ಮುಂಬಯಿ: ಭಾರತದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆ ಮಂಗಳ ವಾರದಿಂದ ಆರಂಭವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್ಸಿ ಬ್ಯಾಂಕ್, ಐಸಿ ಐಸಿಐ ಸೇರಿದಂತೆ ಒಟ್ಟು 9 ಬ್ಯಾಂಕುಗಳು ಸರಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸಲಿವೆ.
ಪ್ರಸ್ತುತ ಸಗಟು ವಲಯದಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತದೆ. ಅಂದರೆ, ಸರಕಾರಿ ಬಾಂಡುಗಳಲ್ಲಿನ ಸೆಕೆಂಡರಿ ಮಾರ್ಕೆಟ್ ವಹಿವಾಟುಗಳ ಪಾವತಿಗೆ ಇದನ್ನು ಉಪಯೋಗಿಸಲಾಗುತ್ತದೆ. ಚಿಲ್ಲರೆ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಯಿಗಳ ಮೊದಲ ಪ್ರಾಯೋಗಿಕ ಬಳಕೆಯು ಒಂದು ತಿಂಗಳೊಳಗೆ ಆಯ್ದ ಪ್ರದೇಶಗಳಲ್ಲಿ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಆರಂಭಿಕ ಪ್ರಾಯೋಗಿಕ ಬಳಕೆಯ ಫಲಿತಾಂಶವನ್ನು ಆಧರಿಸಿ, ಮುಂದಿನ ಭಾಗದಲ್ಲಿ ಇತರೆ ಸಗಟು ವಹಿವಾಟು ಮತ್ತು ಗಡಿಯಾಚೆಗಿನ ಪಾವತಿಯಲ್ಲೂ ಡಿಜಿಟಲ್ ರೂಪಾಯಿ ಬಳಕೆ ಆರಂಭಿಸಲಾಗುವುದು ಎಂದೂ ಆರ್‌ಬಿಐ ಹೇಳಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎನ್ನುವುದು ವರ್ಚುವಲ್ ಕರೆನ್ಸಿಯಾಗಿದೆ. ಆದರೆ, ಇದಕ್ಕೂ ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗೂ ಸಂಬಂಧವಿಲ್ಲ. ಖಾಸಗಿ ವರ್ಚುವಲ್ ಕರೆನ್ಸಿಯಲ್ಲಿ “ವಿತರಿಸುವಾತ’ ಇಲ್ಲದ ಕಾರಣ ಅದು ಯಾವುದೇ ವ್ಯಕ್ತಿಯ ಹಣ ಅಥವಾ ಹೊಣೆಗಾರಿಕೆ ಎಂದು ಪರಿಗಣಿಸಲ್ಪಡುವುದಿಲ್ಲ.