ನವದೆಹಲಿ: 2022-23ರ ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ಹಣದುಬ್ಬರ ಕ್ರಮೇಣವ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಶನಿವಾರ (ಜುಲೈ 09) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿರಾಟ್, ಜಡ್ಡು, ಪಂತ್, ಬುಮ್ರಾ ವಾಪಾಸ್: ಇಂದಿನ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಸ್ಥಾನ?
ಇನ್ಸಿಟ್ಯೂಟ್ ಆಫ್ ಗ್ರೋಥ್ ಆಯೋಜಿಸಿರುವ ಕೌಟಿಲ್ಯ ಎಕಾನಾಮಿಕ್ ಕನ್ ಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್, ಹಣದುಬ್ಬರ ತಡೆಯಲು ಆರ್ ಬಿಐ ಕೈಗೊಂಡಿರುವ ಆರ್ಥಿಕ ನೀತಿಯ ನಿರ್ಧಾರದಿಂದ ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಚಿಲ್ಲರೆ ಹಣದುಬ್ಬರವು ಸತತ ಐದನೇ ತಿಂಗಳಲ್ಲಿಯೂ ಶೇ.6ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿಯೂ ದೇಶೀಯ ಸಗಟು ಹಣದುಬ್ಬರ ಕಳೆದ ಒಂದು ವರ್ಷದಿಂದ ಎರಡು ಅಂಕೆ ದಾಟಿದೆ. 2021ರ ಏಪ್ರಿಲ್-ಜೂನ್ ನಲ್ಲಿನ ಎರಡನೇ ಕೋವಿಡ್ ಅಲೆಯ ಪರಿಣಾಮ ಸ್ಥಳೀಯ ಲಾಕ್ ಡೌನ್ ಗಳು, ಸರಕು, ಸಾಗಾಟದ ತೊಂದರೆಯಿಂದಾಗಿ 2021ರ ಮೇ, ಜೂನ್ ನಲ್ಲಿ ಹಣದುಬ್ಬರ ಶೇ.6ಕ್ಕಿಂತ ಹೆಚ್ಚಳ ಕಂಡಿತ್ತು ಎಂದು ದಾಸ್ ಹೇಳಿದರು.
ಜಾಗತಿಕ ಮಟ್ಟದಲ್ಲಿಯೂ ಬೆಲೆ ಏರುತ್ತಿರುವುದು ಕೂಡಾ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ. ಕೋವಿಡ್ ನಿಂದಾಗಿ ಆರ್ಥಿಕ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರುವಂತಾಗಿದೆ ಎಂದು ಗವರ್ನರ್ ದಾಸ್ ತಿಳಿಸಿದ್ದಾರೆ.