Advertisement

ರವಿಶಾಸ್ತ್ರಿ ಟೀಮ್‌ ಇಂಡಿಯಾ ಕೋಚ್‌

02:25 AM Jul 12, 2017 | Harsha Rao |

ಹೊಸದಿಲ್ಲಿ: ದೀರ್ಘ‌ ಕಾಲದಿಂದ ಸುದ್ದಿಯಾಗುತ್ತಲೇ ಇದ್ದ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಯ್ಕೆ ಗೊಂದಲಕ್ಕೆ ಮಂಗಳವಾರ ರಾತ್ರಿ ತೆರೆ ಬಿದ್ದಿದೆ. ನಿರೀಕ್ಷೆ ಯಂತೆ ರವಿಶಾಸ್ತ್ರಿ ಟೀಮ್‌ ಇಂಡಿಯಾದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಜಹೀರ್‌ ಖಾನ್‌ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

Advertisement

ಕ್ರಿಕೆಟ್‌ ಸಲಹಾ ಸಮಿತಿಯ ಸೂಚನೆಯಂತೆ ನಾವು ರವಿಶಾಸ್ತ್ರಿ ಅವರನ್ನು ಕೋಚ್‌ ಹುದ್ದೆಗೆ ನೇಮಿಸಿದ್ದೇವೆ ಎಂದು ಬಿಸಿಸಿಐ ಉಸ್ತುವಾರಿ ಅಧ್ಯಕ್ಷ ಸಿ.ಕೆ. ಖನ್ನಾ ಮಾಧ್ಯಮಗಳಿಗೆ ತಿಳಿಸಿದರು.

ಈ ಹಿಂದೆ ಸೋಮವಾರ ಕೋಚ್‌ ಆಯ್ಕೆ ಮಾಡಲಾಗುತ್ತದೆಂದು ಹೇಳಲಾಗಿತ್ತು. ರವಿವಾರ ಸಂದರ್ಶನವೂ ಮುಗಿದಿತ್ತು. ದಿಢೀರನೆ ಸೋಮವಾರ ಆಯ್ಕೆಯನ್ನು ಮುಂದೂಡಲಾಯಿತು. ಮಂಗಳವಾರ ಇನ್ನೇನು ರವಿಶಾಸ್ತ್ರಿ ಕೋಚ್‌ ಆಗಿಯೇ ಬಿಟ್ಟರು ಎಂಬ ಖಚಿತ ಸುದ್ದಿಗಳು ಬಿತ್ತರ ವಾಗಿದ್ದವು. ಅಷ್ಟರಲ್ಲಿ ಸ್ವತಃ ಬಿಸಿಸಿಐ ರವಿಶಾಸ್ತ್ರಿ ಆಯ್ಕೆಯಾಗಿಲ್ಲ, ಎಲ್ಲವೂ ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿತು!

ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಮಂಗಳವಾರ ಈ ಬಗ್ಗೆ ಸ್ಪಷ್ಟನೆ ನೀಡಿ, ಟೀವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಸುಳ್ಳು, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದರು. ಅದಕ್ಕಿಂತ ಮುಂಚೆ ಪತ್ರಿಕಾಗೋಷ್ಠಿ ನಡೆಸಿದ ಸೌರವ್‌ ಗಂಗೂಲಿ, ಮಂಗಳವಾರವೂ ಕೋಚ್‌ ಆಯ್ಕೆಯಿಲ್ಲ. ಜು. 17ರ ಅನಂತರ ಕೊಹ್ಲಿ ಭಾರತಕ್ಕೆ ಬರುತ್ತಾರೆ. ಆಗ ಅವರೊಂದಿಗೆ ಮುಖತಃ ಮಾತುಕತೆ ನಡೆಸಿಯೇ ಕೋಚ್‌ ಹೆಸರನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು. ಆದರೆ ರಾತ್ರಿ 10.15ರ ವೇಳೆ ಕೋಚ್‌ ಹುದ್ದೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಯಿತು.

ಕೊಹ್ಲಿ  ಜತೆ ಮಾತುಕತೆ: ಸೌರವ್‌ ಗಂಗೂಲಿ
ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸೌರವ್‌ ಗಂಗೂಲಿ ಎಲ್ಲ ಸುದ್ದಿ ಯಾದಂತೆ ಕೋಚ್‌ ಮಂಗಳವಾರ ಸಂಜೆ ಕೋಚ್‌ ಹೆಸರನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವಿರಾಟ್‌ ಕೊಹ್ಲಿ ಸದ್ಯ ಅಮೆರಿಕದಲ್ಲಿ ವಿರಾಮ ದಿನಗಳನ್ನು ಕಳೆ ಯುತ್ತಿದ್ದಾರೆ. ಜು. 17ರ ಅನಂತರ ಭಾರತಕ್ಕೆ ಬರುತ್ತಾರೆ. ಕೊಹ್ಲಿ ಬಂದ ಬಳಿಕ ಅವರೊಂದಿಗೆ ಮಾತುಕತೆ ನಡೆಸಿಯೇ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದರು.

Advertisement

“ವಿರಾಟ್‌ ಕೊಹ್ಲಿ ಇಲ್ಲಿ ಮುಖ್ಯ ವ್ಯಕ್ತಿಯಲ್ಲ. ಅವರೂ ಮುಖ್ಯ ವ್ಯಕ್ತಿಯಾಗಬೇಕೆಂದು ಬಯಸಿಯೂ ಇಲ್ಲ. ಅವರ ಬಗ್ಗೆ ನನಗೂ ಗೌರವವಿದೆ. ಅವರು ಭಾರತದ ಶ್ರೇಷ್ಠ ಕ್ರಿಕೆಟಿಗ. ಅಂತಿಮವಾಗಿ ಕ್ರಿಕೆಟ್‌ ಎನ್ನುವುದು ನಾಯಕನ ಆಟ. ಕೊಹ್ಲಿ ಭಾರತದ ನಾಯಕನಾಗಿರುವುದರಿಂದ ನಾನೂ ಅವ ರನ್ನು ಗೌರವಿಸುತ್ತೇನೆ’ ಎಂದು ಗಂಗೂಲಿ ಹೇಳಿದ್ದರು. ಇದರ ನಡುವೆ ಶೀಘ್ರವೇ ಕೋಚ್‌ ಹೆಸರನ್ನು ಪ್ರಕಟಿಸಲಾಗುತ್ತೆಂದು ಗಂಗೂಲಿ ತಿಳಿಸುವುದನ್ನು ಮರೆಯಲಿಲ್ಲ, ಯಾವಾಗ ಎನ್ನುವುದನ್ನು ಖಚಿತಪಡಿಸಲಿಲ್ಲ.

ಕೂಡಲೇ ಪ್ರಕಟಿಸಿ: ಬಿಸಿಸಿಐಗೆ ತಾಕೀತು?
ವಿರಾಟ್‌ ಕೊಹ್ಲಿಯನ್ನು ಮಾತನಾಡಿಸಿ ಅನಂತರ ಕೋಚ್‌ ಹೆಸರನ್ನು ಪ್ರಕಟಿಸುತ್ತೇವೆಂದು ಸೋಮವಾರ ಗಂಗೂಲಿ ಹೇಳಿದ್ದರೂ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌, ಮಂಗಳವಾರವೇ ಕೋಚ್‌ ಹೆಸ ರನ್ನು ಪ್ರಕಟಿಸಿ ಎಂದು ಸಲಹಾ ಸಮಿತಿಗೆ ಸೂಚಿಸಿದ್ದರು ಎನ್ನಲಾಗಿದೆ. 

ಕೋಚ್‌ ಅವಧಿ 2 ವರ್ಷ
ಭಾರತ ತಂಡದ ನೂತನ ತರಬೇತುದಾರನಾಗಿ ಆಯ್ಕೆಯಾದ ರವಿಶಾಸ್ತ್ರಿ ಅವರ ಕಾರ್ಯಾವಧಿ 2 ವರ್ಷವಾಗಿರಲಿದೆ. ಮುಂದಿನ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ತಂಡವನ್ನು ಸಿದ್ಧಪಡಿಸುವ ಸಿದ್ಧತೆ ಯಲ್ಲಿ ಬಿಸಿಸಿಐ  ಇದೆ. ಆದ್ದರಿಂದ ಮತ್ತೆ ಯಾವುದೇ ಭಿನ್ನಾ ಭಿಪ್ರಾಯವನ್ನು ಕೇಳುವುದಕ್ಕೆ ಅದು ಸಿದ್ಧವಿಲ್ಲ. ಹೀಗಾಗಿ ಸ್ವಲ್ಪ ತಡವಾದರೂ ಅಡ್ಡಿಯಿಲ್ಲ, ಎಲ್ಲವರನ್ನೂ ಸರಿಪಡಿಸಿಕೊಂಡೇ ಕೋಚ್‌ ಹೆಸರನ್ನು ಪ್ರಕಟಿಸಲು ಬಿಸಿಸಿಐ ಮನಸ್ಸು ಮಾಡಿತ್ತು. ಆದರೆ ಮಂಡಳಿಯ ಯೋಜನೆ ತಲೆಕೆಳಗಾಯಿತು.

Advertisement

Udayavani is now on Telegram. Click here to join our channel and stay updated with the latest news.

Next