Advertisement

ರವಿಸುಬ್ರಹ್ಮಣ್ಯರಿಗೆ ಯಾರಿಂದ ಸವಾಲು?

12:14 AM Mar 10, 2023 | Team Udayavani |

ಬೆಂಗಳೂರು: ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರಾದ ಮಾಜಿ ಸಿಎಂ ದಿ| ರಾಮಕೃಷ್ಣ ಹೆಗಡೆ ಅವರಿಗೆ ರಾಜಕೀಯ ಮರುಜೀವ ಕೊಟ್ಟ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಮೂರು ಅವಧಿಯಿಂದ ಹ್ಯಾಟ್ರಿಕ್‌ ಸಾಧನೆ ಮಾಡಿದೆ. 2008ರಲ್ಲಿ ಈ ಕ್ಷೇತ್ರದ ಜನಪ್ರಿಯ ಶಾಸಕ ಎಂದೇ ಹೆಸರಾದ ಕಾಂಗ್ರೆಸ್‌ನ ಕೆ.ಚಂದ್ರಶೇಖರ್‌ ಅವರನ್ನು ಭಾರೀ ಅಂತರದಿಂದ ಸೋಲಿಸಿ ಬಿಜೆಪಿಯಿಂದ ಆಯ್ಕೆಗೊಂಡ ರವಿಸುಬ್ರಹ್ಮಣ್ಯ ಮೂರು ಬಾರಿಯಿಂದಲೂ ಗೆಲುವು ಸಾಧಿಸುತ್ತಲೇ ಇದ್ದಾರೆ. ರಾಮಕೃಷ್ಣ ಹೆಗಡೆಯವರನ್ನು ಬಿಟ್ಟರೆ ಎರಡು ಅವಧಿಗೆ ಯಾರೂ ಗೆದ್ದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿರುವ ರವಿಸುಬ್ರಹ್ಮಣ್ಯ ಅವರ ನಾಲ್ಕನೇ ಅವಧಿಯ ಭವಿಷ್ಯವೇನು? ಎಂಬುದು ಸದ್ಯದ ಪ್ರಶ್ನೆ.

Advertisement

ಬ್ರಾಹ್ಮಣ ಹಾಗೂ ಒಕ್ಕಲಿಗ ಸಮುದಾಯದ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮೂರು ರಾಜಕೀಯ ಪಕ್ಷಗಳು ಈ ಎರಡು ಜಾತಿಯ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂದರ್ಭದಲ್ಲಿ ಕಣಕ್ಕಿಳಿಸಿವೆ. ಈ ಬಾರಿ ಕಾಂಗ್ರೆಸ್‌ನಿಂದಲೂ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನೇ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ವಿದ್ಯಾವಂತರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಿದ್ಧಾಂತ ಮತ್ತು ವ್ಯಕ್ತಿತ್ವವೇ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ರಾಜಧಾನಿ ಬೆಂಗಳೂರಿನ ಅತ್ಯಂತ ಶಾಂತ ಕ್ಷೇತ್ರಗಳಲ್ಲಿ ಬಸವನ ಗುಡಿಯೂ ಒಂದಾಗಿದೆ.

ವರ್ಷದಿಂದ ವರ್ಷಕ್ಕೆ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಲೇ ಇರುವುದರಿಂದ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್‌ ಪಡೆದುಕೊಳ್ಳುವುದು ಹೆಚ್ಚಿನ ಸಮಸ್ಯೆ ತಂದೊಡ್ಡಲಾರದು. ಆದರೆ ಕುಟುಂಬ ರಾಜಕಾರಣದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ  ಮಾತನಾಡಿ ಮೆಚ್ಚುಗೆ ಪಡೆದ ಸಂಸದ ತೇಜಸ್ವಿ ಸೂರ್ಯ ಅವರಿಗೆ “ರವಿ ಸುಬ್ರಹ್ಮಣ್ಯ ನಿಮ್ಮ ಚಿಕ್ಕಪ್ಪ ಅಲ್ಲವೇ?’ ಎಂದು ಸಂಸದೆ ಸುಪ್ರಿಯಾ ಸುಳೆ ಪ್ರಶ್ನಿಸಿದ ಬಳಿಕ ಇಲ್ಲಿಯೂ ಬದಲಾವಣೆಯ ಪ್ರಶ್ನೆಗಳು ಏಳುತ್ತಿವೆ. ಇದರ ಜತೆಗೆ ಬಿಜೆಪಿಯಲ್ಲೂ ಪ್ರಬಲ ಆಕಾಂಕ್ಷಿಗಳು ಸೃಷ್ಟಿಯಾಗಿದ್ದು, ಅಭ್ಯರ್ಥಿ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಒತ್ತಡ ಇದೆ.

ಆಮ್‌ ಆದ್ಮಿ ಪಕ್ಷದಿಂದ ಬಸವನಗುಡಿ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೇ ಬೇಷರತ್ತಾಗಿ ಪಕ್ಷ ಸೇರ್ಪಡೆಗೊಂಡಿರುವುದಾಗಿ ಅವರು ಹೇಳಿಕೆ ನೀಡಿದ್ದರೂ “ಬಸವನಗುಡಿಯ ಮೇಲಿನ ಮಮಕಾರ’ ಅಷ್ಟು ಸುಲಭಕ್ಕೆ ಹೋಗಲು ಸಾಧ್ಯವೇ? ಅದೇ ರೀತಿ ಬಿಜೆಪಿಯ ಒಂದು ವರ್ಗ ದಿ| ಅನಂತ್‌ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿವೆ. ಅವರಿಗೆ ಜಯನಗರದಿಂದ ಸ್ಪರ್ಧೆಗೆ ಅವಕಾಶ ನೀಡುವ ಪ್ರಸ್ತಾವವೂ ಇದೆ.

ಇನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದೆರಡು ವರ್ಷದಿಂದ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್‌ ಮತ್ತೆ ತನ್ನ ಅಸ್ತಿತ್ವ ಪ್ರದರ್ಶನ ಮಾಡುವ ಹಂತಕ್ಕೆ ತಲುಪಿದೆ. ಆದರೆ ಡಿ.ಕೆ.ಶಿವಕುಮಾರ್‌ ಆಪ್ತ ಗುಹಾ ದ್ವಾರಕನಾಥ್‌ ಕೂಡಾ ಬಸವನಗುಡಿಯಿಂದಲೇ ಸ್ಪರ್ಧೆ ಬಯಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿರುವುದರಿಂದ ಯು.ಬಿ.ವೆಂಕಟೇಶ್‌ಗೆ ಕಾಂಗ್ರೆಸ್‌ನಿಂದ ಬಹುತೇಕ ಟಿಕೆಟ್‌ ಪಕ್ಕಾ ಎಂದು ಹೇಳಲಾಗುತ್ತಿದೆ. ಸರಕಾರ ಬಂದರೆ ಬೇರೆ ರೀತಿಯಲ್ಲಿ ತಮ್ಮ ಸೇವೆ ಬಳಸಿಕೊಳ್ಳಲಾಗುವುದು ಎಂದು ಗುಹಾ ದ್ವಾರಕನಾಥ್‌ ಅವರನ್ನು ಶಿವಕುಮಾರ್‌ ಸಮಾಧಾನಪಡಿಸಿದ್ದಾರೆ ಎಂಬುದು ಸದ್ಯ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

Advertisement

– ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next