Advertisement

ಆರ್‌ಬಿಐ-ಸರಕಾರ ಬಿಕ್ಕಟ್ಟು 

06:00 AM Nov 02, 2018 | Team Udayavani |

ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟ ಗಂಭೀರವಾಗುವ ಲಕ್ಷಣಗಳು ಕಾಣಿಸಿವೆ. ಇಷ್ಟರ ತನಕ ಯಾವ ಸರಕಾರವೂ ಉಪಯೋಗಿಸದ ಆರ್‌ಬಿಐ ಕಾಯಿದೆಯಲ್ಲಿರುವ ಸೆಕ್ಷನ್‌ 7(1) ನ್ನು ಸರಕಾರ ಪ್ರಯೋಗಿಸಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ. ಸದ್ಯಕ್ಕೆ ಈ ಸೆಕ್ಷನ್‌ನ ಪರಿಣಾಮಕಾರಿ ಯಲ್ಲದ ಭಾಗದಡಿಯಲ್ಲಿ ಆರ್‌ಬಿಐಗೆ ಈಗಾಗಲೇ ಮೂರು ಪತ್ರಗಳನ್ನು ಬರೆದಿದೆ. ಇಡೀ ಸೆಕ್ಷನ್‌ 7(1)ನ್ನು ಪ್ರಯೋಗಿಸಿದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆಯಿರುವುದರಿಂದ ಈಗ ಸರಕಾರ ಮತ್ತು ಆರ್‌ಬಿಐ ಎರಡೂ ಸಂಯಮ ಪಾಲಿಸುವುದು ಅಗತ್ಯ. 

Advertisement

ಕಳೆದ ವಾರ ಆರ್‌ಬಿಐ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಮಾಡಿದ ಭಾಷಣವೊಂದರ ಬಳಿಕ ಸರ್ವೋಚ್ಚ ಬ್ಯಾಂಕ್‌ ಮತ್ತು ಸರಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಆರ್‌ಬಿಐ ವ್ಯವಹಾರಗಳಲ್ಲಿ ಸರಕಾರ ಮಧ್ಯ ಪ್ರವೇಶಿಸುವುತ್ತಿರುವುದಕ್ಕೆ ಆಚಾರ್ಯ ಈ ಭಾಷಣದಲ್ಲಿ ತೀವ್ರ ಆಕ್ಷೇಪ ಎತ್ತಿದ್ದರು. ಆರ್‌ಬಿಐಗಿರುವ ಸ್ವಾತಂತ್ರ್ಯವನ್ನು ಗೌರವಿಸದಿದ್ದರೆ ಎಂದಾದರೊಂದು ದಿನ ಹಣಕಾಸು ಮಾರುಕಟ್ಟೆಯ ಆಕ್ರೋಶಕ್ಕೆ ಸರಕಾರ ಗುರಿಯಾಗುವುದು ಖಚಿತ. ಆಗ ಸಾಂವಿಧಾನಿಕ ಸಂಸ್ಥೆಯೊಂದರ ವ್ಯವಹಾ ರಗಳಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ವಿಷಾದಿಸಿದರೂ ಪ್ರಯೋಜನವಿಲ್ಲ ಎಂಬ ಆಚಾರ್ಯ ಮಾತುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.  

ಪ್ರಸ್ತುತ ಸಮಸ್ಯೆಯ ಮೂಲ ಆರ್‌ಬಿಐ ನಿರ್ದೇಶಕ ಮಂಡಳಿಗೆ ನಿರ್ದೇಶಕರೊಬ್ಬರನ್ನು ನಾಮ ನಿರ್ದೇಶನ ಮಾಡಿರುವುದರಲ್ಲಿದೆ ಎನ್ನುವ ಆರೋಪದಲ್ಲಿ ಹುರುಳಿರುವಂತೆ ಕಾಣಿಸುತ್ತದೆ. ಸಂಘ ಪರಿವಾರದ ಚಿಂತಕರೊಬ್ಬರನ್ನು ನಿರ್ದೇಶಕ ಮಂಡಳಿಗೆ ನಾಮ ನಿರ್ದೇಶನ ಮಾಡಿರುವುದು ಆರ್‌ಬಿಐಯಲ್ಲಿ ರಾಜಕೀಯ ಹಸ್ತಕ್ಷೇಪದ ಸ್ಪಷ್ಟ ಉದಾಹರಣೆ. ಅಲ್ಲಿಂದಲೇ ಗವರ್ನರ್‌ ಊರ್ಜಿತ್‌ ಪಟೇಲ್‌ ಮತ್ತು ಸರಕಾರದ ನಡುವೆ ಮುಸುಕಿನ ಗುದ್ದಾಟ ಶುರುವಾಗಿತ್ತು. ಅದೀಗ ಪೂರ್ಣ ಪ್ರಮಾಣದಲ್ಲಿ ಬೆಳಕಿಗೆ ಬಂದಿದೆ.  ಆರ್‌ಬಿಐಯ ಹೆಚ್ಚುವರಿ ನಿಧಿಯನ್ನು ವರ್ಗಾಯಿಸುವ ವಿಚಾರದಲ್ಲಿ ಸರಕಾರಕ್ಕೆ ಆರ್‌ಬಿಐ ಮೇಲೆ ಮುನಿಸಿದೆ. ಅಂತೆಯೇ ಸಾರ್ವಜನಿಕ ವಲಯಗಳ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಮೌಲ್ಯ ಕಳವಳಕಾರಿಯಾಗಿ ಹೆಚ್ಚಿದ್ದರೂ ಈ ಕುರಿತು ಕಠಿಣ ಕ್ರಮ ಕೈಗೊಳ್ಳಲು ಆರ್‌ಬಿಐ ಹಿಂಜರಿಯುತ್ತಿರುವುದು ಸರಕಾರದ ಸಿಟ್ಟಿಗೆ ಕಾರಣವಾಗಿದೆ. ಪ್ರಸ್ತುತ ಬ್ಯಾಂಕುಗಳು 9.5 ಲಕ್ಷ ಕೋ. ರೂ. ಅನುತ್ಪಾದಕ ಆಸ್ತಿ ಹೊಂದಿದ್ದು, ಇದರಲ್ಲಿ ಬಹುಪಾಲು ಕಾರ್ಪೋರೇಟ್‌ ಕಂಪೆನಿಗಳದ್ದು.ಆದರೆ ಇವು ಸರಕಾರದ ಕೃಪಾಶ್ರಯದಲ್ಲಿವೆ. ಇನ್ನೊಂದೆಡೆ ಹಲವು ಉದ್ಯಮಿಗಳು ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿ ವಿದೇಶಗಳಿಗೆ ಪಲಾಯನ ಮಾಡಿದ್ದಾರೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆರ್‌ಬಿಐ ಮತ್ತು ಸರಕಾರ ಕಚ್ಚಾಡಿದರೆ ಒಟ್ಟಾರೆಯಾಗಿ ದೇಶದ ಆರ್ಥಿಕತೆಯ ಮೇಲೆ ಅದರ ಋಣಾತ್ಮಕ ಪರಿಣಾಮವಾಗಲಿದೆ.    

ಹಣಕಾಸು ಸುಧಾರಣೆಯ ವಿಷಯಕ್ಕೆ ಬಂದರೆ ಸರಕಾರಗಳು ತಕ್ಷಣದ ಫ‌ಲಿತಾಂಶಕ್ಕೆ ಹೆಚ್ಚಿನ ಒತ್ತು ಕೊಡುವುದು, ಆರ್‌ಬಿಐ ದೀರ್ಘ‌ಕಾಲೀನ ಉಪಶಮನಕ್ಕೆ ಆದ್ಯತೆ ನೀಡುವುದು ಹೊಸದಲ್ಲ. ಇದು ಟಿ-20 ಪಂದ್ಯ ಮತ್ತು ಟೆಸ್ಟ್‌ ಪಂದ್ಯವಿದ್ದಂತೆ. ಸರಕಾರ ಎನ್‌ಪಿಎ ಸಮಸ್ಯೆ ಮತ್ತು ಹಣಕಾಸು ಮಾರುಕಟ್ಟೆಯ ಲಿಕ್ವಿಡಿಟಿ ಸಮಸ್ಯೆ ತಕ್ಷಣ ಬಗೆಹರಿಯಬೇಕೆಂದು ಬಯಸುತ್ತಿದೆ. ಆದರೆ ಆರ್‌ಬಿಐ ಈ ವಿಚಾರದಲ್ಲಿ ನಿಧಾನ ಧೋರಣೆಯನ್ನು ಅನುಸರಿಸುತ್ತಿರುವುದು ಕೂಡಾ ಪ್ರಸ್ತುತ ಕಾಣಿಸಿರುವ ಬಿಕ್ಕಟ್ಟಿಗೆ ಕಾರಣ.ಇ ದು ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಬಗೆಹರಿಸಬೇಕಾದ ಸೂಕ್ಷ್ಮ ಸಮಸ್ಯೆ. ಈ ವಿಚಾರದಲ್ಲಿ ಆರ್‌ಬಿಐ ಮತ್ತು ಸರಕಾರ ತಮ್ಮದೇ ಸರಿ ಎಂದು ಪಟ್ಟು ಹಿಡಿಯುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. 

Advertisement

Udayavani is now on Telegram. Click here to join our channel and stay updated with the latest news.

Next