ಮುಂಬೈ: ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸತತ ಎರಡನೇ ವರ್ಷ ರಣಜಿ ಟ್ರೋಫಿಯನ್ನು ರದ್ದುಗೊಳಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ರಣಜಿ ಟ್ರೋಫಿಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಮರುಹೊಂದಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒತ್ತಡಕ್ಕೆ ಸಿಲುಕಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಕೋಚ್ ರವಿ ಶಾಸ್ತ್ರಿ, “ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ನೀವು ಅದನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ಕ್ಷಣ ನಮ್ಮ ಕ್ರಿಕೆಟ್ ಬೆನ್ನುಮೂಳೆ ಇಲ್ಲದಂತಾಗುತ್ತದೆ!” ಎಂದಿದ್ದಾರೆ.
ಇದಕ್ಕೂ ಮುನ್ನ ಸೌರಾಷ್ಟ್ರದ ನಾಯಕರಾಗಿರುವ ವೇಗದ ಬೌಲರ್ ಜಯದೇವ್ ಉನಾದ್ಕತ್ ಕೂಡ ಟೂರ್ನಿಯನ್ನು ಮುಂದೂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್
“ಸತತವಾಗಿ ಎರಡು ವರ್ಷಗಳು ದೊಡ್ಡ ನಷ್ಟವಾಗಿದೆ. ಒಂದು ವರ್ಷವೇ ದೊಡ್ಡ ನಷ್ಟ. ನಾವು ನಮ್ಮ ಪೂರ್ವ-ಋತುವಿನ ಕ್ಯಾಂಪ್ ಪ್ರಾರಂಭಿಸಿದಾಗ, ಇದು ಸಂಪೂರ್ಣ ಹೊಸ ಆಟದಂತೆ ಭಾಸವಾಯಿತು” ಎಂದು ಉನಾದ್ಕತ್ ಪಿಟಿಐಗೆ ತಿಳಿಸಿದ್ದಾರೆ.
ಎರಡು ಭಾಗದಲ್ಲಿ ನಡೆಸಲು ಚಿಂತನೆ: ಈ ಬಾರಿ ರಣಜಿ ಕೂಟವನ್ನು ಎರಡು ಭಾಗದಲ್ಲಿ ನಡೆಯಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಲೀಗ್ ಹಂತದ ಪಂದ್ಯಗಳನ್ನು ಫೆಬ್ರವರಿ- ಮಾರ್ಚ್ ನಲ್ಲಿ ನಡೆಸಿ ನಂತರ ನಾಕೌಟ್ ಪಂದ್ಯಗಳನ್ನು ಐಪಿಎಲ್ ಬಳಿಕ ಜೂನ್ ನಲ್ಲಿ ನಡೆಸುವ ಯೋಜನಯಲ್ಲಿದೆ ಎನ್ನಲಾಗಿದೆ.