ಬೀದರ್: ಜಿಲ್ಲೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 9.87 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ ಸಾಮಗ್ರಿ ಮತ್ತು ಮೂರು ಲಕ್ಷ ರೂ. ಮೌಲ್ಯದ 300 ಸೀರೆಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಹುಲಸೂರು ಠಾಣಾ ವ್ಯಾಪ್‌ತಿಯ ಅಂಬೆವಾಡಿ ಚೆಕ್‌ಪೋಸ್ಟ್ ಬಳಿ ಎಸ್‌ಎಸ್‌ಟಿ ತಂಡದ ಅಧಿಕಾರಿ ರಮೇಶ ಮತ್ತು ತಂಡ ಕರ್ತವ್ಯದಲ್ಲಿದ್ದಾಗ ಭಾಲ್ಕಿ ಕಡೆಯಿಂದ ಬಂದ ಎರಡು ಕಂಟೈನರ್ ಮತ್ತು ಒಂದು ಬುಲೆರೋ ವಾಹನ ನಿಲ್ಲಿಸಿ ತಪಾಸಣೆ ಮಾಡಿದ್ದು, ಅದರಲ್ಲಿ 9,87,500 ರೂ. ಮೊತ್ತದ 3250 ಕೆ.ಜಿಯ ಕಚ್ಚಾ ಪಾನ್ ಪಸಾಲ್, ಜತೆಗೆ 50 ಲಕ್ಷ ರೂ. ಮೊತ್ತ ಎರಡು ಕಂಟೈನರ್, ಒಂದು ಬುಲೆರೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂರು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೀರೆಗಳು ಪತ್ತೆ
ಮಂಠಾಳ ಠಾಣಾ ವ್ಯಾಪ್ತಿಯ ಚಂಡಕಾಪುರ/ ಮನ್ನಳ್ಳಿ ಚೆಕ್‌ಪೋಸ್ಟ್ ನಲ್ಲಿ ಎಸ್‌ಎಸ್‌ಟಿ ತಂಡದ ಅದಿಕಾರಿ ಆನಂದ ಮತ್ತು ಪಿಎಸ್‌ಐಐ ಕವಿತಾಬಾಯಿ ತಂಡ ತಪಾಸಣೆ ಸಂದರ್ಭದಲ್ಲಿ ಮಾರುತಿ ಸ್ವೀಫ್ಟ್ ಕಾರು ಪರಿಶೀಲಿಸಿದ್ದು, ಈ ವೇಳೆ ಮೂರು ಲಕ್ಷ ರೂ. ವೆಚ್ಚದ 300 ಸೀರೆಗಳು ಪತ್ತೆಯಾಗಿವೆ. ಈ ಬಗ್ಗೆ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ವಿಚಾರಿಸಿದಾಗ ಸೂಕ್ತ ದಾಖಲೆಗಳನ್ನು ಹಾಜರುಪಡಿಸದ ಕಾರಣ ಸದರಿ ಸೀರೆಗಳನ್ನು ಸ್ಕ್ರೀನಿಂಗ್ ಕಮಿಟಿಗೆ ಜಮೆ ಮಾಡಲಾಗಿದೆ.