Advertisement

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

12:44 AM Apr 23, 2021 | Team Udayavani |

ಮುಂಬಯಿ: ಎಡಗೈ ಆಟಗಾರ ದೇವದತ್ತ ಪಡಿಕ್ಕಲ್‌ ಅವರ ಅತ್ಯಾಕರ್ಷಕ ಸೆಂಚುರಿ, ಅವರು ನಾಯಕ ವಿರಾಟ್‌ ಕೊಹ್ಲಿ ಜತೆ ನಡೆಸಿದ ಅಜೇಯ ಜತೆಯಾಟದ ಸಾಹಸದಿಂದ ರಾಯಲ್‌ ಚಾಲೆಂಜರ್ ಬೆಂಗಳೂರು ತನ್ನ 200ನೇ ಐಪಿಎಲ್‌ ಪಂದ್ಯದಲ್ಲಿ ಭರ್ಜರಿ ಜಯಭೇರಿ ಮೊಳಗಿಸಿದೆ. ಗುರುವಾರದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಪ್ರಸಕ್ತ ಐಪಿಎಲ್‌ನ ಎಲ್ಲ 4 ಪಂದ್ಯಗಳನ್ನು ಗೆದ್ದು ಮೆರೆದಾಡಿದೆ.

Advertisement

“ವಾಂಖೇಡೆ’ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಆರಂಭಿಕ ಕುಸಿತಕ್ಕೆ ಸಿಲುಕಿಯೂ ಚೇತರಿಸಿಕೊಂಡು  9 ವಿಕೆಟಿಗೆ 177 ರನ್‌ ಗಳಿಸಿತು.

ಆರ್‌ಸಿಬಿ ಕೇವಲ 16.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 181 ರನ್‌ ಬಾರಿಸಿತು. ಆಗ ಪಡಿಕ್ಕಲ್‌ 101 ರನ್‌ ಮಾಡಿ ಅಜೇಯರಾಗಿದ್ದರು. ಇದು ಪಡಿಕ್ಕಲ್‌ ಅವರ ಮೊದಲ ಐಪಿಎಲ್‌ ಸೆಂಚುರಿ. ಕೇವಲ 52 ಎಸೆತ ಎದುರಿಸಿದ ಅವರು 11 ಬೌಂಡರಿ, 6 ಸಿಕ್ಸರ್‌ ಸಿಡಿಸಿದರು. ಕೊಹ್ಲಿ 47 ಎಸೆತ ಎದುರಿಸಿ 72 ರನ್‌ ಹೊಡೆದರು. ಸಿಡಿಸಿದ್ದು 6 ಫೋರ್‌ ಹಾಗೂ 3 ಸಿಕ್ಸರ್‌.

ಪಡಿಕ್ಕಲ್‌-ಕೊಹ್ಲಿ ಮೊದಲ ವಿಕೆಟಿಗೆ ಅತ್ಯಧಿಕ ರನ್‌ ಬಾರಿಸಿದ ಆರ್‌ಸಿಬಿ ಜೋಡಿ ಎನಿಸಿತು. ಹಾಗೆಯೇ ಪಡಿಕ್ಕಲ್‌ ಐಪಿಎಲ್‌ನಲ್ಲಿ ಶತಕ ಬಾರಿಸಿದ ಭಾರತದ 3ನೇ “ಅನ್‌ ಕ್ಯಾಪ್ಡ್’ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಮನೀಷ್‌ ಪಾಂಡೆ ಮತ್ತು ಪಾಲ್‌ ವಲ್ತಾಟಿ.

ರಾಜಸ್ಥಾನ್‌ ಕುಸಿತ :

Advertisement

ಆರ್‌ಸಿಬಿಯ ಮಾಜಿ ಆಟಗಾರ ದುಬೆ ಸರ್ವಾಧಿಕ 46 ರನ್‌ ಹೊಡೆದರೆ (32 ಎಸೆತ, 5 ಬೌಂಡರಿ, 2 ಸಿಕ್ಸರ್‌), ತೇವಟಿಯಾ 23 ಎಸೆತಗಳಿಂದ 40 ರನ್‌ ಬಾರಿಸಿದರು (4 ಫೋರ್‌, 2 ಸಿಕ್ಸರ್‌).  ಮೊಹಮ್ಮದ್‌ ಸಿರಾಜ್‌ ಅವರ ಮೊದಲ ಓವರ್‌ನಲ್ಲೇ ಸತತ ಬೌಂಡರಿ ಬಾರಿಸಿದ ಜಾಸ್‌ ಬಟ್ಲರ್‌ ರಾಜಸ್ಥಾನ್‌ಗೆ

ಭರ್ಜರಿ ಆರಂಭ ನೀಡುವ ಸೂಚನೆಯಿತ್ತರು. ಆದರೆ ಸಿರಾಜ್‌ ಮುಂದಿನ  ಓವರ್‌ನಲ್ಲೇ ಸೇಡು ತೀರಿಸಿ ಕೊಂಡರು. ಬಿಗ್‌ ಹಿಟ್ಟರ್‌ ಬಟ್ಲರ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಆರ್‌ಸಿಬಿಗೆ ದೊಡ್ಡದೊಂದು ಯಶಸ್ಸು ತಂದಿತ್ತರು. ಬಟ್ಲರ್‌ ಅವರ ಬ್ಯಾಟಿಂಗ್‌ ಈ ಎರಡು ಬೌಂಡರಿಗಳಿಗಷ್ಟೇ ಸೀಮಿತಗೊಂಡಿತು.

ಮುಂದಿನ ಓವರ್‌ನಲ್ಲಿ ಜಾಮೀಸನ್‌ ಮತ್ತೋರ್ವ ಆರಂಭಕಾರ ಮನನ್‌ ವೋಹ್ರಾ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಕೇವಲ 7 ರನ್‌ ಮಾಡಿದ ವೋಹ್ರಾ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯವನ್ನು ತೆರೆದಿರಿಸಿದರು. 16 ರನ್‌ ಆಗುವಷ್ಟರಲ್ಲಿ ರಾಜಸ್ಥಾನ್‌ ಆರಂಭಿಕರಿಬ್ಬರ ವಿಕೆಟ್‌ ಉರುಳಿ ಹೋಯಿತು.

ಸಿರಾಜ್‌ ಅವರ ಮುಂದಿನ ಬಿಗ್‌ ವಿಕೆಟ್‌ ಅಪಾಯಕಾರಿ ಡೇವಿಡ್‌ ಮಿಲ್ಲರ್‌ ಅವರದಾಗಿತ್ತು. ಖಾತೆ ತೆರೆಯುವ ಮೊದಲೇ ಮಿಲ್ಲರ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಡಿಆರ್‌ಎಸ್‌ ಮೂಲಕ ಈ ತೀರ್ಪು ಆರ್‌ಸಿಬಿ ಪರವಾಗಿ ಬಂತು. 18 ರನ್‌ ಆಗುವಷ್ಟರಲ್ಲಿ ರಾಜಸ್ಥಾನ್‌ ತಂಡದ 3 ವಿಕೆಟ್‌ ಬಿತ್ತು. ಪವರ್‌ ಪ್ಲೇ ಮುಕ್ತಾಯಕ್ಕೆ  ಈ ಸ್ಕೋರ್‌ 32ಕ್ಕೆ ಏರಿತ್ತು.

ಈ ನಡುವೆ ನಾಯಕ ಸಂಜು ಸ್ಯಾಮ್ಸನ್‌ ಮುನ್ನುಗ್ಗಿ ಬೀಸುವ ಸೂಚನೆಯಿತ್ತರು. ವಾಷಿಂಗ್ಟನ್‌ಗೆ ಸಿಕ್ಸರ್‌ ರುಚಿಯನ್ನೂ ತೋರಿಸಿದರು. ಆದರೆ ಕ್ರೀಸ್‌ ಆಕ್ರಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದೇ ಎಸೆತದ ಅಂತರದಲ್ಲಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್‌ ನೀಡಿ ವಾಪಸಾದರು. 43 ರನ್ನಿಗೆ 4 ವಿಕೆಟ್‌ ಬಿತ್ತು. ಶಿವಂ ದುಬೆ-ರಿಯಾನ್‌ ಪರಾಗ್‌ 5ನೇ ವಿಕೆಟಿಗೆ ಜತೆಗೂಡಿದ ಬಳಿಕ ರಾಜಸ್ಥಾನ್‌ ಚೇತರಿಕೆ ಕಾಣ ತೊಡಗಿತು.

 

ಆರ್‌ಸಿಬಿ ಮ್ಯಾಚ್‌ ನಂ. 200 :

 

ಗುರುವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆಡಲಿಳಿಯುವ ಮೂಲಕ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ವಿಶಿಷ್ಟ ಸಾಧನೆಗೆ ಪಾತ್ರವಾಯಿತು. ಇದು ಆರ್‌ಸಿಬಿಯ 200ನೇ ಐಪಿಎಲ್‌ ಪಂದ್ಯವಾಗಿದೆ. ಐಪಿಎಲ್‌ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ ಕೇವಲ ಎರಡನೇ ತಂಡವೆಂಬುದು ಆರ್‌ಸಿಬಿ ಹೆಗ್ಗಳಿಕೆ. ಮುಂಬೈ ಇಂಡಿಯನ್ಸ್‌ 207 ಪಂದ್ಯಗಳನ್ನಾಡಿ ಅಗ್ರಸ್ಥಾನ ಅಲಂಕರಿಸಿದೆ.

ಈ ವರೆಗಿನ 199 ಪಂದ್ಯಗಳಲ್ಲಿ ಆರ್‌ಸಿಬಿ 92 ಜಯ ಸಾಧಿಸಿದ್ದು, ಭರ್ತಿ 100 ಪಂದ್ಯಗಳಲ್ಲಿ ಸೋಲನುಭವಿಸಿದೆ. 2 ಟೈ ಪಂದ್ಯಗಳನ್ನು ಸೂಪರ್‌ ಓವರ್‌ಗಳಲ್ಲಿ ಜಯಿಸಿದ್ದು, ಒಂದನ್ನು ಸೋತಿದೆ. 4 ಪಂದ್ಯಗಳು ಯಾವುದೇ ಫ‌ಲಿತಾಂಶ ದಾಖಲಿಸಿಲ್ಲ.

 

 

ರಾಜಸ್ಥಾನ್‌ ರಾಯಲ್ಸ್‌ :

ಜಾಸ್‌ ಬಟ್ಲರ್‌  ಬಿ ಸಿರಾಜ್‌        8

ವೋಹ್ರಾ ಸಿ ರಿಚರ್ಡ್‌ಸನ್‌ ಬಿ ಜಾಮೀಸನ್‌         7

ಸಂಜು ಸ್ಯಾಮ್ಸನ್‌ ಸಿ ಮ್ಯಾಕ್ಸ್‌ವೆಲ್‌ ಬಿ ಸುಂದರ್‌ 21

ಡೇವಿಡ್‌ ಮಿಲ್ಲರ್‌         ಎಲ್‌ಬಿಡಬ್ಲ್ಯು ಬಿ ಸಿರಾಜ್‌        0

ಶಿವಂ ದುಬೆ ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌   46

ರಿಯಾನ್‌ ಪರಾಗ್‌         ಸಿ ಚಹಲ್‌ ಬಿ ಹರ್ಷಲ್‌ 25

ರಾಹುಲ್‌ ತೇವಟಿಯಾ ಸಿ ಅಹ್ಮದ್‌ ಬಿ ಸಿರಾಜ್‌    40

ಕ್ರಿಸ್‌ ಮಾರಿಸ್‌  ಸಿ ಚಹಲ್‌ ಬಿ ಹರ್ಷಲ್‌ 10

ಶ್ರೇಯಸ್‌ ಗೋಪಾಲ್‌ ಔಟಾಗದೆ 7

ಚೇತನ್‌ ಸಕಾರಿಯಾ     ಸಿ ಎಬಿಡಿ ಬಿ ಹರ್ಷಲ್‌  0

ಮುಸ್ತಫಿಜುರ್‌  ಔಟಾಗದೆ         0

ಇತರ               13

ಒಟ್ಟು(9 ವಿಕೆಟಿಗೆ)                    177

ವಿಕೆಟ್‌ ಪತನ:1-14, 2-16, 3-18, 4-43, 5-109, 6-133, 7-170, 8-170.

ಬೌಲಿಂಗ್‌

ಮೊಹಮ್ಮದ್‌ ಸಿರಾಜ್‌   4-0-27-3

ಕೈಲ್‌ ಜಾಮೀಸನ್‌                    4-0-28-1

ಕೇನ್‌ ರಿಚರ್ಡ್‌ಸನ್‌                  3-0-29-1

ಯಜುವೇಂದ್ರ ಚಹಲ್‌  2-0-18-0

ವಾಷಿಂಗ್ಟನ್‌ ಸುಂದರ್‌ 3-0-23-1

ಹರ್ಷಲ್‌ ಪಟೇಲ್‌                    4-0-47-3

ರಾಯಲ್‌ ಚಾಲೆಂಜರ್ ಬೆಂಗಳೂರು

ವಿರಾಟ್‌ ಕೊಹ್ಲಿ            ಅಜೇಯ          72

ದೇವದತ್ತ ಪಡಿಕ್ಕಲ್‌      ಅಜೇಯ          101

ಇತರ               8

ಒಟ್ಟು (16.3 ಓವರ್‌ಗಳಲ್ಲಿ ನೋಲಸ್‌)  181

ಬೌಲಿಂಗ್‌;

ಶ್ರೇಯಸ್‌ ಗೋಪಾಲ್‌   3-0-35-0

ಚೇತನ್‌ ಸಕಾರಿಯಾ                 4-0-35-0

ಕ್ರಿಸ್‌ ಮಾರಿಸ್‌              3-0-38-0

ಮುಸ್ತಫಿಜುರ್‌ ರೆಹಮಾನ್‌        3.3-0-34-0

ರಾಹುಲ್‌ ತೇವಟಿಯಾ  2-0-23-0

ರಿಯಾನ್‌ ಪರಾಗ್‌                     1-0-14-0

Advertisement

Udayavani is now on Telegram. Click here to join our channel and stay updated with the latest news.

Next