ನವದೆಹಲಿ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಶುಕ್ರವಾರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ ನಡೆಸಿದ್ದು, ಶೇ.4.4ರಷ್ಟಿದ್ದ ರೆಪೋ ದರವನ್ನು ಶೇ.4ಕ್ಕೆ ಇಳಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದ್ದು, ಇದರಿಂದಾಗಿ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದಂತಾಗಿದೆ.
ಈ ವೇಳೆ ಮೂರು ತಿಂಗಳ ಇಎಂಐ ಪಾವತಿಯತನ್ನು ಮುಂದೂಡಿದರು. ಆಗಸ್ಟ್ 31ರವರೆಗೆ ಇಎಂಐ ಪಾವತಿಯನ್ನು ಮುಂದೂಡಿರುವುದಾಗಿ ಶಕ್ತಿಕಾಂತ್ ದಾಸ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದ ನಂತರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮಾರ್ಚ್ 27 ಹಾಗೂ ಏಪ್ರಿಲ್ 17ರಂದು ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆ ಹೊರಡಿಸಿದ್ದರು. ಇದೀಗ ಮೂರನೇ ಬಾರಿ ಪತ್ರಿಕಾಗೋಷ್ಠಿ ನಡೆಸಿ ಮತ್ತಷ್ಟು ಮಹತ್ವದ ಘೋಷಣೆ ಪ್ರಕಟಿಸಿದ್ದಾರೆ.
ಒಂದು ಸಣ್ಣ ವೈರಸ್ ಹೇಗೆ ಜಗತ್ತಿನಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ . ಸದ್ಯ ದೇಶದ ಆರ್ಥಿಕ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದರು.
ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್ನಲ್ಲಿ ಶೇ. 8.6ಕ್ಕೆ ಹೆಚ್ಚಿದೆ. ಲಾಕ್ ಡೌನ್ ನಂತರ ಖಾಸಗಿ ಭೋಗದ ಪ್ರಮಾಣ ಕಡಿಮೆ ಆಗಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಸಿತವಾಗಿದೆ ಎಂದರು.