Advertisement

ಆರ್‌ಸಿಬಿಗೆ ಗೆಲುವಿನ ದಡ ದೂರ!

12:30 PM Apr 22, 2017 | Team Udayavani |

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಬಹು ಚರ್ಚಿತ ತಂಡ ಬೆಂಗಳೂರಿನ ರಾಯಲ್‌ ಚಾಲೆಂಜರ್. ದುರಂತವೆಂದರೆ ಈ ತಂಡ ಕಳೆದ ಒಂಬತ್ತು ವರ್ಷಗಳಲ್ಲಿ ಎದುರಾಳಿಗಳಿಗೆ ಸವಾಲು ಎನ್ನಿಸಿಕೊಂಡಿದ್ದಕ್ಕಿಂತ ತಂಡದೊಳಗೇ ಹತ್ತು ಹಲವು ಅಡೆತಡೆಗಳನ್ನು ಅನುಭವಿಸುವಂತಾಗಿದೆ. ಪ್ರತಿಭೆಗಳನ್ನು ತೂಕಕ್ಕೆ ಹಾಕಿದರೆ ಕನಿಷ್ಠ ಎರಡು ಬಾರಿಯಾದರೂ ಐಪಿಎಲ್‌ ಚಾಂಪಿಯನ್‌ ಎನ್ನಿಸಿಕೊಳ್ಳಬೇಕಿದ್ದ ತಂಡ ಎರಡು ಬಾರಿ ರನ್ನರ್‌ ಅಪ್‌ ಆಗಿದ್ದೇ ಸಾಧನೆ! ಅದರಲ್ಲೂ ಕಳೆದ ಬಾರಿ ಮೊದಲ ಸುತ್ತಿನ ಏಳು ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದಿದ್ದ ತಂಡ ಕೊನೆಗೆ ವಿರಾಟ್‌ ಕೊಹ್ಲಿ ನಾಲ್ಕು ಶತಕಗಳಿಂದ ಸಂಪಾದಿಸಿದ 973 ರನ್‌ಗಳ ತಳಹದಿಯ ಮೇಲೆ ಫೈನಲ್‌ವರೆಗೆ ಸಾಗಿತ್ತು. ಎರಡನೇ ಹಂತದಲ್ಲಿ ಆಡಿದ 8ರಲ್ಲಿ ಏಳನ್ನು ಗೆದ್ದಿದ್ದು……ಅದೃಷ್ಟ!

Advertisement

ಆರಕ್ಕೆ ಎರಡು ಮಾತ್ರ!
ಈ ಬಾರಿಯದ್ದೂ ಅದೇ ಕತೆ. ಆಡಿದ ಮೊದಲ 5 ಪಂದ್ಯಗಳಲ್ಲಿ ಏಕೈಕ ಗೆಲುವು ಪಡೆದ ಆರ್‌ಸಿಬಿ 214 ರನ್‌ ಗಳಿಸಿಯೂ ಆರನೇ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ಸೋಲಿಸಲು ಪರದಾಡಿತು. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸ್ಟಾರ್‌ಗಳನ್ನು ಹೊಂದಿರುವ ಆರ್‌ಸಿಬಿ ಸಮತೋಲಿತ ತಂಡ ಅಲ್ಲ ಎಂಬುದು ಹಲವು ಬಾರಿ ರುಜುವಾತಾಗಿದೆ. ಬ್ಯಾಟಿಂಗ್‌ನಲ್ಲಿ ಕೊಹ್ಲಿ, ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್, ಕೇದಾರ್‌ ಜಾಧವ್‌ರಂತವರನ್ನು ಹೊಂದಿರುವ ತಂಡ ಅಷ್ಟಿದ್ದರೆ ಸಾಕು ಎಂದುಕೊಂಡಿದ್ದೇ ಎಡವಟ್ಟಾಗಿದೆ. ಬೌಲಿಂಗ್‌ ಪಡೆಯನ್ನು ಬಲಪಡಿಸದಿರುವುದರಿಂದಲೇ ಆರ್‌ಸಿಬಿ ರನ್‌ಗಳನ್ನು ಎದುರಾಳಿಗಳು ಬೆನ್ನಟ್ಟುತ್ತಿದ್ದಾರೆ. 

ಐಪಿಎಲ್‌ ತಂಡಗಳಿಗೆ ಬ್ಯಾಟಿಂಗ್‌ ಪ್ರಬಲವಾಗಿದ್ದರೆ ಪಂದ್ಯದ ಗೆಲುವು ಸಲೀಸು ಎಂಬ ಭ್ರಮೆಯಿದೆ. ಯುವರಾಜ್‌ರಂಥವರಿಗೆ ಹೆಚ್ಚು ಬಿಡ್ಡಿಂಗ್‌ ಬರಲು ಇದು ಹಿನ್ನೆಲೆ ಅಥವಾ ಬ್ಯಾಟಿಂಗ್‌ ಜೊತೆ ಬೌಲಿಂಗ್‌ ಕೂಡ ಮಾಡಬಲ್ಲರು ಎಂಬ ಪ್ರತಿಭೆಗಳಿಗೆ ಕಿಮ್ಮತ್ತು ಜಾಸ್ತಿ. ಅಸಲಿಯತ್ತಾದ ಬೌಲಿಂಗ್‌ ಪ್ರತಿಭಾನ್ವಿತರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ರವೀಂದ್ರ ಜಡೇಜಾ ಅವರಂತಹ ಟಾಪ್‌ ಒನ್‌ ಬೌಲರ್‌ ಕೂಡ 4 ಓವರ್‌ಗಳಲ್ಲಿ 50-60 ರನ್‌ ಹೊಡೆಸಿಕೊಳ್ಳುವಾಗ ರನ್‌ ಗುಡ್ಡೆ ಹಾಕಿ ಗೆಲ್ಲುವುದೇ ಸೂತ್ರವಾಗಿಬಿಟ್ಟಿದೆ. ಈಗಲೂ ಒಂದು ತಂಡದ ಇಬ್ಬರು ಟಾಪ್‌ ಬೌಲರ್‌ಗಳು ಒಟ್ಟಾಗಿ 8 ಓವರ್‌ಗಳಲ್ಲಿ ರನ್‌ ನಿಯಂತ್ರಿಸಿದರೆ ಸಾಕು, ಪಂದ್ಯದ ಫ‌ಲಿತಾಂಶ ಪಲ್ಲಟವಾಗುತ್ತದೆ.

ಸ್ವ ನೆಲದ ಭಯ!
ಪ್ರತಿ ತಂಡಕ್ಕೆ ಅವರ ಹೋಂ ಗ್ರೌಂಡ್‌ ಎಂದರೆ ಹೆಚ್ಚು ಅನುಕೂಲ. ಆರ್‌ಸಿಬಿಗೆ ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವೇ ಹೆಚ್ಚು ತಲೆ ಬಿಸಿ! ಇಲ್ಲಿನ ಸಣ್ಣ ಬೌಂಡರಿ ಮತ್ತು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ಇರುವ ಕಾರಣ ಬ್ಯಾಟಿಂಗ್‌ಗೆ ಅನುಕೂಲ ಹೆಚ್ಚು.  ದುರ್ಬಲ ಎನ್ನಬಹುದಾದ ಬೌಲಿಂಗ್‌ ಪಡೆ ಹೊಂದಿರುವ ಕಾರಣಕ್ಕಾಗಿಯೇ ಆರ್‌ಸಿಬಿಗೆ ಬೆಂಗಳೂರಿನಲ್ಲಿ ಆಟ ಎಂದರೆ ಅಲರ್ಜಿ. ಚಿನ್ನಸ್ವಾಮಿಯಲ್ಲಿ ಆಡಿದ 61 ಪಂದ್ಯಗಳಲ್ಲಿ ಆರ್‌ಸಿಬಿ ಶೇ. 50ಕ್ಕಿಂತ ಕಡಿಮೆ ಪಂದ್ಯ ಗೆದ್ದಿದೆ. 30 ಗೆಲುವು, 29 ಸೋಲು, 2 ಫ‌ಲಿತಾಂಶ ಕಂಡಿಲ್ಲ. ಆರ್‌ಸಿಬಿ ಹೋಂ ಗ್ರೌಂಡ್‌ ಹೊಡೆತದಿಂದ ಬಚಾವಾಗಿಲ್ಲ.

ಐಪಿಎಲ್‌ಗಾಗಿ ಬೆಂಗಳೂರು ಕೋಟಿ ಕೋಟಿ ಕೊಟ್ಟು ಸ್ಟಾರ್‌ ವಿದೇಶಿ ಆಟಗಾರರನ್ನು ಕರೆತಂದಿರಬಹುದು. ಆದರೆ ನಿಯಮಗಳ ಪ್ರಕಾರ ನಾಲ್ವರು ಸ್ವದೇಶೀಯರಲ್ಲದ ಆಟಗಾರರನ್ನಷ್ಟೇ ಒಂದು ಪಂದ್ಯದಲ್ಲಿ ಆಡಿಸಬಹುದು. ಇದೂ ಆರ್‌ಸಿಬಿಗೆ ಧಕ್ಕೆಯಾಗಿದೆ. ಕರ್ನಾಟಕದ ಅಪ್ಪಟ ಪ್ರತಿಭೆಗಳಾದ ರಾಬಿನ್‌ ಉತ್ತಪ್ಪ, ಮನೀಶ್‌ ಪಾಂಡೆ, ಕರುಣ್‌ ನಾಯರ್‌ ಅವರಂಥವರು ಆರ್‌ಸಿಬಿ ಜೊತೆಗಿಲ್ಲ. ಈ ವರ್ಷ ಕೆ.ಎಲ್‌.ರಾಹುಲ್‌ ಗಾಯಗೊಂಡಿರುವುದರಿಂದ ಅವರ ಸೇವೆಯೂ ಅಲಭ್ಯ. ಇತ್ತ ತಂಡಕ್ಕೆ ಭರವಸೆ ಕೊಡಬೇಕಾಗಿದ್ದ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ತರದವರು ಕ್ಲಿಕ್‌ ಆಗುತ್ತಿಲ್ಲ. ಎಲ್ಲೋ ಒಂದು ಕಡೆ, ಆರ್‌ಸಿಬಿ ಕೋಚ್‌ಗಳ ಬೆಂಬಲ ಪಡೆ ಅವರ ಬೌಲಿಂಗ್‌, ಬ್ಯಾಟಿಂಗ್‌ಗೆ ಆತ್ಮವಿಶ್ವಾಸದ ಟಾನಿಕ್‌ ನೀಡುವಲ್ಲಿ ವಿಫ‌ಲವಾಗುತ್ತಿದೆ.

Advertisement

ಡೆತ್‌ ಓವರ್‌ಗಳಲ್ಲಿ ಬೆಂಗಳೂರು ಬೌಲರ್‌ಗಳು ಸುಲಭದ ತುತ್ತಾಗುತ್ತಿದ್ದಾರೆ. ಈ ಬಾರಿ ಮೈಕೆಲ್‌ ಸ್ಟಾರ್ಕ್‌ರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ನ‌ ಬಿಳಿ ಚೆಂಡಿನ ಬೌಲರ್‌ ಮಿಲ್ಸ್‌ ತಂಡವನ್ನು ಆತುಕೊಳ್ಳಬೇಕಿದೆ. ಇದು ಕೂಡ ಕ್ಲಿಕ್‌ ಆಗುತ್ತಿಲ್ಲ. ನಾಯಕತ್ವದ ಒಜ್ಜೆಯನ್ನು ತಾತ್ಕಾಲಿಕವಾಗಿ ಹೆಗಲ ಮೇಲೆ ತೆಗೆದುಕೊಂಡಿದ್ದ ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌, ಅದು ಹೆಗಲ ಮೇಲಿರುವವರೆಗೂ ಹೀನಾಯ ಪ್ರದರ್ಶನ ನೀಡಿದರು. ಯುವಕ ಯಜುವೇಂದ್ರ ಚಾಹಲ್‌, ಪವನ್‌ ನೇಗಿ ಮಧ್ಯದ ಓವರ್‌ಗಳನ್ನು ನಿರ್ವಹಿಸುತ್ತಿರುವುದು ಸಮಾಧಾನ ತಂದಿದೆ. ಆದರೆ ಕರ್ನಾಟಕದ ಅರವಿಂದ್‌, ಬಿನ್ನಿ ಕೊಡುಗೆಯೂ ಬೇಕಾಗಿದೆ.

ಗಾಯಗೊಂಡ ಆರ್‌ಸಿಬಿ!
ಈ ವರ್ಷ ಗಾಯಾಳುಗಳ ಸಮಸ್ಯೆ ಆರ್‌ಸಿಬಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿರಾಟ್‌ ಕೊಹ್ಲಿ ಮೊದಲ ನಾಲ್ಕು ಪಂದ್ಯದಿಂದ ಹೊರಗುಳಿದರು. ಅದರಲ್ಲಿ ತಂಡಕ್ಕೆ ಮೂರು ಸೋಲು. ಎಬಿ ಡಿವಿಲಿಯರ್ ಆಡಿದ್ದು  ಕೇವಲ ಎರಡು ಪಂದ್ಯ! ಈಗಲೂ ಅವರ ಫಿಟ್‌ನೆಸ್‌ ಅನುಮಾನಗಳನ್ನು ಹುಟ್ಟಿಸಿದೆ. ಕ್ರಿಸ್‌ ಗೇಲ್‌ ಬ್ಯಾಟ್‌ ಬೀಸಬಲ್ಲರು, ವಿಕೆಟ್‌ ಮಧ್ಯೆ ಅವರು ರನ್‌ ಕದಿಯುವುದನ್ನು ಊಹಿಸಲೂ ಅಸಾಧ್ಯ. ಕೆ.ಎಲ್‌.ರಾಹುಲ್‌ ಈ ಋತುವಿನಲ್ಲಿ ಆಡುವುದೇ ಇಲ್ಲ. ಇಂತಹ ವಿಚಾರಗಳೂ ಆರ್‌ಸಿಬಿಯನ್ನು ಕಾಡುತ್ತಿದೆ.

ಭಾರತದಲ್ಲಿ ಈ ಮುನ್ನ ರಣಜಿ ಪಂದ್ಯಗಳ ಗೆಲುವು ಬಹುತೇಕ ಟಾಸ್‌ ಗೆಲುವಿನ ಮೇಲೆ ನಿಂತಿರುತ್ತಿತ್ತು. ಟಾಸ್‌ ಗೆಲ್ಲು, ಬ್ಯಾಟ್‌ ಮಾಡಿ ಬೃಹತ್‌ ಮೊತ್ತ ಪೇರಿಸು, ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ ಜಯ ದಾಖಲಿಸು ಎಂಬ ಸೂತ್ರ ಜಾರಿಯಲ್ಲಿತ್ತು. ನಿಧಾನವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟಾಸ್‌ ಆಧಾರಿತವಾಗುತ್ತಿದೆ. ಟಾಸ್‌ ಗೆದ್ದವರು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ರನ್‌ ಚೇಸ್‌ ಮಾಡುವುದು ಇಂತಹ ಬ್ಯಾಟಿಂಗ್‌ ಪಿಚ್‌ಗಳಲ್ಲಿ ಸುಲಭವಾಗುತ್ತಿದೆ. ಮಂಗಳವಾರದವರೆಗೆ 12 ಪಂದ್ಯಗಳನ್ನು ರನ್‌ ಹಿಂಬಾಲಿಸಿದ ತಂಡ ಗೆದ್ದಿದ್ದರೆ, ಎಂಟು ಪಂದ್ಯವಷ್ಟೇ ಮೊದಲು ಬ್ಯಾಟ್‌ ಮಾಡಿದವರ ಪರವಾಗಿದೆ. 

2017ರ ಐಪಿಎಲ್‌ನಲ್ಲಿ ರನ್‌ಗಳು, ಸಿಕ್ಸರ್‌ಗಳು, ಸುರೇಶ್‌ ರೈನಾ ಹಿಡಿದ ಅಮೋಘ ಕ್ಯಾಚ್‌ ಮೊದಲಾದವು ದಾಖಲಾಗುತ್ತಿವೆ. ಆದರೆ ಬೆಂಗಳೂರು ರಾಯಲ್ಸ್‌ ಚಾಲೆಂಜರ್ ಮಾತ್ರ ಸಮಾಧಾನಕರ ಸ್ಥಿತಿಯಲ್ಲಿಲ್ಲ. ಇಂತಹ ತಂಡಕ್ಕೆ ಪ್ರಶಸ್ತಿ ಮರೀಚಿಕೆಯಾಗಿ ಉಳಿದರೆ ಮತ್ತೂಮ್ಮೆ ನೆನಪಿಸಿಕೊಳ್ಳಬೇಕಾದುದು, ಕೇವಲ ಬ್ಯಾಟ್ಸ್‌ಮನ್‌ಗಳಿಂದ ಪಂದ್ಯ ಗೆಲ್ಲಲಾಗುವುದಿಲ್ಲ!

ಕಳಪೆ ಅಂಪೈರಿಂಗ್‌; ಬರಲಿ ಡಿಆರ್‌ಎಸ್‌!

ಐಪಿಎಲ್‌ನಲ್ಲಿನ ಅಂಪೈರಿಂಗ್‌ ಬಗ್ಗೆ ಪ್ರತಿ ಬಾರಿ ಆಕ್ಷೇಪ ಇದ್ದದ್ದೇ, ಅದು ಈ ಬಾರಿ ಇನ್ನಷ್ಟು ಹೆಚ್ಚಾಗಿದೆ. ಒಂದು ಮಾಹಿತಿಯ ಪ್ರಕಾರ, ಕನಿಷ್ಠ ಆರು ಎಲ್‌ಬಿಡಬುÉÂ ತೀರ್ಮಾನಗಳು ಎಡವಟ್ಟಿನದು. ಮುಂಬೈ ಇಂಡಿಯನ್ಸ್‌ನ ಜೋ ಬಟ್ಲರ್‌ ಎರಡೆರಡು ಬಾರಿ ತಪ್ಪು ಎಲ್‌ಬಿಡಬುÉÂ ತೀರ್ಪಿಗೆ ಬಲಿಯಾದರು. ರೋಹಿತ್‌ ಶರ್ಮ ಇಂತಹ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ದಂಡವನ್ನೂ ತೆತ್ತರು. ಅದಕ್ಕೆ ಪತ್ರಿಕಾ ಗೋಷ್ಠಿಯಲ್ಲಿ, ಅಂಪೈರ್‌ ತೀರ್ಪು ಕುರಿತ ಪ್ರಶ್ನೆಗಳಿಗೆ ಉತ್ತರಿಸಿ, ದುಬಾರಿ ದಂಡಗಳಿರುವುದರಿಂದ ನಾನು ಇದಕ್ಕೆಲ್ಲ ಉತ್ತರಿಸಲಾಗುವುದಿಲ್ಲ ಎಂದು ಪರೋಕ್ಷವಾಗಿ ಅಸಹನೆಯನ್ನು ವ್ಯಕ್ತಪಡಿಸಿಯೂಬಿಟ್ಟರು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸುವ ಡಿಆರ್‌ಎಸ್‌ ಪದ್ಧತಿ ಐಪಿಎಲ್‌ಗ‌ೂ ಬರಲಿ ಎಂಬ ಕೂಗು ಕೇಳಿಬಂದಿದೆ.

ಅದಿರಲಿ, ಸನ್‌ರೈಸರ್ನ ಡೇವಿಡ್‌ ವಾರ್ನರ್‌ ಮುಂಬೈ ಇಂಡಿಯನ್ಸ್‌  ನ ಜಸಿøàತ್‌ ಬೂಮ್ರಾ ಅವರ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದವರು ಏಳನೇ ಓವರ್‌ನ ಮೊದಲ ಎಸೆತ ಎದುರಿಸಿದರೂ ಅಂಪೈರ್‌ಗಳಾದ ನಿತಿನ್‌ ಮೆನನ್‌, ಸಿ.ಕೆ.ನಂದನ್‌ ಸುಮ್ಮನುಳಿದರಲ್ಲ! ಅತ್ತ ಮುಂಬೈನ ಕೆವಿನ್‌ ಪೊಲಾರ್ಡ್‌ ಪುಣೆಯ ಇಮ್ರಾನ್‌ ತಹೀರ್‌ ಎದುರು ಅಕ್ಷರಶಃ ಎಲ್‌ಬಿಡಬುÉÂ ಆಗಿದ್ದರೂ ಅಂಪೈರ್‌ ರವಿ ಅಲ್ಲಾಡಲಿಲ್ಲ. ಪೊಲಾರ್ಡ್‌ ತಮ್ಮ ಖಾತೆಗೆ ಮತ್ತೂ 21 ರನ್‌ ಸೇರಿಸಿದರು. ಇತ್ತ ತಮಾಷೆಗೆ ಡಿಆರ್‌ಎಸ್‌ಗೆ ಸಂಜ್ಞೆ ಮಾಡಿದ ಸೂಪರ್‌ಜಯಿಂಟ್‌ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ವಾಗ್ಧಂಡನೆಗೆ ತುತ್ತಾಗಬೇಕಾಯಿತು!

 ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next