ಮುಂಬಯಿ : ಏರಿಂಡಿಯಾ ಸಿಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್ ಅವರ ಕೃತ್ಯವನ್ನು ಸಮರ್ಥಿಸುವ ರೀತಿಯಲ್ಲಿ ಶಿವಸೇನೆಯ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಅವರು, “ಅಗತ್ಯ ಬಿದ್ದಾಗೆಲ್ಲ ನಾವು ಕೈ ಎತ್ತುತ್ತೇವೆ’ ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಕರ್ತವ್ಯ ನಿರತ ವಿಮಾನ ಸಿಬಂದಿ ಮೇಲಿನ ಹಲ್ಲೆಗಾಗಿ ಏರಿಂಡಿಯಾ ಮಾತ್ರವಲ್ಲದೆ ದೇಶೀಯ ಖಾಸಗಿ ವಿಮಾನಯಾನ ಸಂಸ್ಥೆಗಳು ಗಾಯಕ್‌ವಾಡ್‌ಗೆ ‘ಹಾರಾಟ ನಿಷೇಧ’ ಹೇರಿದ ಪರಿಣಾಮವಾಗಿ ನಿನ್ನೆ ಶುಕ್ರವಾರ ಆತ ಗತ್ಯಂತರವಿಲ್ಲದೆ ರೈಲಿನಲ್ಲಿ ಪ್ರಯಾಣಿಸಬೇಕಾಯಿತು. ಇದರ ಬೆನ್ನಿಗೇ ಸಂಜಯ್ ರಾವತ್ ಅವರಿಂದ ಈ ಆಕ್ರಮಣಕಾರಿ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
ಆದರೆ ತನ್ನ ಈ ಹೇಳಿಕೆಯಿಂದ ವಿವಾದ ಉಂಟಾಗದಿರಲೆಂಬ ಎಚ್ಚರಿಕೆಯಲ್ಲಿ ರಾವತ್ ಅವರು, “ಗಾಯಕ್‌ವಾಡ್ ಅವರ ವರ್ತನೆಯನ್ನು ಶಿವಸೇನೆ ಬೆಂಬಲಿಸುವುದಿಲ್ಲ’ ಎಂದು ಕೊನೆಯಲ್ಲಿ ಹೇಳಿದರು.
“ರವೀಂದ್ರ ಗಾಯಕ್‌ವಾಡ್ ಅವರ ವರ್ತನೆಯನ್ನು ಶಿವಸೇನೆ ಬೆಂಬಲಿಸುವುದಿಲ್ಲ; ಆದರೂ ನಮ್ಮ ಸಂಸದರಿಗೆ ಈ ರೀತಿಯಾಗಿ ವರ್ತಿಸುವುದಕ್ಕೆ ಬಲವಂತ ಪಡಿಸಿದ ಸನ್ನಿವೇಶದ ಬಗ್ಗೆ ತನಿಖೆ ನಡೆಯಬೇಕು’ ಎಂದು ರಾವತ್ ಹೇಳಿದರು.
“ಯಾರನ್ನೇ ಆದರೂ ಹೊಡೆದು ಹಲ್ಲೆ ಮಾಡುವುದು ಶಿವಸೇನೆಯ ಸಂಸ್ಕೃತಿಯಲ್ಲ; ಆದರೂ ಅಗತ್ಯ ಬಿದ್ದಾಗ ನಾವು ನಮ್ಮ ಕೈಯನ್ನು ಹೊಡೆಯಲು ಎತ್ತಲೇ ಬೇಕಾಗುತ್ತದೆ’ ಎಂದು ರಾವತ್ ಹೇಳಿದರು.