Advertisement
ಇದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಬಸವರಾಜ ರಾಯರೆಡ್ಡಿ, ತಮ್ಮನ್ನು ಮತ್ತು ತಮ್ಮ ಹುದ್ದೆಯನ್ನು ಟೀಕಿಸುತ್ತಿರುವ ವಿಪಕ್ಷಗಳಿಗೆ ನೀಡಿದ ತಿರುಗೇಟು.ಸಲಹೆಗಾರ ಹುದ್ದೆ ರೂಪದಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. 14 ಬಾರಿ ಬಜೆಟ್ ಮಂಡಿಸಿದವರಿಗೆ ಇವರೇನು ಆರ್ಥಿಕ ಸಲಹೆ ನೀಡಬಲ್ಲರು? ಸರಕಾರದ ವಿರುದ್ಧ ತಮ್ಮ ಪ್ರತಿರೋಧದ ದನಿ ಅಡಗಿಸಲು ಇಂತಹದ್ದೊಂದು ಹುದ್ದೆ ಸೃಷ್ಟಿಸಿ, ತಂದು ಕೂರಿಸಲಾಗಿದೆ ಅಷ್ಟೇ… ಹೀಗೆ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ದಿನದಿಂದ ಬಸವರಾಜ ರಾಯರೆಡ್ಡಿ ವಿಪಕ್ಷಗಳಿಗೆ ಆಹಾರವಾಗಿದ್ದಾರೆ. ಈ ಟೀಕಾಸ್ತ್ರಗಳಿಗೆ ಸ್ವತಃ ರಾಯರೆಡ್ಡಿ ಈ ಹಿಂದೆ ಎತ್ತಿದ “ಅಪಸ್ವರ’ಗಳು ಕೂಡ ಕಾರಣ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾದವರು.
ಆರ್ಥಿಕ ಸಲಹೆ ನೀಡುವುದು ಒಂದು ನಿರಂತರವಾದ ಕೆಲಸ. ಇಲ್ಲಿ 14, 15 ಅಥವಾ 18 ಬಾರಿ ಬಜೆಟ್ ಮಂಡನೆಯಂತಹ ಲೆಕ್ಕ ಬರುವುದಿಲ್ಲ. ಈಗ ನೀವೇ ನೋಡಿ, ದೇಶದ ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಸ್ವತಃ ಒಬ್ಬ ಆರ್ಥಿಕ ತಜ್ಞ. ಅವರಿಗೇ ಆರ್ಥಿಕ ಸಲಹೆಗಾರ ಇರುವುದಿಲ್ಲವೇ? ಹಾಗಿದ್ದರೆ ಅವರ್ಯಾಕೆ ಅಂತ ಕೇಳಲು ಆಗುತ್ತದೆಯೇ? ಇನ್ನೂ ಮುಂದುವರಿದು ಹೇಳುವುದಾದರೆ ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರು. ಆದರೂ ಹಣಕಾಸಿನ ಹೆಚ್ಚುವರಿ ಕಾರ್ಯದರ್ಶಿಗಳ ಸಹಿತ ಹಲವು ವಿಭಾಗಗಳಲ್ಲಿ ಕಾರ್ಯದರ್ಶಿಗಳಿಲ್ಲವೇ? ಅವರೆಲ್ಲ ಯಾಕೆ ಎಂದು ಕೇಳಬಹುದೇ? ಅಧಿಕಾರಿಗಳಾಗಿ ಅವರೆಲ್ಲ ಸಲಹೆಗಳನ್ನು ನೀಡಿದರೆ ನಾನು ಒಬ್ಬ ರಾಜಕಾರಣಿಯಾಗಿ ಜನರ ಪರವಾಗಿ ಸಲಹೆಗಳನ್ನು ನೀಡುತ್ತೇನೆ ಅಷ್ಟೇ.
Related Articles
ನೋಡಿ, ಸಂಪುಟ ದರ್ಜೆ ಸ್ಥಾನದಲ್ಲಿರುವ ನನಗೆ ಮಾಸಿಕ 1 ಲಕ್ಷ ರೂ. ವೇತನ ಬರುತ್ತದೆ. ಅದನ್ನು ತೆಗೆದುಕೊಳ್ಳುತ್ತಿಲ್ಲ. ಎರಡೂವರೆ ಲಕ್ಷ ರೂ. ಮನೆ ಬಾಡಿಗೆ ಬರುತ್ತದೆ. ಆದರೂ ಸ್ವಂತ ಮನೆಯಲ್ಲಿ ವಾಸವಿದ್ದೇನೆ. ಪೀಠೊಪಕರಣಗಳಿಗೆ 10 ಲಕ್ಷ ರೂ. ಬರುತ್ತದೆ. ಅದನ್ನೂ ತೆಗೆದುಕೊಂಡಿಲ್ಲ. ಹೊಸ ಕಾರು ಕೊಡುತ್ತಾರೆ. ಬೇಡ ಅಂತ ಹೇಳಿದ್ದೇನೆ. 1.10 ಲಕ್ಷ ಕಿ.ಮೀ. ಓಡಿರುವ ನನ್ನ ಹಳೆಯ ಕಾರನ್ನೇ ಬಳಕೆ ಮಾಡುತ್ತಿದ್ದೇನೆ. ಹೀಗಿರುವಾಗ ಗಂಜಿಕೇಂದ್ರ ಹೇಗಾಗುತ್ತದೆ?
Advertisement
ಹಾಗಿದ್ದರೆ ಮುನಿಸಿಕೊಂಡ ನಿಮ್ಮನ್ನು ಸಮಾಧಾನಪಡಿಸಲು ಪಕ್ಷ ನೀಡಿದ ಹುದ್ದೆ ಎನ್ನಬಹುದಾ?ಸಚಿವ ಸ್ಥಾನ ಕೊಡಬೇಕಾಗಿತ್ತು. ಆದರೆ ಹಲವು ಕಾರಣಗಳಿಂದ ಕೊಡಲಿಕ್ಕೆ ಆಗಿಲ್ಲ. ಹೆಚ್ಚು ಅನುಭವ ಇರುವುದರಿಂದ ಪಕ್ಷ ಗುರುತಿಸಿದೆ. ಅದಕ್ಕೆ ತಕ್ಕುದಾದ ಹುದ್ದೆ ಕೊಟ್ಟಿದ್ದಾರೆ. ಸಮಾಧಾನಪಡಿಸಲು ಅಲ್ಲ. ಸೇವೆ ಮತ್ತು ಅನುಭವ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಹುದ್ದೆ ನೀಡಲಾಗಿದೆ. ಯಾವಾಗಲೂ ನೀವೇ ಯಾಕೆ ಗುರಿಯಾಗುತ್ತಿದ್ದೀರಿ? ಈ ಹಿಂದೆ ದಿಲ್ಲಿ ವಿಶೇಷ ಪ್ರತಿನಿಧಿ ಆಗಿದ್ದಿರಿ. ಈಗ ಸಲಹೆಗಾರ ಸ್ಥಾನ. ನಿಮಗಿಂತ ಕಿರಿಯರಿಗೆ ಸಚಿವ ಸ್ಥಾನ ಸಿಗುತ್ತದೆ. ನಿಮಗೆ ಮಾತ್ರ ಯಾಕೆ ಕೈತಪ್ಪುತ್ತಿದೆ?
ನಾನು ದಿಲ್ಲಿ ವಿಶೇಷ ಪ್ರತಿನಿಧಿ ಆದದ್ದು 1998-99ರಲ್ಲಿ. ಈಗ ಸಲಹೆಗಾರ ಹುದ್ದೆ ಕೊಟ್ಟಿದ್ದಾರೆ. ನಮ್ಮ ನಮ್ಮ ಅನುಭವ, ವಿಚಾರಗಳನ್ನು ತಿಳಿದುಕೊಳ್ಳಲು ಆಯಾ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷ ತೀರ್ಮಾನ ಕೈಗೊಂಡಿರುತ್ತದೆ. ಅದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ. ಏನೂ ಮಾಡಲಿಕ್ಕಾಗದು. ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜನ ಏನು ನಿರೀಕ್ಷೆ ಮಾಡಬಹುದು?
ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಗಳು ನಡೆಯುತ್ತಿವೆ. ಯಾವುದಕ್ಕೆ ಎಷ್ಟು ಖರ್ಚಾಗಿದೆ? ಎಷ್ಟು ನೀಡಲಾಗಿತ್ತು? ಮುಂದೆ ಎಷ್ಟು ಮೀಸಲಿಡಬೇಕು? ಯಾವ ಹೊಸ ಯೋಜನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಜ. 20-24ರ ವರೆಗೆ ಆಯಾ ಖಾತೆಗಳ ಸಚಿವರು, ಅಧಿಕಾರಿಗಳನ್ನು ಆಹ್ವಾನಿಸಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಅದರಲ್ಲಿ ನಾನೂ ಭಾಗವಹಿಸಲಿದ್ದೇನೆ. ಜ. 25ರ ಅನಂತರ ಬಜೆಟ್‌ನ ಸ್ವರೂಪ ಗೊತ್ತಾಗಲಿದೆ. ಆಗ ನಿರೀಕ್ಷೆಗಳ ಬಗ್ಗೆ ಹೇಳಬಹುದು. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳ ಸ್ವರೂಪವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ?
ಯಾವುದೇ ಸರಕಾರ ಬಂದರೂ ಈ ಗ್ಯಾರಂಟಿಗಳನ್ನು ತೆಗೆಯಲು ಆಗುವುದಿಲ್ಲ. ಬೇಕಿದ್ದರೆ ಸುಧಾರಣೆ ಮಾಡಬಹುದಷ್ಟೇ. ಯಾಕೆಂದರೆ ಇವೆಲ್ಲವೂ ರಾಜ್ಯದ ಬಹುತೇಕ ಜನರ ಬದುಕಿಗೆ ಸಂಬಂಧಿಸಿದವು. ಸರಕಾರದಲ್ಲಿ ಹಣವೇ ಇಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಮುಂದೆ ಗ್ಯಾರಂಟಿಗೆ ಎಲ್ಲಿಂದ ದುಡ್ಡು ಬರುತ್ತದೆ?
ಈಗಾಗಲೇ ಮುಖ್ಯಮಂತ್ರಿಗಳು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರಿಗೆ ತಲಾ 25 ಕೋಟಿ ರೂ. ಘೋಷಿಸುವುದರ ಜತೆಗೆ ಸರಕಾರಿ ಆದೇಶ ಕೂಡ ಮಾಡಿದ್ದಾರೆ. ಹಾಗಾಗಿ ಹಣ ಇಲ್ಲ ಎಂದು ಇನ್ಮುಂದೆ ಹೇಳುವಂತಿಲ್ಲ. ಗ್ಯಾರಂಟಿಗೆ ಬರುವ ವರ್ಷ 55ರಿಂದ 56 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಉದಾಹರಣೆಗೆ, ಬಹುತೇಕ ಕಡೆ ಬಿಲ್‌ಗಳನ್ನು ಕೊಡುವುದಿಲ್ಲ. ಇದಕ್ಕೆ ಬ್ರೇಕ್ ಹಾಕಿದರೆ, 10 ಸಾವಿರ ಕೋಟಿ ರೂ. ಬರಬಹುದು ಎಂಬುದು ನನ್ನ ಅಂದಾಜು. ಅದೇ ರೀತಿ ಮುದ್ರಾಂಕ ಶುಲ್ಕದ ನಿರ್ವಹಣೆ, ಅಬಕಾರಿ ಇಲಾಖೆಯಲ್ಲಿ ವ್ಯಾಜ್ಯಗಳಿಂದ ಬಂದ್ ಆಗಿರುವ ಮಳಿಗೆಗಳ ಪುನರಾರಂಭ, ಗಣಿ ಮತ್ತು ಭೂವಿಜ್ಞಾನದಲ್ಲಿ ರಾಜಸ್ವ ಸಂಗ್ರಹ ಮತ್ತಿತರ ಕಡೆಗಳಿಂದ ಕನಿಷ್ಠ 15 ಸಾವಿರ ಕೋಟಿ ರೂ. ಒಟ್ಟಾರೆಯಾಗಿ ಬರಲು ಅವಕಾಶ ಇದೆ. ಇದಕ್ಕೆ ದಿಟ್ಟಕ್ರಮಗಳ ಆವಶ್ಯಕತೆ ಇದೆ. ಲೋಕಸಭಾ ಚುನಾವಣೆಗೆ ನಿಮ್ಮನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆಯೇ? ವರಿಷ್ಠರಿಂದ ಒತ್ತಡ ಬಂದರೆ ನಿಲ್ಲುತ್ತೀರಾ?
ಈ ಬಗ್ಗೆ ವದಂತಿಗಳು ಕೇಳಿಬರುತ್ತಿರಬಹುದು. ಆದರೆ ನಾನಂತೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಒಂದು ವೇಳೆ ಒತ್ತಡ ಬಂದರೂ “ಬೇಡ’ ಎಂದು ಹೇಳುತ್ತೇನೆ. ವಿಜಯ ಕುಮಾರ ಚಂದರಗಿ