Advertisement

RCB V/s LSG: ವುಡ್‌ ಪ್ರಯತ್ನದಿಂದ ಚೇಸಿಂಗ್‌ ಸಾಧ್ಯವಾಯಿತು: ಪೂರಣ್‌

11:59 PM Apr 11, 2023 | Team Udayavani |

ಬೆಂಗಳೂರು: ಆರ್‌ಸಿಬಿ ವಿರುದ್ಧ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಲಕ್ನೋ ಸೂಪರ್‌ ಜೈಂಟ್ಸ್‌ ಅಂತಿಮ ಎಸೆತದಲ್ಲಿ ಒಂದು ವಿಕೆಟ್‌ ಅಂತರದ ರೋಚಕ, ಅಷ್ಟೇ ನಾಟಕೀಯ ಗೆಲುವು ಸಾಧಿಸಿದ್ದು ಈಗ ಇತಿಹಾಸ. ಇದರ ರೂವಾರಿಗಳಾಗಿ ಮೂಡಿಬಂದವರು ಆಸ್ಟ್ರೇಲಿಯದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ವೆಸ್ಟ್‌ ಇಂಡೀಸ್‌ ಕೀಪರ್‌ ನಿಕೋಲಸ್‌ ಪೂರಣ್‌. ಇವರಿಬ್ಬರು ಹರಿಸಿದ ರನ್‌ ಹೊಳೆಯಲ್ಲಿ ಬೆಂಗಳೂರು ತಂಡ ತವರಿನಂಗಳದಲ್ಲೇ ಮುಳುಗಿತು!

Advertisement

213 ರನ್‌ ಚೇಸಿಂಗ್‌ ವೇಳೆ 23ಕ್ಕೆ 3 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ಲಕ್ನೋವನ್ನು ಮತ್ತೆ ಹಳಿಗೆ ತಂದು ನಿಲ್ಲಿಸಿದ ಮೊದಲಿಗ ಮಾರ್ಕಸ್‌ ಸ್ಟೋಯಿನಿಸ್‌. ಅವರು ಆರ್‌ಸಿಬಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಮುನ್ನುಗ್ಗಿ ಬಾರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಮುಂದಿನದು ಪೂರಣ್‌ ಪರಾಕ್ರಮ. ಚಿನ್ನಸ್ವಾಮಿ ಸ್ಟೇಡಿಯಂ ತುಂಬೆಲ್ಲ ಬೌಂಡರಿ, ಸಿಕ್ಸರ್‌ ಸುರಿಮಳೆ. ಇವರಿಬ್ಬರು ಸೇರಿ 10 ಬೌಂಡರಿ, 12 ಸಿಕ್ಸರ್‌ ಸಿಡಿಸಿ ಪಂದ್ಯ ಆರ್‌ಸಿಬಿ ಕೈಲಿದ್ದ ಪಂದ್ಯವನ್ನು ಲಕ್ನೋ ಮಡಿಲಿಗೆ ತಂದಿತ್ತರು.

ಸ್ಟೋಯಿನಿಸ್‌ 30 ಎಸೆತಗಳಿಂದ 65 ರನ್‌ ಸಿಡಿಸಿದರೆ (6 ಬೌಂಡರಿ, 5 ಸಿಕ್ಸರ್‌), ಪೂರಣ್‌ ಕೇವಲ 19 ಎಸೆತ ಎದುರಿಸಿ 62 ರನ್‌ ಚಚ್ಚಿದರು. 7 ಸಿಕ್ಸರ್‌, 4 ಬೌಂಡರಿ ಹೊಡೆದು ಆರ್‌ಸಿಬಿಗೆ ಬಿಸಿ ಮುಟ್ಟಿಸಿದರು.

ತಮ್ಮ ವಿಸ್ಫೋಟಕ ಬ್ಯಾಟಿಂಗ್‌ ಸಾಹ ಸದ ಬಗ್ಗೆ ಪ್ರತಿಕ್ರಿಯಿಸಿದ ನಿಕೋಲಸ್‌ ಪೂರಣ್‌, “ಮಾರ್ಕ ವುಡ್‌ ಅಂತಿಮ ಓವರ್‌ನಲ್ಲಿ ಅಮೋಘ ನಿಯಂತ್ರಣ ಸಾಧಿಸಿದ್ದರಿಂದಲೇ ಚೇಸಿಂಗ್‌ ಸುಲಭ ವಾಯಿತು’ ಎಂದರು. ವುಡ್‌ ಕೊನೆಯ ಓವರ್‌ನಲ್ಲಿ ಕೇವಲ 9 ರನ್‌ ನೀಡಿದರು. ಈ ಓವರ್‌ನಲ್ಲಿ 2 ಡಾಟ್‌ ಬಾಲ್‌ಗ‌ಳಿದ್ದವು. ಇದರಲ್ಲಿ ಮ್ಯಾಕ್ಸ್‌ವೆಲ್‌ ರನ್‌ ಗಳಿಸಲು ವಿಫ‌ಲರಾಗಿದ್ದರು. ಇಲ್ಲವಾದರೆ ಆರ್‌ಸಿಬಿ ಮೊತ್ತ ಇನ್ನೂ ಏರುವ ಸಾಧ್ಯತೆ ಇತ್ತು. 220ರಷ್ಟು ಮೊತ್ತವನ್ನು ಚೇಸಿಂಗ್‌ ಮಾಡುವುದಿದ್ದರೆ ಮಾನಸಿಕವಾಗಿ ಹಿನ್ನಡೆ ಯಾಗುತ್ತಿತ್ತು ಎಂಬುದು ಪೂರಣ್‌ ಅನಿಸಿಕೆ.

ನಾಯಕ ರಾಹುಲ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ನಡುವಿನ 76 ರನ್‌ ಜತೆಯಾಟ, ಸ್ಟೋಯಿನಿಸ್‌-ಪೂರಣ್‌ ಜೋಡಿಯ 84 ರನ್ನುಗಳ ಅಬ್ಬರದಿಂದ ಲಕ್ನೋಗೆ ಲಕ್‌ ಒಲಿಯಿತು.

Advertisement

“ಕಳೆದ ಒಂದೆರಡು ವರ್ಷಗಳಿಂದ ನಾನು ಪಂದ್ಯವನ್ನು ಫಿನಿಶ್‌ ಮಾಡುವ ಪ್ರಯತ್ನದಲ್ಲಿ ವಿಫ‌ಲನಾಗುತ್ತಿದ್ದೆ. ಇಂದು ಕೂಡ ಇದು ಸಾಧ್ಯವಾಗಲಿಲ್ಲ. ಆದರೆ ತಂಡವನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದ ತೃಪ್ತಿ ಇದೆ. ಇದು ನನ್ನ ಸೀಸನ್‌ ಎಂದು ಭಾವಿಸುವೆ. ರಂಜನೀಯ ಕ್ರಿಕೆಟ್‌ ನನ್ನ ಗುರಿ” ಎಂದರು. ಜತೆಗೆ ತನ್ನ ಈ ಸಾಧನೆಯನ್ನು ಪತ್ನಿ ಹಾಗೂ ಪುಟ್ಟ ಮಗುವಿಗೆ ಅರ್ಪಿಸುವುದಾಗಿಯೂ ನಿಕೋಲಸ್‌ ಪೂರಣ್‌ ಹೇಳಿದರು.

ಟರ್ನಿಂಗ್‌ ಪಾಯಿಂಟ್‌
ರಾಹುಲ್‌ ಔಟ್‌ ಆದದ್ದೇ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎಂಬುದಾಗಿ ಕ್ರಿಕೆಟ್‌ ಅಭಿಮಾನಿಗಳು ಜೋಕ್‌ ಮಾಡುತ್ತಿದ್ದಾರೆ. ನಿಧಾನ ಗತಿಯಲ್ಲಿ ಆಡುತ್ತಿದ್ದ ರಾಹುಲ್‌ ಅವರನ್ನು ಇನ್ನಷ್ಟು ಹೊತ್ತು ಆಡಲು ಬಿಡಬೇಕಿತ್ತು. ಆಗ ಪೂರಣ್‌ ಪ್ರವೇಶ ವಿಳಂಬ ಆಗುತ್ತಿದ್ದುದರಿಂದ ಲಕ್ನೋಗೆ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂಬುದು ಇಲ್ಲಿನ ಲೆಕ್ಕಾಚಾರ!

Advertisement

Udayavani is now on Telegram. Click here to join our channel and stay updated with the latest news.

Next