ದುಬಾೖ: ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಆರ್‌ಸಿಬಿ ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ರವಿವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಈ ಪಂದ್ಯವನ್ನು ಗೆದ್ದರೆ ಕೊಹ್ಲಿ ಪಡೆಯ ಪ್ಲೇ ಆಫ್ ಪ್ರವೇಶ ಅಧಿಕೃತಗೊಳ್ಳಲಿದೆ. ಹಾಗೆಯೇ ಧೋನಿ ಪಡೆಯ ನಿರ್ಗಮನವೂ.
ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
ಹತ್ತರಲ್ಲಿ 7 ಪಂದ್ಯ ಗೆದ್ದಿರುವ ಆರ್ ಸಿಬಿ ಈಗ ತುಂಬು ಆತ್ಮವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಗುಚಿದ ರೀತಿಯೊಂದೇ ಸಾಕು, ಆರ್‌ಸಿಬಿ ಎಷ್ಟು ಪ್ರಬಲವಾಗಿ ಸಂಘಟಿಗೊಂಡಿದೆ ಎಂಬುದು ತಿಳಿಯುತ್ತದೆ. ಕೋಲ್ಕತಾ ಎದುರು ಸಿರಾಜ್ ಘಾತಕ ಬೌಲಿಂಗ್, ರಾಜಸ್ಥಾನ್ ವಿರುದ್ಧ “ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಎಬಿಡಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಆಸೀಸ್ ಬಿಗ್ ಹಿಟ್ಟರ್ ಫಿಂಚ್ ವೈಫಲ್ಯದಿಂದ ಹೊರಬರಬೇಕಿದೆ. ಪಡಿಕ್ಕಲ್ ಆರಂಭಿಕ ಸಾಹಸವನ್ನು ಪುನರಾವರ್ತಿಸಬೇಕಿದೆ. ಇವರಿಬ್ಬರು ಸಿಡಿದು ನಿಂತರೆ ಆರ್ ಸಿಬಿ ಹೆಚ್ಚು ಆಕ್ರಮಣಕಾರಿಯಾಗಿ ಗೋಚರಿಸುವುದು ಖಚಿತ. ಶಿವಂ ದುಬೆ ಈ ಪಂದ್ಯದಲ್ಲಿ ಮತ್ತೆ ಆಡುವ ಬಳಗದಲ್ಲಿ ಕಾಣಿಸುವ ಸಾಧ್ಯತೆ ಇದೆ.
ಘಾತಕ ಬೌಲಿಂಗ್ ಲೈನ್‌ಅಪ್
ಸಾಮಾನ್ಯವಾಗಿ ಆರ್‌ಸಿಬಿ ಪ್ರತೀ ಸಲವೂ ಬೌಲಿಂಗ್ ಬಗ್ಗೆ ಚಿಂತಿಸುತ್ತಿತ್ತು. ಆದರೆ ಈ ವರ್ಷ ಬೌಲಿಂಗ್ ವಿಭಾಗ ಹೈಚ್ಚು ವೈವಿಧ್ಯಮಯವಾಗಿದ್ದು, ಘಾತಕವಾಗಿ ಗೋಚರಿಸಿದೆ. ಚಹಲ್, ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗದಲ್ಲಿ ಮಿಂಚುತಿದ್ದಾರೆ. ಮಾರಿಸ್, ಸಿರಾಜ್, ಸೈನಿ ವೇಗದ ಬೌಲಿಂಗ್‌ವಿಭಾಗವನ್ನು ಸಮರ್ಥ ರೀಯಲ್ಲಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ:ಚೇತರಸಿಕೊಳ್ಳುತ್ತಿರುವ ಕಪಿಲ್ ದೇವ್: ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ ಲೆಜೆಂಡ್
ಚೆನ್ನೈಗೆ ಪ್ರತಿಷ್ಠೆಯ ಪಂದ್ಯ
ಪವಾಡ ಸಂಭವಿಸಿದರೂ ಚೆನ್ನೈ ಪ್ಲೇ ಆಫ್ಗೆ ತೇರ್ಗಡೆಯಾಗದು ಎಂಬುದು ಸದ್ಯದ ಸ್ಥಿತಿ. ಧೋನಿ ಪಡೆ ಮೊದಲ ಸಲ ಮುಂದಿನ ಸುತ್ತನ್ನು ಕಾಣದೆ ಹೊರಬೀಳುವ ಸಂಕಟದಲ್ಲಿದೆ. ಜತೆಗೆ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಕಳಂಕವೂ ತಟ್ಟಲಿದೆ. ಹೀಗಾಗಿ ಧೋನಿ ಪಡೆ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯ. ಗೆದ್ದರೆ ತನ್ನ ನಿರ್ಗಮನವನ್ನು ಒಂದಿಷ್ಟು ಮುಂದೂಡಿದ ಸಮಾಧಾನ ಲಭಿಸಲಿದೆ
ಇಂದು ಆರ್‌ಸಿಬಿ ಹಸುರುಡುಗೆ
“ಗೋ ಗ್ರೀನ್’ ಅಭಿಯಾನದ ಅಂಗವಾಗಿ ಆರ್‌ಸಿಬಿ ಕ್ರಿಕೆಟಿಗರು ರವಿವಾರದ ಪಂದ್ಯದಲ್ಲಿ ಹಸಿರು ಬಣ್ಣದ ಉಡುಗೆ ಧರಿಸಿ ಆಡಲಿದ್ದಾರೆ. ಜತೆಗೆ ತಂಡದ ಎಲ್ಲ ಅಧಿಕಾರಿಗಳು, ಸಿಬಂದಿ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವರು. 2011ರಿಂದ ಆರ್‌ಸಿಬಿ ಇಂಥದೊಂದು “ಗ್ರೀನ್ ಮ್ಯಾಚ್’ಗೆ ಸಾಕ್ಷಿಯಾಗುತ್ತಲೇ ಇದೆ. ಭೂಮಿಯ ವಾತಾವರಣವನ್ನು ಸ್ವತ್ಛವಾಗಿರಿಸಿ ತನ್ಮೂಲಕ ಜೀವಸಂಕುಲ ಆರೋಗ್ಯದಿಂದ ಇರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವೊಂದನ್ನು ರೂಪಿಸುವಂತೆ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.