಇಂಡಿಯಾದ ಅಭ್ಯಾಸದ ಅವಧಿಯಲ್ಲಿ ರಜತ್ ಪಾಟಿದಾರ್ ಅವರ ಎಡ ಪಾದದ ಪಾದಕ್ಕೆ ಪೆಟ್ಟಾಯಿತು. ಅವರು ಇಂದು ಬೆಳಿಗ್ಗೆ ನೋವಿನಿಂದ ಬಳಲುತ್ತಿದ್ದರು ಮತ್ತು 5 ನೇ ಟೆಸ್ಟ್ ಗೆ ಆಯ್ಕೆಗೆ ಲಭ್ಯರಿರಲಿಲ್ಲ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಪಾಟಿದಾರ್ ಅವರ ಗಾಯಗ ತೀವ್ರತೆಯ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಐಪಿಎಲ್ ಆರಂಭಕ್ಕೆ ಇನ್ನು ಎರಡೇ ವಾರಗಳು ಇರುವ ಕಾರಣ ರಜತ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.