Advertisement

ರಾಯಣ್ಣನ ಹೆಸರು ದುರ್ಬಳಕೆಯಾಗದಿರಲಿ

11:30 AM Aug 16, 2017 | Team Udayavani |

ಬೆಂಗಳೂರು: ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿದ್ದಾರೆ. 

Advertisement

ನಗರದ ಕೋಡೇಸ್‌ ವೃತ್ತದಲ್ಲಿ ಮಂಗಳವಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, “ಕೆಲವರು ತಮ್ಮ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ರಾಯಣ್ಣನವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಯಣ್ಣನವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಬೇಕಾದ ಉತ್ತಮ ಕಾರ್ಯ ಮಾಡುತ್ತಿದೆ,’ ಎಂದರು. 

ರಾಯಣ್ಣನವರ ಹೆಸರಿನಲ್ಲಿ ಸೈನಿಕ ಶಾಲೆ: “ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ, ಮ್ಯೂಸಿಯಂ ಸೇರಿದಂತೆ ರಾಯಣ್ಣನವರಿಗೆ ಸಂಬಂಧಿಸಿದ ಇತರೆ ಕಾರ್ಯಕ್ಕೆ 3 ಎಕರೆ ಜಮೀನು ಮಂಜೂರು ಮಾಡಲಾಗಿದೆ. 265 ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಮೂಲಕ ಇದರ ಕಾರ್ಯ ಮಾಡಲಾಗುತ್ತದೆ. ಹಾಗೆಯೇ ಆನಂದ್‌ ರಾವ್‌ ವೃತ್ತದ ಮೇಲ್ಸೇತುವೆಗೂ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಲಾಗುತ್ತದೆ,’ ಎಂದು ಹೇಳಿದರು.

ಹುಟ್ಟು ಹಬ್ಬ ಮಾಡಲ್ಲ: ನಾನು ಒಂದರಿಂದ ನಾಲ್ಕನೇ ತರಗತಿ ಓದಿಲ್ಲ. ನೇರವಾಗಿ ಐದನೇ ತರಗತಿಗೆ ಸೇರಿಸಿದ್ದೆ. ಹೀಗಾಗಿ ಹುಟ್ಟಿದ ದಿನಾಂಕ ಗೊತ್ತಿಲ್ಲ. ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ ಹಾಗೂ ಮುಂದೆಯೂ ಆಚರಿಸಿಕೊಳ್ಳಲಾರೆ. ಆದರೆ ಅಭಿಮಾನಿಗಳು ಶಾಲೆಯಲ್ಲಿ ದೊರೆತ ದಿನಾಂಕವನ್ನೇ ಗಮನದಲ್ಲಿಟ್ಟುಕೊಂಡು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದಕ್ಕಿಂತ ಎಷ್ಟು ಒಳ್ಳೆಯ ಕೆಲಸ ಮಾಡುತ್ತೇವೆ ಎಂಬುದಷ್ಟೇ ಮುಖ್ಯ ಎಂದರು.

ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ, ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಗೊಳ್ಳಿ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಿದ್ದು ನೂರ್ಕಾಲ ಬಾಳಲಿ, ವಾಟಾಳ್‌ 125 ವರ್ಷ ಬಾಳಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 69 ವರ್ಷವಾಗಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅವರಿಗೆ ಈಗ ಐವತ್ತೈದೋ, ಅರವತ್ತು ವರ್ಷ ಆಗಿರಬಹುದು ಎಂಬಂತೆ ಕಾಣುತ್ತಿದ್ದಾರೆ. 100 ವರ್ಷ ಆರೋಗ್ಯದಿಂದ ಬದುಕಲಿ ಎಂದು ವಾಟಾಳ್‌ ನಾಗರಾಜ್‌ ಹೇಳುತ್ತಿದ್ದಂತೆ, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ವಾಟಾಳ್‌ ಅವರು ತಮ್ಮ ವಯಸ್ಸು ಎಷ್ಟು ಎಂಬುದನ್ನು ಹೇಳುವುದಿಲ್ಲ. ಅವರು 125 ವರ್ಷ ಬಾಳಲಿ ಎಂದು ಹಾಸ್ಯ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next