ಹೊಸದಿಲ್ಲಿ : ಜಾಗತಿಕ ಶೇರು ತಲ್ಲಣದ ನಡುವೆ ದೇಶದಲ್ಲಿ ಹಣದುಬ್ಬರವು ದೃಢತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ತನ್ನ ಬಡ್ಡಿ ದರಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದೆ.
ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರನ್ನು ಒಳಗೊಂಡ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿ (ಎಂಪಿಸಿ) ರಿಪೋ ದರವನ್ನು ಈಗಿನ ಶೇ.6ರಲ್ಲಿ ಹಾಗೂ ರಿವರ್ಸ್ ರಿಪೋ ದರವನ್ನು ಈಗಿನ ಶೇ.5.75ರಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿತು.
ಈ ದರಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದಕ್ಕೆ ಎಂಪಿಸಿಯ 6 ಸದಸ್ಯರ ಪೈಕಿ 5 ಸದಸ್ಯರು ಬಲವಾದ ಒಲವುತೋರಿದರು.
ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಬೆಂಬಲಿಸುವ ಉದ್ದೇಶದೊಂದಿಗೆ ಆರ್‌ಬಿಐ ತಟಸ್ಥ ನಿಲುವನ್ನು ತಳೆಯಬೇಕಾಯಿತು; ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.0.25ರ ಕಡಿತ ಕಂಡ ರಿಪೋ ದರವನ್ನು ಶೇ.6ರಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿತು. 2015ರಲ್ಲಿನ ಅಸಾಮಾನ್ಯ ಕೆಳ ಮಟ್ಟ ಹಣದುಬ್ಬರದ ಫಾಯಿದೆ ತೆಗೆದುಕೊಂಡು ಶೇ.2ರಷ್ಟು ಕಡಿತ ಮಾಡಲ್ಪಟ್ಟಿದ್ದ ಈ ದರವನ್ನು ಅಂತೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಆರ್‌ಬಿಐ ಹೇಳಿಕೆ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಾದ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರ ಶೇ.5.21ಕ್ಕೆ ಏರುವ ಮೂಲಕ ಅದು ಆರ್‌ಬಿಐನ ಹಿತಕಾರಿ ಮಟ್ಟವನ್ನು ದಾಟಿತು. ಬಳಕೆದಾರರ ಬೆಲೆ ಸೂಚ್ಯಂಕ – ಸಿಪಿಐ – ಆಧಾರಿತ ಚಿಲ್ಲರೆ ಹಣದುಬ್ಬರವು ಕಳೆದ ವರ್ಷ ನವೆಂಬರ್‌ನಲ್ಲಿ ಶೇ.4.88 ಇತ್ತು. ಡಿಸೆಂಬರ್‌ನಲ್ಲಿ ಅದು ಶೇ.3.4ಕ್ಕೆ ಇಳಿದಿತ್ತು.
ಬಾಂಡ್ ಹೂಡಿಕೆದಾರರು ಈಗಾಗಲೇ ಸಂಭವನೀಯ ಬಡ್ಡಿ ದರ ಏರಿಕೆಯನ್ನು ಅರಗಿಸಿಕೊಂಡಿದ್ದು 10 ವರ್ಷಗಳ ಬಾಂಡ್ ಇಳುವರಿ ಕಳೆದ ಜುಲೈನಿಂದ 80 ಮೂಲಾಂಕಗಳ ವೃದ್ಧಿಯನ್ನು ಕಂಡಿದೆ. ಇದು 2013ರ ರೂಪಾಯಿ ಬಿಕ್ಕಟ್ಟಿನ ಬಳಿಕ ಅತೀ ದೊಡ್ಡ ನಡೆಯಾಗಿದೆ.