Advertisement

ಆರ್‌ಸಿಬಿ:ಆದೇ ರಾಗ ಅದೇ ಹಾಡು

02:01 PM May 05, 2018 | Team Udayavani |

ಪ್ರತಿ ಐಪಿಎಲ್‌ ಆರಂಭದ ಸಂದರ್ಭದಲ್ಲಿ ಆರ್‌ಸಿಬಿ ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಕಪ್‌ ನಮ್ದೇ ಅಂತ ಆರ್‌ಸಿಬಿ ಹವಾ ಸೃಷ್ಟಿಸಿತ್ತು.ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿಪ್‌ ನಮ್ದೇ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ.

Advertisement

ಈ ಬಾರಿ ಕಪ್‌ ನಮ್ದೇ ಅಂತ ಹವಾ ಸೃಷ್ಟಿಸಿದ ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ ಕ್ಷಮಿಸಿ ಮುಂದಿನ ಬಾರಿ ಕಪ್‌ ನಮ್ದೇ ಅನ್ನುವ ಹಂತಕ್ಕೆ ತಲುಪಿದೆ. ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್, ಕ್ವಿಂಟನ್‌ ಡಿ ಕಾಕ್‌, ಬ್ರೆಂಡನ್‌ ಮೆಕಲಂ, ಕ್ರಿಸ್‌ ವೋಕ್ಸ್‌….ಇಂತಹ ತಾರಾ ಆಟಗಾರರ ಆಟ ಗೆಲುವಾಗಿ ಪರಿವರ್ತನೆಯಾಗುತ್ತಿಲ್ಲ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ.

ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. ಪ್ರತಿ ಬಾರಿ ಐಪಿಎಲ್‌ ಸಂದರ್ಭದಲ್ಲಿಯೂ ಆರ್‌ಸಿಬಿ ಭಾರೀ ನಿರೀಕ್ಷೆ ಹುಟ್ಟಿಸುತ್ತದೆ. ದಿಢೀರ್‌ ಅಂತ ಆ ನಿರೀಕ್ಷೆಯನ್ನು ಸುಳ್ಳಾಗಿಸಿಬಿಡುತ್ತದೆ. ಈ ಬಾರಿ ಕೂಡ ಈಗಾಗಲೇ ಆಡಿರುವ 7 ಪಂದ್ಯದಲ್ಲಿ 5ರಲ್ಲಿ ಸೋಲುಂಡಿದೆ. ಹೀಗಾಗಿ ಕಪ್‌ ನಮ್ದೇ ಅನ್ನೋದಿರಲಿ, ಪ್ಲೇಆಫ್ ಹಾದಿಗೂ ಹರಸಾಹಸ ಮಾಡಬೇಕಾಗಿದೆ.

ಗೇಲ್‌, ರಾಹುಲ್‌ ಕೈಬಿಟ್ಟಿದ್ದು ತಪ್ಪು
ಕ್ರಿಸ್‌ ಗೇಲ್‌ ಮತ್ತು ಕೆ.ಎಲ್‌.ರಾಹುಲ್‌ ಅವರನ್ನು ಕೈಬಿಟ್ಟಿದ್ದು, ಆರ್‌ಸಿಬಿ ಮಾಡಿದ ದೊಡ್ಡ ತಪ್ಪು. ಹರಾಜಿನ ವೇಳೆಯಲ್ಲಿ ಇವರನ್ನು ಖರೀದಿಸುವ ಪ್ರಯತ್ನವನ್ನೂ ನಡೆಸಲಿಲ್ಲ. ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಸಾಮರ್ಥ್ಯವುಳ್ಳ ಇಬ್ಬರನ್ನು ಬಿಟ್ಟಿದ್ದು ಭಾರೀ ನಷ್ಟಕ್ಕೆ ಕಾರಣವಾಗಿದೆ. ಸದ್ಯ ಪಂಜಾಬ್‌ ತಂಡದಲ್ಲಿರುವ ಈ ಇಬ್ಬರೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಗೆಲುವಿನ ರೂವಾರಿಗಳಾಗುತ್ತಿದ್ದಾರೆ.

ಬೌಲಿಂಗ್‌ ದಾಳಿ ಕಳಪೆ
ಆರ್‌ಸಿಬಿಯ ಬೌಲಿಂಗ್‌ ವಿಭಾಗ ತೀರಾ ಕಳಪೆಯಾಗಿದೆ. ಚೆನ್ನೈ ವಿರುದ್ಧ 205 ರನ್‌, ಕೋಲ್ಕತಾ ವಿರುದ್ಧ ಒಂದು ಪಂದ್ಯದಲ್ಲಿ 176 ರನ್‌, ಮತ್ತೂಂದು ಪಂದ್ಯದಲ್ಲಿ 175 ರನ್‌ ಬಾರಿಸಿಯೂ ಸೋಲುಂಡಿದೆ. ಅಷ್ಟೇ ಅಲ್ಲ, ಮುಂಬೈ ಮತ್ತು ರಾಜಸ್ಥಾನ್‌ ತಂಡಕ್ಕೆ 200 ರನ್‌ ಗಡಿದಾಟಲು ಅವಕಾಶ ನೀಡಿರುವುದು ಆರ್‌ಸಿಬಿಯ ಬೌಲಿಂಗ್‌ ಗುಣಮಟ್ಟ ಹೇಗಿದೆ ಅನ್ನುವುದನ್ನು ಅರ್ಥಮಾಡಿಸುತ್ತದೆ. ಸ್ಪಿನ್ನರ್‌ ಚಹಲ್‌ ರನ್‌ ಹೆಚ್ಚಿಗೆ ನೀಡುತ್ತಿಲ್ಲ, ನೀಜ, ಆದರೆ ಅವರು, ಮಹತ್ವದ ವಿಕೆಟ್‌ ಪಡೆದು ಪಂದ್ಯಕ್ಕೆ ತಿರುವು ನೀಡುತ್ತಿಲ್ಲ. ಉಮೇಶ್‌ ಯಾದವ್‌ ಆರಂಭದಲ್ಲಿ ವಿಕೆಟ್‌ ಪಡೆಯುತ್ತಾರೆ. ಆಮೇಲೆ ಭಾರೀ ದುಬಾರಿಯಾಗಿ ಬಿಡುತ್ತಾರೆ. ಕ್ರಿಸ್‌ ವೋಕ್ಸ್‌, ಟಿಮ್‌ ಸೌಥಿ, ಕೋರಿ ಆ್ಯಂಡರ್ಸನ್‌ ಯಾವ ಪ್ರಯೋಜನಕ್ಕೂ ಬರುತ್ತಿಲ್ಲ.

Advertisement

ಕ್ಷೇತ್ರ ರಕ್ಷಣೆಯಲ್ಲಿ ಎಡವಟ್ಟು
ಚುರುಕಿನ ಕ್ಷೇತ್ರ ರಕ್ಷಣೆ ಇದ್ದರೆ ಅನಗತ್ಯ ರನ್‌ ತಡೆಗಟ್ಟಲು ಸಾಧ್ಯ. ಈ ಮೂಲಕವೂ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು. ಆದರೆ, ಈ ವಿಷಯದಲ್ಲಿಯೂ ಆರ್‌ಸಿಬಿ ಚುರುಕಾಗಿಲ್ಲ. ಹೀಗಾಗಿ ಪಂದ್ಯಗಳನ್ನು ಅನಾವಶ್ಯಕವಾಗಿ ಕಳೆದುಕೊಳ್ಳುತ್ತಿದೆ. ಅದರಲ್ಲಿಯೂ ಚೆನ್ನೈ ವಿರುದ್ಧ ಕೊನೆಯ ಹಂತದಲ್ಲಿ ಅಂಬಟಿ ರಾಯುಡು ನೀಡಿದ್ದ ಕ್ಯಾಚ್‌ ಅನ್ನು ಉಮೇಶ್‌ ಯಾದವ್‌ ಕೈಚೆಲ್ಲಿದ್ದು, ಪಂದ್ಯ ಕಳೆದುಕೊಳ್ಳುವಂತೆ ಮಾಡಿತ್ತು. ಕ್ಷೇತ್ರರಕ್ಷಣೆ ಸುಧಾರಣೆ ಆಗದ ಹೊರತು ತಂಡದ ಯಶಸ್ಸನ್ನು ನಿರೀಕ್ಷಿಸಲಾಗದು.

ಸಂಘಟನಾತ್ಮಕ ಹೋರಾಟದ ಕೊರತೆ
ತಂಡದಲ್ಲಿ ಮುಖ್ಯವಾಗಿ ಸಂಘಟನಾತ್ಮಕ ಹೋರಾಟ ಕಂಡುಬರುತ್ತಿಲ್ಲ. ಚೆನ್ನೈ, ಕೋಲ್ಕತಾ ವಿರುದ್ಧ ಬ್ಯಾಟಿಂಗ್‌ನಲ್ಲಿ ತಂಡವು ಭರ್ಜರಿ ಯಶಸ್ಸು ಸಾಧಿಸಿತ್ತು. ಆದರೆ ಬೌಲಿಂಗ್‌ ವೈಫ‌ಲ್ಯದಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಮುಂಬೈ, ರಾಜಸ್ಥಾನ್‌ ತಂಡಗಳಿಗೆ 200 ಗಡಿ ದಾಟಲು ಅವಕಾಶ ನೀಡಿದ್ದು, ಮುಳುವಾಯಿತು. ಕೊಹ್ಲಿ ಮಿಂಚಿರುವ ಪಂದ್ಯಗಳಲ್ಲಿ ಎಬಿಡಿ ಸಿಡಿಯುತ್ತಿಲ್ಲ. ಎಬಿಡಿ ಸಿಡಿದ ಪಂದ್ಯದಲ್ಲಿ ಮತ್ತೂಬ್ಬ ಬ್ಯಾಟ್ಸ್‌ಮನ್‌ ಅಬ್ಬರಿಸುತ್ತಿಲ್ಲ. ಒಟ್ಟಾರೆ, ಸಂಘಟನಾತ್ಮಕ ಹೋರಾಟದ ಕೊರತೆಯೇ ತಂಡದ ಸೋಲಿಗೆ ಕಾರಣವಾಗುತ್ತಿದೆ.

ಹೋರಾಟ ವ್ಯರ್ಥವಾಗುತ್ತಿದೆ
ಆರ್‌ಸಿಬಿ ಸೋಲುತ್ತಿದ್ದರೂ ನಾಯಕ ಕೊಹ್ಲಿ ಮತ್ತು ಎಬಿ ಡಿವಿಯರ್ ಮಾತ್ರ ಅಬ್ಬರಿಸುತ್ತಿದ್ದಾರೆ. ಕೊಹ್ಲಿ ಆಡಿರುವ 7 ಪಂದ್ಯದಲ್ಲಿ 3 ಅರ್ಧಶತಕ ಸೇರಿದಂತೆ 317 ರನ್‌ ಬಾರಿಸಿದ್ದಾರೆ. ಡಿವಿಲಿಯರ್ ಆಡಿರುವ 6 ಪಂದ್ಯದಲ್ಲಿ 3 ಅರ್ಧಶತಕ ಸೇರಿದಂತೆ 280 ರನ್‌ ದಾಖಲಿಸಿದ್ದಾರೆ. ಈ ಹಂತದಲ್ಲಿ ಗರಿಷ್ಠ ರನ್‌ ದಾಖಲಿಸಿದವರಲ್ಲಿ ಕೊಹ್ಲಿ 3ನೇ ಸ್ಥಾನ, ಡಿವಿಲಿಯರ್ 7ನೇ ಸ್ಥಾನದಲ್ಲಿದ್ದಾರೆ.

ಪ್ಲೇಆಫ್ ಅವಕಾಶ ಇದ್ಯಾ?
ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 2 ಪಂದ್ಯ ಗೆದ್ದು, 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ. 

ಐಪಿಎಲ್‌ನಲ್ಲಿ ಶ್ರೇಷ್ಠ ಸಾಧನೆ
ಕಳೆದ 10 ಆವೃತ್ತಿಯಲ್ಲಿ ಆಡುತ್ತಿರುವ ಆರ್‌ಸಿಬಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. 2009 ರಲ್ಲಿ ಕೇವಿನ್‌ ಪೀಟರ್‌ಸನ್‌ ಮತ್ತು 2011ರಲ್ಲಿ ಡೇನಿಯಲ್‌ ವೆಟೋರಿ ನೇತೃತ್ವದಲ್ಲಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ಇದೇ ಆರ್‌ಸಿಬಿಯ ಗರಿಷ್ಠ ಸಾಧನೆ. ಉಳಿದಂತೆ 2010ರಲ್ಲಿ ಸೆಮಿಫೈನಲ್‌, 2015ರಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. 

ಜಾಲತಾಣದಲ್ಲಿ ಟ್ರೋಲ್‌
ಈ ಬಾರಿ ಕಪ್‌ ನಮ್ದೇ ಅಂತ ಆರ್‌ಸಿಬಿ ಆಟಗಾರರು ಹೇಳಿಕೊಂಡಿದ್ದು, ಈ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಆದರೆ, ಇದೀಗ ಆರ್‌ಸಿಬಿ ನಿರಂತರ ಸೋಲು ಅನುಭವಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ ಚಿಪ್‌ ನಮ್ದೇ ಅಂತ ಟ್ರೋಲ್‌ ಮಾಡಲಾಗುತ್ತಿದೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next