ಬೆಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದ ಪೊಲೀಸರ ಬಲೆಗೆ ಬಿದ್ದಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರಲು ಇನ್ನು ಒಂದು ತಿಂಗಳ ಬೇಕಾಗಬಹುದು ಎಂದು ರಾಜ್ಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದ ಆಂತರಿಕ ಭದ್ರತಾ ವಿಭಾಗ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು, ಕೇಂದ್ರ ಗುಪ್ತಚರ ಇಲಾಖೆ, ವಿದೇಶಾಂಗ ಸಚಿವಾಲಯ ಹಾಗೂ ಇಂಟರ್‌ಪೋಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಜತೆಗೆ ಪಶ್ಚಿಮ ಆಫ್ರಿಕಾದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಕೂಡ ರವಿ ಪೂಜಾರಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ, ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಒಂದು ದೇಶದಿಂದ ಮತ್ತೂಂದು ದೇಶಕ್ಕೆ ಕರೆ ತರಲು ಕೆಲವೊಂದು ಒಪ್ಪಂದ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಸೆನೆಗಲ್ ನಡುವೆ ದಾಖಲೆಗಳ ವಿನಿಮಯ ಆಗಬೇಕಿದೆ. ಈ ದಾಖಲೆಗಳ ಪರಿಶೀಲನೆ ಬಳಿಕವಷ್ಟೇ ಸೆನೆಗಲ್ ಪೊಲೀಸರು ಭಾರತದ ಪೊಲೀಸರಿಗೆ ರವಿ ಪೂಜಾರಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿ ಹೇಳಿದರು.
ರವಿ ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸೆನೆಗಲ್ ಭಾಷೆಗೆ ಅನುವಾದಿಸಬೇಕಿದೆ. ಇದರೊಂದಿಗೆ ರವಿ ಪೂಜಾರಿಯ ಹಿನ್ನೆಲೆ, ಆತನ ಕುಟುಂಬ ಸದಸ್ಯರ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಕೂಡ ಅಲ್ಲಿನ ಸ್ಥಳೀಯ ಪೊಲೀಸರಿಗೆ ಸಲ್ಲಿಸಬೇಕು.
ಈಗಾಗಲೇ ರಾಜ್ಯಗುಪ್ತಚರ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ಅವರು ರವಿ ಪೂಜಾರಿಗೆ ಸಂಬಮಧಿಸಿದ ದಾಖಲೆಗಳನ್ನು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಿದ್ದಾರೆ. ಆದರೆ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ದಾಖಲೆಗಳನ್ನು ನೀಡಬೇಕಿದೆ. ಈ ದಾಖಲೆಗಳನ್ನು ಸೆನೆಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಬೇಕು. ಈ ಎಲ್ಲ ರೀತಿಯ ಕಾನೂನು ಪ್ರಕ್ರಿಯೆ ಮುಕ್ತಾಯಗೊಳ್ಳಲು ಕನಿಷ್ಠ ಒಂದು ತಿಂಗಳು ಕಾಲವಕಾಶ ಬೇಕು ಎಂದು ಅಧಿಕಾರಿ ವಿವರಿಸಿದರು.
ಅಲ್ಲಿ ಆಂಥೋನಿ ಫರ್ನಾಂಡೀಸ್: ಆರೋಪಿ ರವಿ ಪೂಜಾರಿ ಪಶ್ಚಿಮ ಆಫ್ರಿಕಾ ದೇಶದ ಬರ್ಕಿನೋ ಫೆಸೋ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾನೆ. ಇದರಲ್ಲಿ ತನ್ನ ಹೆಸರನ್ನು ಆಂಥೋನಿ ಫರ್ನಾಡೀಂಸ್ ಎಂದು ಹೇಳಿಕೊಂಡಿದ್ದು, ಕರ್ನಾಟಕದ ಮೈಸೂರು ಮೂಲದವನು ಎಂದು ಪಾಸ್‌ಪೋರ್ಟ್‌ನಲ್ಲಿ ನಮೂದಾಗಿದೆ.