ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಜನತೆಗೆ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಕೆಲವರು ವಸ್ತುಗಳ ರೂಪದಲ್ಲಿ ನೀಡಿದರೆ, ಇನ್ನು ಕೆಲವರು ಹಣದ ರೂಪದಲ್ಲಿ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇವೆಲ್ಲಾ ತಾತ್ಕಾಲಿಕ ಪರಿಹಾರಗಳು. ಊರಿಗೆ ಊರನ್ನೇ ಕಳೆದುಕೊಂಡಿರುವ ಜನರಿಗೆ ಶಾಶ್ವತವಾದ ಪರಿಹಾರದ ಅಗತ್ಯವಿದೆ.
ಹಾಗಾದರೆ ಏನು ಮಾಡಬಹುದು? ಈ ಬಗ್ಗೆ ನಟ ರವಿಚಂದ್ರನ್ ಅವರಲ್ಲಿ ಒಂದು ಒಳ್ಳೆಯ ಐಡಿಯಾ ಇದೆ. ಅದು ಊರಿಗೆ ಊರನ್ನೇ ನಿರ್ಮಿಸಿಕೊಡೋದು. ಈ ಮೂಲಕ ಶಾಶ್ವತವಾದ ಪರಿಹಾರ ನೀಡೋದು. “ಅಕ್ಕಿ ಕೊಡೋದು, ಬಿಸ್ಕೆಟ್ ಕೊಡೋದು ತಾತ್ಕಾಲಿಕ ಪರಿಹಾರ. ಅಲ್ಲಿನ ಜನತೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಪ್ರವಾಹದ ರಭಸಕ್ಕೆ ಊರಿಗೆ ಊರೇ ಕೊಚ್ಚಿ ಹೋಗಿದೆ. ಜನ ಮನೆ ಮಟ್ಟಗಳನ್ನು ಕಳೆದುಕೊಂಡಿದ್ದಾರೆ.
ಹೀಗಿರುವಾಗ ಒಂದಷ್ಟು ಮಂದಿ ಸೇರಿಕೊಂಡು ಒಂದು ಊರಿಗೆ ಊರನ್ನೇ ನಿರ್ಮಿಸಿಕೊಟ್ಟರೆ ಅದು ತುಂಬಾ ಸಹಾಯವಾಗುತ್ತದೆ. ಈಗ ಚಿತ್ರರಂಗದ ವತಿಯಿಂದ ಏನು ಮಾಡುತ್ತೀರಿ ಎಂದು ಕೇಳುತ್ತಾರೆ. ಇಲ್ಲಿ ಒಬ್ಬೊಬ್ಬರು ಮಾಡುವ ಬದಲು ಎಲ್ಲರೂ ಒಟ್ಟಾಗಿ ಒಂದು ಊರನ್ನೇ ಪುನರ್‌ನಿರ್ಮಾಣ ಮಾಡುವುದು ಒಳ್ಳೆಯದು. ಎಲ್ಲರೂ ದೊಡ್ಡ ಮಟ್ಟದಲ್ಲಿ ಯೋಚಿಸಿದಾಗ ಇದು ಸಾಧ್ಯ. ಅಲ್ಲಿನ ಜನ ಜೀವನ ಕಳೆದುಕೊಂಡಿದ್ದಾರೆ.
ಅವರ ಖುಷಿ, ನೆಮ್ಮದಿ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಆ ಜನರ ಖುಷಿಯನ್ನು ಮತ್ತೆ ತಂದುಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಒಂದಷ್ಟು ಜನ ಸೇರಿ ಚಿಕ್ಕ ಚಿಕ್ಕ ಊರುಗಳನ್ನು ಸೃಷ್ಟಿ ಮಾಡಿದಾಗ ಅದು ಕಾಣುತ್ತದೆ ಮತ್ತು ಶಾಶ್ವತ ಪರಿಹಾರವಾಗುತ್ತದೆ. ನಾವಲ್ಲಿ ಒಂದು ಗುರುತು ಬಿಟ್ಟು ಬರಬೇಕು. ದೊಡ್ಡದಾಗಿ ಸಹಾಯ ಮಾಡಲು ಚಿಕ್ಕ ಚಿಕ್ಕವರೆಲ್ಲಾ ಒಟ್ಟಾಗಬೇಕು. ಆಗ ಮಾತ್ರ ನಾವು ಮಾಡಿದ್ದೂ ಸಾರ್ಥಕವಾಗುತ್ತದೆ.
ಈಗ ಅಲ್ಲಿನ ಜನ ಕೂಡಾ ಜಾತಿ-ಧರ್ಮ ಮರೆತು ಒಟ್ಟಾಗಿ ಒಂದೇ ಸೂರಿನಡಿ ಇದ್ದಾರೆ. ಇದನ್ನೇ ಮಾದರಿಯನ್ನಾಗಿಸಿ ಎಲ್ಲರೂ ಖುಷಿಯಾಗಿ ಬದುಕಬೇಕು’ ಎನ್ನುವುದು ರವಿಚಂದ್ರನ್ ಮಾತು. ಅಂದಹಾಗೆ, ರವಿಚಂದ್ರನ್ ಅವರ ಈ ಮಾತಿಗೆ ವೇದಿಕೆಯಾಗಿದ್ದು “ರವಿಚಂದ್ರ’ ಚಿತ್ರದ ಮುಹೂರ್ತ. ಓಂ ಪ್ರಕಾಶ್ ರಾವ್ ನಿರ್ದೇಶನದ “ರವಿಚಂದ್ರ’ ಚಿತ್ರದಲ್ಲಿ ರವಿಚಂದ್ರನ್, ಉಪೇಂದ್ರ ಜೊತೆಯಾಗಿ ನಟಿಸುತ್ತಿದ್ದಾರೆ.
ಈ ನಡುವೆಯೇ ರವಿಚಂದ್ರನ್ ಅವರ “ರಾಜೇಂದ್ರ ಪೊನ್ನಪ್ಪ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಜನವರಿಯಲ್ಲಿ ಆ ಚಿತ್ರವನ್ನು ತೆರೆಗೆ ತರುವ ಆಲೋಚನೆ ರವಿಚಂದ್ರನ್ ಅವರಿಗಿದೆ. ಲವ್, ಗ್ಲಾಮರ್, ಆ್ಯಕ್ಷನ್, ಪೊಲಿಟಿಕ್ಸ್ … ಹೀಗೆ ಎಲ್ಲಾ ಆಯಾಮಗಳಿರುವ ಕಮರ್ಷಿಯಲ್ ಸಿನಿಮಾ ಇದಾಗಿರುವುದರಿಂದ ಚಿತ್ರೀಕರಣ ಸ್ವಲ್ಪ ತಡವಾಗುತ್ತಿದೆ ಎನ್ನುವುದು ರವಿಚಂದ್ರನ್ ಅವರ ಮಾತು.