ಮುಂಬೈ: 17ನೇ ಸೀಸನ್ ನ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯಗೆ ನಾಯಕತ್ವವೇ ಮುಗ್ಗಲ ಮುಳ್ಳಾಗಿದೆ. ಪಂದ್ಯಗಳನ್ನು ಗೆಲ್ಲುತ್ತಿದ್ದರೂ ತವರು ಅಂಗಳದಲ್ಲಿಯೇ ಅಭಿಮಾನಿಗಳ ನಿಂದನೆ ಮುಂದುವರಿದಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿಯೂ ಇದು ಮರುಕಳಿಸಿತು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಜನರು ತವರು ತಂಡಕ್ಕಿಂತ ಹೆಚ್ಚಾಗಿ ಆರ್ ಸಿಬಿ ಬೆಂಬಲಕ್ಕೆ ನಿಂತರು. ಅದರಲ್ಲೂ ಹಾರ್ದಿಕ್ ಪಾಂಡ್ಯಗೆ ನಿಂದನೆ ಮಾಡಿದರು. ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಬಂದಾಗ ಪ್ರೇಕ್ಷಕರು ರೋಹಿತ್ ಹೆಸರು ಹೇಳಿ ಜೋರಾಗಿ ಕೂಗುತ್ತಿತದ್ದರು.
ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಬೇಸರಗೊಂಡ ಕೊಹ್ಲಿ ನಕಾರಾತ್ಮಕ ಸ್ವಾಗತವನ್ನು ನಿಲ್ಲಿಸುವಂತೆ ಸನ್ನೆ ಮಾಡಿದರು, ಅಲ್ಲದೆ ಮುಂಬೈ ಇಂಡಿಯನ್ಸ್ ನಾಯಕನಿಗೆ ಹುರಿದುಂಬಿಸಲು ಜನರನ್ನು ಒತ್ತಾಯಿಸಿದರು. ಕೊಹ್ಲಿ ಅವರ ಈ ನಡೆ ವೈರಲ್ ಆಗಿದೆ.
ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಬಂದಾಗ ಹಾರ್ದಿಕ್ ಮೊದಲ ಬಾರಿಗೆ ಪ್ರೇಕ್ಷಕರಿಂದ ಟೀಕೆಗೆ ಒಳಪಟ್ಟರು. ಆದರೆ ರೋಹಿತ್ ಔಟಾದ ನಂತರ ಬ್ಯಾಟಿಂಗ್‌ಗೆ ಬಂದಾಗ ಪ್ರೇಕ್ಷಕರು ಹಾರ್ದಿಕ್ ಗೆ ಉತ್ತಮ ಸ್ವಾಗತ ನೀಡಲಿಲ್ಲ. ರೋಹಿತ್ ಶರ್ಮಾರ ಪ್ರತಿ ಹೊಡೆತಕ್ಕೂ ಪ್ರೇಕ್ಷಕರು ಭಾರಿ ಉತ್ತೇಜನ ನೀಡಿದರೆ, ಹಾರ್ದಿಕ್ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಲು ಕಷ್ಟಪಟ್ಟರು.
ಪ್ರೇಕ್ಷಕರು ಹಾರ್ದಿಕ್ ವಿರುದ್ಧವಾಗಿ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಲು ಕೊಹ್ಲಿ ಮಧ್ಯ ಪ್ರವೇಶಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಹಾರ್ದಿಕ್ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಎಂದು ಕೊಹ್ಲಿ ಪ್ರೇಕ್ಷಕರಿಗೆ ನೆನಪಿಸುವುದನ್ನು ಸಹ ಕಾಣಬಹುದು.
ಪ್ರೇಕ್ಷಕರ ಒಂದು ವಿಭಾಗವು “ಹಾರ್ದಿಕ್, ಹಾರ್ದಿಕ್” ಎಂದು ಕೂಗಲು ಪ್ರಾರಂಭಿಸಿದ್ದರಿಂದ ಮೈದಾನದಲ್ಲಿ ಪರಿಸ್ಥಿತಿ ತಿಳಿಯಾಯಿತು.
ಕೊಹ್ಲಿ ಅವರು ಈ ಹಿಂದೆ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಬೆಂಬಲಕ್ಕೂ ಇದೇ ರೀತಿ ನಿಂತಿದ್ದರು.