Advertisement

ನೀರು ಯೋಜನೆ ತನಿಖೆಗೆ ಆರ್‌ಸಿ ಸೂಚನೆ

03:45 PM Oct 14, 2018 | Team Udayavani |

ಯಾದಗಿರಿ: ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಕೆಲ ಯೋಜನೆಗಳು ವಿಫಲವಾಗಿರುವುದಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಜಿಪಂ ಸಿಇಒಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರಿನ ಒಂದೊಂದು ಯೋಜನೆಗೆ 7 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿರುತ್ತದೆ.

ಕನಿಷ್ಠ 10 ವರ್ಷಗಳಾದರೂ ಜನರಿಗೆ ನೀರು ಸರಬರಾಜು ಮಾಡಿದ ಮೇಲೆ ಮಷಿನ್‌ನಲ್ಲಿ ತೊಂದರೆ ಮತ್ತಿತರೆ ಕಾರಣ
ಹೇಳಿದರೆ ನಂಬಬಹುದು. ಆದರೆಬ ಹನಿ ನೀರು ಕೂಡ ಪೂರೈಸದೆ ಯೋಜನೆ ವಿಫಲವಾದರೆ ಕೋಟ್ಯಂತರ ಹಣ
ವ್ಯರ್ಥವಾಗುತ್ತದೆ. ಆದ್ದರಿಂದ ಈ ಬಗ್ಗೆ ತಂಡ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಹೇಳಿದರು.

ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಜಿಲ್ಲೆಯ ಜನಪ್ರತಿನಿಧಿಗಳಿಂದ ದೂರು ಬಂದಿದೆ. ಈ ವರ್ಷ ಬರಗಾಲ ಇರುವುದರಿಂದ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆದೇಶಿಸಿದರು.

ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಯಾವುದೇ ಇಲಾಖೆ ಅಥವಾ ಏಜೆನ್ಸಿ ಕೆಲಸ ನಿರ್ವಹಿಸಿದರೂ ಮತ್ತು ಯಾವುದೇ ಯೋಜನೆ ಹಣದಲ್ಲಿ ಕಾಮಗಾರಿ ನಡೆಸಿದರೂ ಅದರ ಸಂಪೂರ್ಣ ಜವಾಬ್ದಾರಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗಕ್ಕೆ ಇರುತ್ತದೆ. ಗ್ರಾಮೀಣ ಜನರಿಗೆ ಕುಡಿಯುವ ನೀರು ಸರಬರಾಜಿನಲ್ಲಿ
ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ವಿಭಾಗದ ಇಂಜಿನಿಯರ್‌ ರಾಜಕುಮಾರ ಅವರಿಗೆ ಸೂಚಿಸಿದರು.

Advertisement

ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯಡಿ ಎಸ್‌ಸಿ-ಎಸ್‌ಟಿ ಜನರು ಶೇ.50ಕ್ಕಿಂತ ಹೆಚ್ಚಿರುವ ಗ್ರಾಮ ಆಯ್ಕೆ
ಮಾಡಲಾಗುತ್ತದೆ. ಈ ಯೋಜನೆಯಡಿ ಎಸ್‌ಸಿ-ಎಸ್‌ಟಿ ಜನರ ಕಾಲೊನಿಗಳಲ್ಲಿ ಮಾತ್ರ ಕಾಮಗಾರಿ ನಡೆಸುವುದಷ್ಟೇ
ಅಲ್ಲದೆ, ಸಾಮಾನ್ಯ ಜನರ ಕಾಲೊನಿ ಹಾಗೂ ಸಾಧ್ಯವಿದ್ದರೆ ಇಡೀ ಗ್ರಾಮದಲ್ಲಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ಇಂತಹ ಗ್ರಾಮದಲ್ಲಿ ಈಗಾಗಲೇ ಬೇರೆ ಯೋಜನೆಗಳಲ್ಲಿ ಕೆಲಸ ನಡೆಯುತ್ತಿದ್ದರೆ ಗ್ರಾಮ ಬದಲಾವಣೆಗೆ ಕೆಆರ್‌ಐಡಿಎಲ್‌ ಇಂಜಿನಿಯರ್‌ಗಳು ಎಚ್‌ಕೆಆರ್‌ಡಿಬಿಗೆ ಬರಹ ರೂಪದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು. 

ಡಿಸಿ ಎಂ. ಕೂರ್ಮಾರಾವ್‌, ಜಿಪಂ ಸಿಇಒ ಕವಿತಾ ಎಸ್‌. ಮನ್ನಿಕೇರಿ, ಎಡಿಸಿ ಪ್ರಕಾಶ ಜಿ. ರಜಪುತ, ಎಚ್‌ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ, ಜಿಪಂ ಉಪ ಕಾರ್ಯದರ್ಶಿ
ವಸಂತರಾವ್‌ ವಿ. ಕುಲಕರ್ಣಿ, ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next