Advertisement

ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿ

09:56 AM Feb 25, 2020 | Hari Prasad |

ಬೆಂಗಳೂರು: ಸೆನೆಗಲ್ ನಲ್ಲಿ ಬಂಧಿಸಲ್ಪಟ್ಟು ಭಾರತಕ್ಕೆ ಗಡಿಪಾರಾಗಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಗೆ ನಗರದ ಸ್ಥಳೀಯ ನ್ಯಾಯಾಲಯವು ಮಾರ್ಚ್ 7ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Advertisement

52 ವರ್ಷ ಪ್ರಾಯದ ರವಿ ಪೂಜಾರಿ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಕೊಲೆ, ಅಪಹರಣ ಮತ್ತು ಹಪ್ತಾ ಅಪರಾಧಗಳಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ಹಿರಿಯ ಐ.ಪಿ.ಎಸ್. ಅಧಿಕಾರಿಗಳ ಸಹಿತ ಕರ್ನಾಟಕ ಪೊಲೀಸ್ ಅಧಿಕಾರಿಗಳ ತಂಡ ರವಿ ಪೂಜಾರಿಯನ್ನು ಏರ್ ಫ್ರಾನ್ಸ್ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದರು.

ಬಳಿಕ ರವಿ ಪೂಜಾರಿಯನ್ನು ನಗರದಲ್ಲಿರುವ ಫರ್ಸ್ಟ್ ಅಡಿಷನಲ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಲ್ಲಿ ನ್ಯಾಯಾಧೀಶರು ರವಿ ಪೂಜಾರಿಗೆ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಸೆನೆಗಲ್ ದೇಶದೊಂದಿಗೆ ಭಾರತ ಗಡೀಪಾರು ಒಪ್ಪಂದವನ್ನು ಹೊಂದಿಲ್ಲವಾದರೂ ಈ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಭಾಗೀದಾರಿಕೆಯ ಮೂಲಕ ರವಿ ಪೂಜಾರಿಯನ್ನು ತಮ್ಮ ವಶಕ್ಕೆ ಪಡೆಯಲು ಸಾಧ್ಯವಾಯಿತು ಮತ್ತು ಇದಕ್ಕಾಗಿ ಸೆನೆಗಲ್ ದೇಶದ ಅಧಿಕಾರಿಗಳನ್ನು ವಿಶೇಷವಾಗಿ ಅಭಿನಂದಿಸುವುದಾಗಿ ಪೂಜಾರಿ ಬಂಧನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

ರವಿ ಪೂಜಾರಿ ಬುರ್ಕಿನಾ ಫಾಸೋ ಗಣರಾಜ್ಯದ ಪೌರತ್ವವನ್ನು ಪಡೆದುಕೊಂಡ ಬಳಿಕ ಅಲ್ಲಿನ ಪಾಸ್ ಪೋರ್ಟ್ ಮೂಲಕ ಸಂಚರಿಸುತ್ತಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

ದೇಶದ ವಿವಿಧ ಕಡೆಗಳಲ್ಲಿ ರವಿ ಪೂಜಾರಿ ವಿರುದ್ಧ ಸುಮಾರು 200 ಪ್ರಕರಣಗಳು ದಾಖಲುಗೊಂಡಿದ್ದು ಇವುಗಳಲ್ಲಿ 97 ಪ್ರಕರಣಗಳು ಕರ್ನಾಟಕದಲ್ಲೇ ದಾಖಲಾಗಿವೆ. 2019ರಲ್ಲೇ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಲಾಗಿತ್ತು. ಆದರೆ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡು ಈತ ದಕ್ಷಿಣ ಆಫ್ರಿಕಾಗೆ ಪರಾರಿಯಾಗಿದ್ದ.

ಇಲ್ಲಿ ರವಿ ಪೂಜಾರಿ ಮಾದಕ ದ್ರವ್ಯ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮತ್ತು ಆಂಥೋಣಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಬುರ್ಕಿನಾ ಫಾಸೋ ಪಾಸ್ ಪೋರ್ಟ್ ಪಡೆದುಕೊಂಡಿದ್ದು ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಎಂಬ ಮಾಹಿತಿಯನ್ನೂ ಸಹ ಪಾಂಡೆ ಇದೇ ಸಂದರ್ಭದಲ್ಲಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next