Advertisement
ಹೊಸಬರಿಂದ ಹಿಡಿದು ಸ್ಟಾರ್ ನಟರ ಸಿನಿಮಾಗಳವರೆಗೂ ವಿಲನ್ ರವಿಶಂಕರ್ ಇಲ್ಲದೇ ಸಿನಿಮಾನೇ ಇಲ್ಲ ಎಂಬಂತಿದೆ ಸದ್ಯದ ಪರಿಸ್ಥಿತಿ. ಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾಗಳಲ್ಲಿ ರವಿಶಂಕರ್ ಅವರ ಖಡಕ್ ಡೈಲಾಗ್ ಇದ್ದೇ ಇರುತ್ತದೆ. ರವಿಶಂಕರ್ ಡೇಟ್ ಸಿಕ್ಕವರು, ಸಿನಿಮಾದಲ್ಲೊಂದು ಖಡಕ್ ಪಾತ್ರ ಹಾಗೂ ವ್ಯಕ್ತಿ ಇದ್ದಾರೆಂದು ಖುಷಿಯಿಂದ ಹೇಳಿಕೊಂಡರೆ, ಇನ್ನು ಅನೇಕರು “ಸಾರ್ ರವಿಶಂಕರ್ ಡೇಟ್ ಇಲ್ವಂತೆ ..’ ಎಂದು ಸಪ್ಪೆ ಮುಖ ಹಾಕುತ್ತಾರೆ. “ಏನ್ ಸಾರ್ ನೀವ್ ಅಷ್ಟೊಂದು ಬಿಝಿನಾ, ತಿಂಗಳಲ್ಲಿ ಮನೆಯಲ್ಲಿ ಒಂದೆರಡು ದಿನ ಇರೋಕ್ಕಾದ್ರು ಟೈಮ್ ಇರುತ್ತಾ?’ ಎಂದು ಕೇಳಿದರೆ, “45 ವರ್ಷ ಕೆಲಸವಿಲ್ಲದೇ ಮನೆಯಲ್ಲೇ ಇದ್ನಾನಲ್ಲ ಸಾರ್..’ ಎಂಬ ಉತ್ತರ ರವಿಶಂಕರ್ ಕಡೆಯಿಂದ ಬರುತ್ತದೆ. ರವಿಶಂಕರ್ ಹೀಗೆ ಹೇಳುವಾಗ 45 ವರ್ಷ ಒಳ್ಳೆಯ ಅವಕಾಶ ಸಿಗದ ಬಗೆಗಿನ ಬೇಸರ ಎದ್ದು ಕಾಣುತಿತ್ತು. ತೆಲುಗು ಚಿತ್ರರಂಗ ಗುರುತಿಸದೇ ಕೇವಲ ಡಬ್ಬಿಂಗ್‌ಗೆ ಸೀಮಿತಗೊಳಿಸಿದ ಬಗ್ಗೆಯೂ ರವಿಶಂಕರ್‌ಗೆ ಬೇಸರ ಇದ್ದಂತಿತ್ತು. ಆದರೆ ಈಗ 45 ವರ್ಷದ ಪರಿಸ್ಥಿತಿ ಉಲ್ಟಾ ಆಗಿದೆ. 45 ವರ್ಷಗಳ ಹಿಂದೆ ತಿಂಗಳಲ್ಲಿ ಐದು ದಿನ ಕೆಲಸ ಸಿಗುತ್ತಿದ್ದ ರವಿಶಂಕರ್ ಅವರು ಈಗ ತಿಂಗಳಲ್ಲಿ ಐದೇ ಐದು ಫ್ರೀ. ಉಳಿದಂತೆ 25 ದಿನ ಕೆಲಸ. ಅಂದು ಅವಕಾಶ ಕೇಳಿಕೊಂಡು ಹೋಗುತ್ತಿದ್ದ ರವಿಶಂಕರ್ ಇಂದು ಬಂದ ಅವಕಾಶಗಳನ್ನು ಒಪ್ಪಿಕೊಳ್ಳದಷ್ಟು ಬಿಝಿ. “ನಿಜ ಸಾರ್, ಈಗೀನ ನನ್ನ ಬೆಳವಣಿಗೆ ನೋಡಿ ನನಗೇ ಖುಷಿಯಾಗುತ್ತಿದೆ. ಈಗ ತಿಂಗಳಲ್ಲಿ ಕೇವಲ ಐದು ದಿನ ಮನೆಯಲ್ಲಿರಲು ಟೈಮ್ ಸಿಗುತ್ತದೆ. ಉಳಿದಂತೆ 25 ದಿನ ಶೂಟಿಂಗ್. ಆದರೆ 45 ವರ್ಷ ಇದು ಉಲ್ಟಾ ಆಗಿತ್ತು. ಅಷ್ಟು ವರ್ಷ ಕೆಲಸವಿಲ್ಲದೇ ಮನೆಯಲ್ಲೇ ಇದ್ದೆ. ಬರೀ ಡಬ್ಬಿಂಗ್ ಮಾಡಿಕೊಂಡು. ಹಾಗಂತ ತಿಂಗಳು ಪೂರ್ತಿ ಡಬ್ಬಿಂಗ್ ಕೆಲಸವಿರುತ್ತಿರಲಿಲ್ಲ. ನಾನು ಡಬ್ಬಿಂಗ್‌ನಲ್ಲಿ ತುಂಬಾ ಫಾಸ್ಟ್. ಅದೆಷ್ಟೇ ದೊಡ್ಡ ಪಿಕ್ಚರ್ ಆಗಲಿ, ಎಷ್ಟೇ ಡೈಲಾಗ್ ಇರಲಿ ನಾನು ಬೆಳಗ್ಗೆ ಒಂಭತ್ತುವರೆಗೆ ಕುಳಿತರೆ ಸಂಜೆಯೊಳಗೆ ಮುಗಿಸಿಬಿಡುತ್ತೇನೆ. ಹಾಗಾಗಿ, ವಾರದಲ್ಲಿ ಐದು ದಿನ ಕೆಲಸವಿರುತ್ತಿತ್ತು.
Related Articles
Advertisement
ಹೀರೋ ಮಾಡಲು ಬರುತ್ತಿದ್ದಾರೆಕಾಮಿಡಿ ನಟರಾಗಿ ಅಥವಾ ವಿಲನ್ ಆಗಿ ಕ್ಲಿಕ್ ಆಗುತ್ತಿದ್ದಂತೆ ಅದರ ಲಾಭ ಪಡೆಯಲು ಅನೇಕರು ಬರುತ್ತಾರೆ. ಅದು “ನಿಮ್ಮನ್ನು ಹೀರೋ ಮಾಡುತ್ತೇನೆಂದು’. ಇಂತಹ ಆಸೆಗೆ ಬಿದ್ದು ಅನೇಕರು ಇವತ್ತು ಹೀರೋ ಆಗಿದ್ದಾರೆ. ಕೆಲವರು ಕ್ಲಿಕ್ ಆದರೆ, ಅನೇಕರು ಇದ್ದ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ರವಿಶಂಕರ್ ಅವರಿಗೂ ಅಂತಹ ಅನುಭವವಾಗಿದೆ. ಅನೇಕರು ಬಂದು “ನೀವು ಹೀರೋ ಆಗಿ ಸಾರ್ …’ ಎನ್ನುತ್ತಿದ್ದಾರಂತೆ. ಆದರೆ ರವಿಶಂಕರ್ ಅವರೆಲ್ಲರಿಗೂ “ನೋ’ ಎಂದು ಕಳುಹಿಸಿದ್ದಾರೆ. “ನನ್ನ ಬಳಿಯೂ ಅನೇಕರು ಹೀರೋ ಮಾಡಲು ಬಂದ್ರು, ಈಗಲೂ ಬರುತ್ತಿದ್ದಾರೆ. ಆದರೆ, ನಾನು ಅದಕ್ಕೆ ಒಪ್ಪಲಿಲ್ಲ. ಹೀರೋ ಅನ್ನೋದಕ್ಕಿಂತ ಒಂದು ಪ್ರಮುಖ ಪಾತ್ರ ಇದೆ ಅನ್ನಿ, ಮಾಡ್ತೀನಿ ಅಂದೆ. ಹೀರೋ ಅಂದಾಗ ನೂರೆಂಟು ಜವಾಬ್ದಾರಿಗಳು ಬರುತ್ತದೆ. ಅದರ ಬರಲು ಒಂದು ಇಂಫಾರ್ಟೆಂಟ್ ರೋಲ್ ಕೊಟ್ಟರೆ ಒಳ್ಳೆಯದು. ಈಗ ನೋಡಿ, “ಅಧ್ಯಕ್ಷ’ದಲ್ಲಿ ನಾನು ಹೀರೋ ಅಲ್ಲ. ಆದರೂ ಸಿನಿಮಾದುದ್ದಕ್ಕೂ ನನ್ನ ಪಾತ್ರ ಸಾಗಿ ಬಂತು. ಜನ ಕೂಡಾ ಇಷ್ಟಪಟ್ಟರು. ಇನ್ನು, “ಜಿಗರ್‌ಥಂಡ’ದಲ್ಲೂ ಅಷ್ಟೇ ಸಿನಿಮಾದಲ್ಲಿ ಪ್ರಮುಖ ಪಾತ್ರ ಸಿಕ್ಕಿತು. ನನಗೆ ಆ ತರಹದ ಪಾತ್ರಗಳು ಮುಖ್ಯ’ ಎನ್ನುವ ಮೂಲಕ ಹೀರೋ ಆಗಲು ರೆಡಿಯಿಲ್ಲ ಎಂಬ ಸಂದೇಶ ರವಾನಿಸುತ್ತಾರೆ ರವಿಶಂಕರ್.
ಮೊದಲೇ ಹೇಳಿದಂತೆ ರವಿಶಂಕರ್ ಬೇಡಿಕೆಯ ನಟ. ಅವರನ್ನು ಹುಡುಕಿಕೊಂಡು ಸಾಕಷ್ಟು ಮಂದಿ ಬರುತ್ತಾರೆ. ಬಹುತೇಕರು “ಕೆಂಪೇಗೌಡ’ದ ಆರ್ಮುಗಂ ಅನ್ನೇ ಗಮನದಲ್ಲಿಟ್ಟುಕೊಂಡು ಪಾತ್ರ ಸೃಷ್ಟಿಸುತ್ತಾರೆ. ಈ ಮಾತನ್ನು ಸ್ವತಃ ರವಿಶಂಕರ್ ಕೂಡಾ ಒಪ್ಪುತ್ತಾರೆ. “ಸಾಕಷ್ಟು ಮಂದಿ ಹೊಸಬರು ಬರುತ್ತಾರೆ. ಎಲ್ಲಿ ಮಾಣಿಕ್ಯವಿರುತ್ತದೆಂದು ಗೊತ್ತಿರಲ್ಲ ನೋಡಿ. ಹಾಗಾಗಿ ಎಲ್ಲರ ಕಥೆಯನ್ನು ಕೇಳುತ್ತೇನೆ. ಕೆಲವು ಚೆನ್ನಾಗಿರುತ್ತವೆ ಕೂಡಾ. ಆದರೆ, ಅನೇಕರು ಅದೇ ಖಡಕ್ ಡೈಲಾಗ್ ಅನ್ನೇ ಗಮನದಲ್ಲಿಟ್ಟುಕೊಂಡು ಪಾತ್ರ ಬರೆದಿರುತ್ತಾರೆ. ಮತ್ತೆ ಅದೇ ಶೈಲಿಯ ಪಾತ್ರ. ನೋಡಿ ನೋಡಿ ಜನರಿಗೆ ಬೋರಾಗಿರುತ್ತದೆ. ಹಾಗಂತ ಮಾಡಬಾರದೆಂದಲ್ಲ. ಸ್ಕ್ರಿಪ್ಟ್ ಚೆನ್ನಾಗಿರಬೇಕು, ಕ್ಯಾರೆಕ್ಟರ್‌ಗೆ ಆ ಒಂದು ಪ್ಯಾರಾಮೀಟರ್ ಬೇಕು. ಆಗ ಮಾತ್ರ ಸಾಧ್ಯ’ ಎನ್ನುವ ರವಿಶಂಕರ್ ಸಾಕಷ್ಟು ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದಾರೆ ಕೂಡಾ.
ರವಿಶಂಕರ್ ಕನ್ನಡ ಚಿತ್ರರಂಗಕ್ಕೆ ಬಂದು ಐದು ವರ್ಷ ಆಗಿದೆ. ಈವರೆಗೆ ಅವರು ಮಾಡಿರುವ ಸಿನಿಮಾಗಳ ಸಂಖ್ಯೆ 55 ದಾಟಿದೆ. ನಿಜಕ್ಕೂ ಇದು ಒಳ್ಳೆಯ ಗ್ರಾಫ್. ಇದಕ್ಕೆಲ್ಲಾ ಕಾರಣ ಕನ್ನಡ ಜನತೆಯ ಪ್ರೀತಿ ಎನ್ನುತ್ತಾರೆ. “ಜೈ ಕರ್ನಾಟಕ, ಜೈ ತಾಯಿ ಭುವನೇಶ್ವರಿ ಎನ್ನಬೇಕಷ್ಟೇ. ಇದು ಬಾಯಿ ಮಾತಿಗೆ ಹೇಳುತ್ತಿಲ್ಲ. ಇವತ್ತು ನಾನು ಈ ಮಟ್ಟದಲ್ಲಿರಲು ಕಾರಣ ಕನ್ನಡ ಚಿತ್ರರಂಗ ಹಾಗೂ ಇಲ್ಲಿನ ಜನ ತೋರಿರುವ ಪ್ರೀತಿ. ಇದು ನಿರೀಕ್ಷೆಗೂ ಮೀರಿದ ಬೆಳವಣಿಗೆ. ನಾನು ಇದನ್ನು ಕನಸಿನಲ್ಲೂ ನೆನೆಸಿರಲಿಲ್ಲ. ಇಲ್ಲಿನವರು ಅಭಿಮಾನ, ಪ್ರೀತಿ ನೋಡಿದ್ರೆ ಮೈ ಜುಮ್ಮೆನ್ನುತ್ತದೆ’ ಎನ್ನುವ ರವಿಶಂಕರ್‌ಗೆ ಸಾಕಷ್ಟು ಅಭಿಮಾನಿ ಸಂಘಗಳು ಕೂಡಾ ಇವೆ. ಜೊತೆಗೆ ಮನೆ ಬಳಿ ಬಂದು ಫೋಟೋ ತೆಗೆಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸುದೀಪ್ ಕೊಟ್ಟ ಅವಕಾಶ
ರವಿಶಂಕರ್ ಎಂಬ ನಟ ಬೆಳಕಿಗೆ ಬಂದಿದ್ದು, ಆರ್ಮುಗಂ ಆಗಿ ಅರಚಿದ್ದು ಸುದೀಪ್‌ರಿಂದ. ಸುದೀಪ್ ನಿರ್ದೇಶಿಸಿ, ನಟಿಸಿರುವ “ಕೆಂಪೇಗೌಡ’ ಚಿತ್ರದ ಆರ್ಮುಗಂ ಪಾತ್ರದ ಹುಡುಕಾಟದಲ್ಲಿದ್ದ ಸುದೀಪ್‌ಗೆ ಕಣ್ಣಿಗೆ ಬಿದ್ದಿದ್ದು ರವಿಶಂಕರ್. ಅದರಂತೆ ಅವರಿಂದ ಪಾತ್ರ ಮಾಡಿಸಿದ ಸುದೀಪ್ ಕೇವಲ ಪಾತ್ರ ಕೊಡಲಿಲ್ಲ. ಬದಲಾಗಿ ರವಿಶಂಕರ್‌ಗೆ ಹೊಸ ಜೀವನವನ್ನೇ ಕೊಟ್ಟರು. ಈ ಮಾತನ್ನು ರವಿಶಂಕರ್ ಕೂಡಾ ಒಪ್ಪುತ್ತಾರೆ. “ನನಗೆ ಐದು ವರ್ಷಗಳ ಹಿಂದೆ ಸುದೀಪ್ ಗೊತ್ತಿರಲಿಲ್ಲ. “ಕೆಂಪೇಗೌಡ’ ಮೂಲಕ ನಮ್ಮಿಬ್ಬರ ಪರಿಚಯವಾಯಿತು. ಈಗ ಇಬ್ಬರು ಒಳ್ಳೆಯ ಗೆಳೆಯರಾಗಿದ್ದೇವೆ. “ಮುಕುಂದ ಮುರಾರಿ’ ನಾನು, ಸುದೀಪ್ ಜೊತೆಯಾಗಿ ನಟಿಸಿರುವ ಆರನೇ ಸಿನಿಮಾ. “ಹೆಬ್ಬುಲಿ’ ಸೇರಿದರೆ ಏಳು ಸಿನಿಮಾ ಜೊತೆಯಾಗಿ ನಟಿಸಿದಂತಾಗುತ್ತದೆ. ಸಿನಿಮಾ ಬಿಟ್ಟರೆ ಬೇರೇನು ಗೊತ್ತಿಲ್ಲದ ನನ್ನ ಗುಣ ಅವರಿಗೆ ಇಷ್ಟವಾಯಿತು. ಏಕೆಂದರೆ ಅವರು ಕೂಡಾ ಸಿನಿಮಾವನ್ನು ಉಸಿರಾಡುವವರು. ಹಾಗಾಗಿ ಇಬ್ಬರು ಫ್ರೆಂಡ್ಸ್ ಆದೆವು’ ಎಂದು ಸುದೀಪ್ ಬಗ್ಗೆ ಹೇಳುತ್ತಾರೆ.
ಈಗಾಗಲೇ ಸಾಯಿಕುಮಾರ್ ಮಗ ಆದಿ ಹೀರೋ ಆಗಿ ಬೆಳೆಯುತ್ತಿದ್ದಾರೆ. ಹಾಗಾದರೆ ರವಿಶಂಕರ್ ಮಗ ಹೀರೋ ಆಗಲ್ವಾ ಎಂದು ನೀವು ಕೇಳಬಹುದು. “ಖಂಡಿತಾ ಆಗುತ್ತಾನೆ. ಈಗಾಗಲೇ ಆ ಕೆಲಸ ನಡೆಯುತ್ತಿದೆ. ನಾನೇ ಸ್ಕ್ರಿಪ್ಟ್ ಮಾಡಿದ್ದೇನೆ. ನಿರ್ದೇಶನದ ಬಗ್ಗೆ ಯೋಚಿಸಿಲ್ಲ. ಸ್ಕ್ರಿಪ್ಟ್ ಅಂತೂ ಬಹುತೇಕ ಫೈನಲ್ ಆಗಿದೆ. ಮಗ ಕೂಡಾ ನಟನೆಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾನೆ’ ಎನ್ನುವ ಮೂಲಕ ಮಗನನ್ನು ಹೀರೋ ಆಗಿ ಲಾಂಚ್ ಮಾಡುವ ಖುಷಿ ಹಂಚಿಕೊಳ್ಳುತ್ತಾರೆ. ಮುಕುಂದನ ಸ್ವಾಮಿ
ಸುದೀಪ್-ಉಪೇಂದ್ರ ಜೊತೆಯಾಗಿ ನಟಿಸಿರುವ “ಮುಕುಂದ ಮುರಾರಿ’ ಈ ಚಿತ್ರದಲ್ಲಿ ರವಿಶಂಕರ್ ಸ್ವಾಮೀಜಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಅವರ ಪಾತ್ರಗಳಿಗಿಂತ ಇದು ಭಿನ್ನವಾದ ಪಾತ್ರ ಮತ್ತು ಅನುಭವವಂತೆ. “ನಾನು ಮಿಥುನ್ ಚಕ್ರವರ್ತಿಯವರ ದೊಡ್ಡ ಅಭಿಮಾನಿ. ಹಿಂದಿಯಲ್ಲಿ “ಓ ಮೈ ಗಾಡ್’ ನೋಡಿದ್ದೆ. ಆ ನಂತರ ತೆಲುಗಿಗೆ ರೀಮೇಕ್ ಆದಾಗ ಅಲ್ಲೂ ಮಿಥುನ್ ಚಕ್ರವರ್ತಿ ಮಾಡಿದ್ದರು. ಅವರ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೆ. ಈಗ ಆ ಪಾತ್ರವನ್ನು ಕನ್ನಡದಲ್ಲಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಬಿಗ್‌ಸ್ಟಾರ್ ನಡುವಿನ ಪಿಲ್ಲರ್ ತರಹದ ಪಾತ್ರ. ತುಂಬಾ ಚಾಲೆಂಜಿಂಗ್ ಆಗಿತ್ತು. ಅರಚಾಟವಿಲ್ಲದ, ನನಗೆ ಮ್ಯಾನರೀಸಂ ಬಿಟ್ಟು ಮಾಡಬೇಕಾದ ಪಾತ್ರವದು. ಎಷ್ಟೇ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ನಗುತ್ತಲೇ ಬೇರೆ ರೀತಿ ದಾಟಿಸಬೇಕಾದ ಪಾತ್ರ. ತಕ್ಕಮಟ್ಟಿಗೆ ಮಾಡಿದ್ದೇನೆ’ ಎಂದು ಪಾತ್ರ ಬಗ್ಗೆ ಹೇಳುತ್ತಾರೆ. ಬರಹ: ರವಿಪ್ರಕಾಧ್ ರೈ; ಚಿತ್ರಗಳು: ಮನು ಮತ್ತು ಸಂಗ್ರಹ