Advertisement
ಕೇವಲ ಮೂವರು ಬ್ಯಾಟರ್, ಓರ್ವ ಬೌಲರ್‌ನನ್ನಿಟ್ಟುಕೊಂಡು ಈ ಕ್ಯಾಶ್ ರಿಚ್ ಲೀಗ್‌ನಲ್ಲಿ ಆಡುತ್ತಿರುವ ಏಕೈಕ ತಂಡ ಎಂದು ಎಲ್ಲರಿಂದ ವ್ಯಂಗ್ಯಕ್ಕೊಳಗಾಗಿರುವ ತಂಡ ಆರ್‌ಸಿಬಿ. ಮೂವರು ಬ್ಯಾಟರ್‌ಗಳಲ್ಲಿ ಒಬ್ಬರದು ಸೊನ್ನೆ ಸಾಧನೆ, ತಪ್ಪಿದರೆ ಒಂಟಿ ರನ್ ಗಳಿಕೆ. ಇನ್ನು ಬೌಲಿಂಗ್ ಕತೆ ಕೇಳುವುದೇ ಬೇಡ. ಈ ಎಲ್ಲ ಅವಸ್ಥೆಗೂ ಮುಂಬೈ ಎದುರಿನ ಪಂದ್ಯ ಸಾಕ್ಷಿಯಾಯಿತು.
Related Articles
ಇದು 11 ಪಂದ್ಯಗಳಲ್ಲಿ ಆರ್‌ಸಿಬಿಗೆ ಎದುರಾದ 6ನೇ ಸೋಲು. ಕೈಲಿರುವ ಅಂಕ ಬರೀ 10. ರನ್‌ರೇಟ್ -0.345. ಉಳಿದದ್ದು ಮೂರೇ ಪಂದ್ಯ. ಎಲ್ಲವನ್ನೂ ದೊಡ್ಡ ಅಂತರದಿಂದ ಗೆದ್ದರೂ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ಈಗಿನ ಲೆಕ್ಕಾಚಾರದಂತೆ ಗುಜರಾತ್, ಚೆನ್ನೈ, ಮುಂಬೈ, ಲಕ್ನೋಗೆ ಪ್ಲೇ ಆಫ್ ಅವಕಾಶ ಹೆಚ್ಚು. ರಾಜಸ್ಥಾನ್ ಮತ್ತು ಕೋಲ್ಕತಾ ನಡುವೆ ಒಂದು ಸ್ಥಾನಕ್ಕೆ ರೇಸ್ ಏರ್ಪಡಬಹುದು. ಇಂಥ ಪರಿಸ್ಥಿತಿಯಲ್ಲಿ ಆರ್‌ಸಿಬಿ ಮೇಲೇರುವುದು ಸಾಧ್ಯವಿಲ್ಲದ ಮಾತು.
Advertisement
ಆರ್‌ಸಿಬಿಯ ಮುಂದಿನ ಎದುರಾಳಿಗಳೆಂದರೆ ರಾಜಸ್ಥಾನ್, ಹೈದರಾಬಾದ್ ಮತ್ತ ಗುಜರಾತ್. ಇವುಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡುವುದು ಚಾಂಪಿಯನ್ ಗುಜರಾತ್ ಎದುರಿನ ಪಂದ್ಯ ಮಾತ್ರ. ಉಳಿದವನ್ನು ಜೈಪುರ ಮತ್ತು ಹೈದರಾಬಾದ್‌ನಲ್ಲಿ ಆಡಬೇಕಿದೆ.
ಅವಕಾಶ ವಂಚಿತರು…ಆಡಿದವರನ್ನೇ ಆಡಿಸುವುದು, ಕಳಪೆ ಪ್ರದರ್ಶನ ನೀಡಿದವರನ್ನೇ ಮುಂದುವರಿಸುವುದು, ಕೆಲವು ಪ್ರತಿಭಾನ್ವಿತರನ್ನು ಇನ್ನೂ ಬೆಂಚ್ ಮೇಲೆಯೇ ಕೂರಿಸಿರುವುದೆಲ್ಲ ಆರ್‌ಸಿಬಿಯ ವೈಫಲ್ಯಕ್ಕೆ ಮುಖ್ಯ ಕಾರಣ. ಹಿಮಾಂಶು ಶರ್ಮ, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಫಿನ್ ಅಲೆನ್, ಸಿದ್ಧಾರ್ಥ್ ಕೌಲ್ ಮೊದಲಾದ ಪ್ರತಿಭಾನ್ವಿತರಿಗೆ ಆರ್‌ಸಿಬಿ ಇನ್ನೂ ಆಡುವ ಚಾನ್ಸ್ ಕೊಟ್ಟಿಲ್ಲ. ಬ್ರೇಸ್‌ವೆಲ್‌ಗೆ ನೀಡಿದ್ದು ಒಂದೋ, ಎರಡೋ ಅವಕಾಶ ಮಾತ್ರ. ದಿನೇಶ್ ಕಾರ್ತಿಕ್, ಶಾಬಾಜ್ ಅಹ್ಮದ್, ಅನುಜ್ ರಾವತ್‌ಗೆ ನೀಡಿದ ಅವಕಾಶಕ್ಕೆ ಲೆಕ್ಕವಿಲ್ಲ. ಆದರೆ ಇವರು ಸಾಧಿಸಿದ್ದೇನೂ ಇಲ್ಲ. ಆಟಗಾರರ ಆಯ್ಕೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿಯೇ ಸತತವಾಗಿ ಎಡವುತ್ತಲೇ ಇದೆ. ಕಾಲ ಮಿಂಚಿದೆ; ನಿರ್ಗಮನ ಸಮೀಪಿಸಿದೆ!