Advertisement

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು

04:29 PM May 22, 2023 | Team Udayavani |

ಇನ್ನೇನೂ ಊರನ್ನೇ ಮುಳುಗಿಸಿ ಬಿಡುತ್ತೇನೆ ಎಂಬಂತೆ ಸುರಿದಿದ್ದ ಮಳೆ ನಿಂತಿದ್ದರೂ, ಹೃದಯ ಕಡಲಾಗಿತ್ತು. ಊರಲ್ಲಿ ತಂಪು ಗಾಳಿ ಬೀಸಿದ್ದರೂ ಎದೆಯ ಭಾರದ ಶಾಖಕ್ಕೆ ಅದು ಹಿತವಾಗುತ್ತಿರಲಿಲ್ಲ. ಕಣ್ಣೆದುರು ಸಂತಸದಿಂದ ಕುಣಿಯುವ ಎದುರಾಳಿಗಳನ್ನು ಕಂಡಾಗ ಮನಸ್ಸಿಗೆ ಅದೇನೋ ಹಿಂಸೆ.. ಯಾಕೆ? ಮತ್ತೆ ಮತ್ತೆ ನಮಗ್ಯಾಕೆ? ದೇವರಂತಿರುವ ವಿರಾಟ್ ಕೊಹ್ಲಿಯೇ ಕಣ್ಣಂಚಲ್ಲಿ ನೀರು ಹರಿಸಿ ಅಸಹಾಯಕನಾಗಿ ಕುಳಿತಿರುವಾಗ ಮತ್ಯಾವ ದೇವರಲ್ಲಿ ಕೇಳಲಿ…! ಆದರೂ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಆರ್ ಸಿಬಿ ಮತ್ತೆ ಸೋತಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೃದಯದಲ್ಲಿಟ್ಟು ಆರಾಧಿಸುವ ಅಭಿಮಾನಿಗಳ ಪರಿಸ್ಥಿತಿಯಿದು.

ಗುಜರಾತ್ ಜೈಂಟ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯವನ್ನು ಆರ್ ಸಿಬಿ ಕೈಚೆಲ್ಲಿದೆ. ಒದ್ದೆ ಮೈದಾನದಲ್ಲಿ ಆರ್ ಸಿಬಿಯ ಬಹುಕಾಲದ ಟ್ರೋಫಿ ಕನಸು ಕೂಡಾ ಜಾರಿ ಹೋಗಿದೆ. ‘ಈ ಸಲ ಕಪ್ ನಮ್ದೇ, ಈ ಸಲ ಕಪ್ ನಮ್ದೇ’ ಎಂದು ಕೂಟದುದ್ದಕ್ಕೂ ಹೇಳಿಕೊಂಡು ಬಂದ ಅಭಿಮಾನಿಗಳು ಮತ್ತೆ ನಿರಾಶರಾಗಿದ್ದಾರೆ. ವಿರಾಟ್ ಕೊಹ್ಲಿ ಒಮ್ಮೆಯಾದರೂ ಟ್ರೋಫಿ ಎತ್ತಬೇಕು ಎಂಬ ಆಸೆಯಿಂದ ಕಾದಿದ್ದ ಕೋಟ್ಯಂತರ ಮನಸುಗಳು ಒಡೆದು ಹೋಗಿದೆ. ಮುಂಬೈ ಪ್ಲೇ ಆಫ್ ಗೆ ಕ್ಯಾಲಿಫೈ ಆಗಿದೆ.

ಸತತ ಮೂರು ವರ್ಷಗಳಿಂದ ಪ್ಲೇ ಆಫ್ ಆಡಿದ್ದ ಬೆಂಗಳೂರು ತಂಡ ಈ ಬಾರಿ ಲೀಗ್ ಹಂತದಲ್ಲೇ ತನ್ನ ವಹಿವಾಟು ಮುಗಿಸಿದೆ. ಕೊನೆಯ ಹಂತದಲ್ಲಿ ಸತತ ಪಂದ್ಯ ಗೆದ್ದು ಅಭಿಮಾನಿಗಳಿಗೆ ಜಯದ ರುಚಿ ಹತ್ತಿಸಿದ್ದ, ಟ್ರೋಫಿ ಆಸೆ ಚಿಗುರಿಸಿದ್ದ ರೆಡ್ ಆ್ಯಂಡ್ ಗೋಲ್ಡ್ ಆರ್ಮಿ, ಚಿನ್ನಸ್ವಾಮಿಯ ಅಂಗಳದಲ್ಲೇ ತವರು ಅಭಿಮಾನಿಗಳ ಎದುರು ಸೋಲನುಭವಿಸಿದೆ.

ಏನ್ರಿ, ನಿಮ್ ಆರ್ ಸಿಬಿ ಕಪ್ ಗೆಲ್ಲುವುದಿಲ್ಲ, ಸುಮ್ನೆ ESCN ಅಂತ ಬೊಬ್ಬೆ ಹಾಕುತ್ತೀರಿ ಎನ್ನುವವರಿಗೆ, ಆರ್ ಸಿಬಿ ಕಪ್ ಗೆದ್ದಿಲ್ಲ ಆದರೂ ಕಳೆದ 15 ಸೀಸನ್ ನಲ್ಲಿ 8 ಬಾರಿ ಪ್ಲೇ ಆಫ್ ತಲುಪಿದೆ. ಅಷ್ಟೇ ಅಲ್ಲದೆ ಮೂರು ಸಲ ಫೈನಲ್ ಆಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹುಚ್ಚು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ.

Advertisement

ಹಾಗಾದರೆ ಆರ್ ಸಿಬಿ ಸೋತಿದ್ದೆಲ್ಲಿ? ಪ್ರತಿ ಬಾರಿಯೂ ಎಡವುದು ಎಲ್ಲಿ ಎಂಬ ಪ್ರಶ್ನೆಗಳು ಸಾಮಾನ್ಯ. ಈ ಬಾರಿಯ ಕೂಟವನ್ನು ಒಮ್ಮೆ ಅವಲೋಕನ ಮಾಡಿದರೆ ಹಲವು ತಪ್ಪುಗಳು ಕಣ್ಣಿಗೆ ರಾಚುತ್ತವೆ.

ವಿರಾಟ್ ಕೊಹ್ಲಿ, ಫಾಪ್ ಡು ಪ್ಲೆಸಿಸ್ ಗ್ಲೆನ್ ಮ್ಯಾಕ್ಸವೆಲ್ ಎಂಬ ಕ್ರಿಕೆಟ್ ಲೋಕದ ಸ್ಟಾರ್ ಗಳು ಆರ್ ಸಿಬಿಯ ದೊಡ್ಡ ಶಕ್ತಿಗಳು. ಈ ಸೀಸನ್ ನ 14 ಪಂದ್ಯಗಳಲ್ಲಿ ತಂಡ ಗಳಿಸಿದ 2502 ರನ್‌ಗಳಲ್ಲಿ ಬರೋಬ್ಬರಿ 1769 ರನ್‌ ಈ ಮೂವರೇ ಗಳಿಸಿದ್ದಾರೆ. ಉಳಿದ ಬ್ಯಾಟ್ಸ್‌ಮನ್‌ ಗಳು 14 ಪಂದ್ಯಗಳಲ್ಲಿ ಮಾಡಿದ್ದು ಕೇವಲ 733 ರನ್‌. ಇಲ್ಲಿಯೇ ಆರ್ ಸಿಬಿ ಅರ್ಧ ಸೋತಿದ್ದು. ಫಾಫ್-ವಿರಾಟ್- ಮ್ಯಾಕ್ಸಿ ಬಿಟ್ಟರೆ ಉಳಿದ್ಯಾವ ಬ್ಯಾಟರ್ ಗಳು ನಮಗೂ ಬ್ಯಾಟಿಂಗಿಗೂ ಸಂಬಂಧವೇ ಇಲ್ಲ ಎಂಬಂತೆ ಆಡಿದರು. ಗುಜರಾತ್ ವಿರುದ್ಧದ ಡು ಆರ್ ಡೈ ಪಂದ್ಯದಲ್ಲೂ ತಂಡದ ಸ್ಕೋರ್ ನ ಅರ್ಧಕ್ಕಿಂತ ಹೆಚ್ಚು ಸ್ಕೋರ್ ವಿರಾಟ್ ಒಬ್ಬರೇ ಮಾಡಿದ್ರು ಎಂದರೆ ಬ್ಯಾಟಿಂಗ್ ಶಕ್ತಿ ಅರ್ಥವಾಗುತ್ತದೆ.

ಮುಂಬೈ ತಂಡದ ತಿಲಕ್ ವರ್ಮಾ, ನೇಹಲ್ ವಧೇರಾ, ಕೆಕೆಆರ್ ನ ರಿಂಕು ಸಿಂಗ್, ಗುಜರಾತ್ ನ ಸಾಯಿ ಸುದರ್ಶನ್, ಚೆನ್ನೈನ ದುಬೆಯಂತಹ ಭಾರತೀಯ ಪ್ರತಿಭೆಗಳು ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬಲ ತುಂಬಿದರೆ, ಬೆಂಗಳೂರು ತಂಡದಲ್ಲಿ ಮಾತ್ರ ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರೋರ್, ಅನುಜ್ ರಾವತ್, ಶಬಾಜ್ ನಂತಹ ಆಟಗಾರರು ಟೀಂ ಗೆ ಮತ್ತಷ್ಟು ತಲೆ ನೋವು ನೀಡಿದರು. ಮೊದಲ ಮೂರು ವಿಕೆಟ್ ಹೋದರೆ ಆರ್ ಸಿಬಿ ಸೋತಹಾಗೆ ಎಂದು ಅಪ್ಪಟ ಫ್ಯಾನ್ಸ್ ಗೂ ಅರಿವಾಗಿತ್ತು. 2022ರ ಸೀಸನ್ ನಲ್ಲಿ ಅಬ್ಬರಿಸಿದ್ದ ಡಿಕೆ ಈ ಬಾರಿ ಮಾತ್ರ ಪೆವಿಲಿಯನ್ ನಲ್ಲೇ ಕೂತಿದ್ದು ಹೆಚ್ಚು.

ಚಾಹಲ್ ನನ್ನು ಬಿಟ್ಟು ಹಸರಂಗಗೆ ಮಣೆ ಹಾಕಿದ ಫ್ರಾಂಚೈಸಿ ಈ ಬಾರಿ ಕೈ ಸುಟ್ಟುಕೊಂಡಿತು. ಕಳೆದ ಸೀಸನ್ ನಲ್ಲಿ ಮಿಂಚಿದ್ದರೂ ಈ ಬಾರಿ ಮಾತ್ರ ಲಂಕನ್ ಸ್ಪಿನ್ನರ್ ಜಾದೂ ನಡೆಯಲಿಲ್ಲ. ಪರ್ಪಲ್ ಪಟೇಲ್ ಎಂದು ಹೆಸರು ಮಾಡಿದ್ದ ಹರ್ಷಲ್ ಪಟೇಲ್ ಈ ಬಾರಿ ಯಾರ್ಕರ್ ಗಿಂತ ಫುಲ್ ಟಾಸ್ ಹಾಕಿದ್ದೇ ಹೆಚ್ಚು. ಮೊಹಮ್ಮದ್ ಸಿರಾಜ್ ಬಿಟ್ಟರೆ ಉಳಿದ ಯಾವ ಬೌಲರ್ ಗಳೂ ಮ್ಯಾಚ್ ವಿನ್ ಮಾಡಿಸುವ ಭರವಸೆಯೇ ಮೂಡಿಸಲಿಲ್ಲ.

ಮತ್ತದೇ ಬೇಸರ, ಮತ್ತೆ ಸಂಜೆ ಎಂಬಂತೆ ಮತ್ತೊಂದು ಸೀಸನ್ ಮುಗಿದಿದೆ. ಅಭಿಮಾನಿಗಳ ಕಾತರ ಮತ್ತೆ ಮುಂದುವರಿದಿದೆ. ವಿರಾಟ್ ಕೊಹ್ಲಿ ಎಂಬ ಕ್ರಿಕೆಟ್ ಲೋಕದ ಅಪ್ಪಟ ದಿಗ್ಗಜನ ಕನಸು ಮತ್ತೆ ಮುಂದುವರಿದಿದೆ. ಮುಂದಿನ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಬೇಸರದ ನಡುವೆಯೂ ವಿಶ್ವಾಸದ ನಗು ಸೂಸುತ್ತಿದ್ದಾರೆ. ಆರ್ ಸಿಬಿಗೆ ಅಭಿಮಾನವೇ ಆಭರಣ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next