ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿದ ನಂತರ ನಾಯಕ ವಿರಾಟ್ ಕೊಹ್ಲಿ ವರ್ತನೆ ವಿರುದ್ಧ ದೂರು ನೀಡಿದ್ದ ಹಿರಿಯ ಆಟಗಾರ ಆರ್.ಅಶ್ವಿನ್ ಅವರಾ? ಟಿ20 ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಿದ್ದಾರೆ.
ಇನ್ನವರನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಸಲಾಗುತ್ತದಾ? ಎಂಬ ಸುದ್ದಿಗಳು ಈಗ ಹಬ್ಬಿವೆ. ಅದರಲ್ಲೂ ಅಶ್ವಿನ್ ಅವರೇ ದೂರು ನೀಡಿದ್ದು ಎಂಬ ಸುದ್ದಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ. ವಸ್ತುಸ್ಥಿತಿಯಲ್ಲಿ ಅ.17ರಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಬೇಕೆಂದು ಕೇಳಿದ್ದರಂತೆ.
ಆದರೆ ಆಯ್ಕೆಸಮಿತಿ ಅದನ್ನು ನಿರಾಕರಿಸಿ ಆರ್.ಅಶ್ವಿನ್‌ರನ್ನು ಆಯ್ಕೆ ಮಾಡಿದೆ. ಇದು ಕೊಹ್ಲಿಗೆ ಒಪ್ಪಿಗೆಯಾಗಿಲ್ಲ, ಆದ್ದರಿಂದಲೇ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಿರಬಹುದು ಎಂಬ ಅಭಿಪ್ರಾಯಗಳಿವೆ.
ಅಶ್ವಿನ್ ದೂರಿನ ಹಿನ್ನೆಲೆ?: ಇಂಗ್ಲೆಂಡ್‌ನಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್ ನಡೆದಿತ್ತು. ಅದರಲ್ಲಿ ಭಾರತ ಸೋತು ಹೋಗಿತ್ತು. ಅದಾದ ಮೇಲೆ ಆಟಗಾರರೊಬ್ಬರು, ಪೂರ್ಣ ಬದ್ಧತೆಯನ್ನು ಪಂದ್ಯದ ವೇಳೆ ತೋರಿಲ್ಲ ಎಂದು ಕೊಹ್ಲಿ ಆರೋಪಿಸಿದ್ದಂತೆ.
ಈ ಆಟಗಾರ ಅಶ್ವಿನ್ ಎಂದು ಊಹಿಸಲಾಗಿತ್ತು. ಈ ಪ್ರಕರಣದ ಬಳಿಕ ಹಿರಿಯ ಆಟಗಾರರೊಬ್ಬರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಕೊಹ್ಲಿ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆ ಆಟಗಾರ ಅಶ್ವಿನ್ ಎಂದು ವರದಿಗಳಾಗಿವೆ. ಇಂಗ್ಲೆಂಡ್‌ನಲ್ಲಿ ನಡೆದ ನಾಲ್ಕೂ ಟೆಸ್ಟ್‌ಗಳಲ್ಲಿ ಆರ್.ಅಶ್ವಿನ್‌ಗೆ ಸ್ಥಾನ ಸಿಕ್ಕಿರಲಿಲ್ಲ.
ಸದ್ಯ ಅಶ್ವಿನ್ ಟೆಸ್ಟ್ ತಂಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಅತ್ಯುತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಹಾಗಿದ್ದೂ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಹೀಗೆ ನಾಲ್ಕೂ ಟೆಸ್ಟ್‌ಗಳಲ್ಲಿ ಹೊರಗೆ ಕೂರಿಸಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಈ ಬಗ್ಗೆ ಜಯ್ ಶಾಗೆ ದೂರು ನೀಡಿದ ಅಶ್ವಿನ್; ಕೊಹ್ಲಿಯಿಂದ ನನಗೆ ತಂಡದಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಹೇಳಿದ್ದಾರಂತೆ!