ಮೈಸೂರು: ತಲೆಯ ಮೇಲೊಂದು ಸ್ವಂತ ಸೂರು ಹೊಂದಬೇಕೆಂದು ತುಂಬಾ ಕನಸು ಕಟ್ಟಿಕೊಂಡು ನಿವೇಶನ ಖರೀದಿಸಿ, ಸುಂದರವಾದ ಮನೆಯನ್ನೂ ಕಟ್ಟುತ್ತಾನೆ. ಆದರೆ, ಆ ಮನೆಗೆ ಕಾಲಿಟ್ಟಾಗಲಿಂದ ಆ ಕುಂಟಬದ ನೆಮ್ಮದಿಯೇ ಹಾಳಾಗುತ್ತದೆ. ಭದ್ರಿಕಾ ಎಂಬ ಪುಟ್ಟ ಹುಡುಗಿಯ ಪಾತ್ರ ದಿಂದ ಚಿತ್ರ ಶುರು ಆಗುತ್ತದೆ.
ಮನೆಗೆ ಬಂದ ಸ್ವಲ್ಪ ದಿನಗಳಲ್ಲೇ ಅವರ ಮಗು ತೀರಿ ಕೊಳ್ಳುತ್ತದೆ. ಹೀಗಾಗಿ ನೆಮ್ಮದಿ ಕಳೆದುಕೊಂಡ ಕುಟುಂಬದವರು ಮನೆಯ ವಾಸ್ತು ಸರಿಯಿಲ್ಲ ವೆಂದು ಮೂಢನಂಬಿಕೆಗೆ ಜೋತು ಬೀಳುತ್ತಾರೆ. ಒಂದೇ ವರ್ಷದಲ್ಲಿ ನಾಲ್ಕೈದು ಜನರ ಕೈ ಬದ ಲಾಗುತ್ತದೆ. ಈ ಮಧ್ಯೆ ಮೂರು ಸಾವು ಸಂಭವಿಸುತ್ತದೆ. ಈ ಸಾವುಗಳು ಸಹಜ ಸಾವೋ ಇಲ್ಲ ಕೊಲೆಯೋ ಎಂಬುದೇ ಚಿತ್ರದ ಎಳೆ.
ಕುಟುಂಬದೊಳಗೆ ನಡೆಯುವ ಘಟನಾ ವಳಿಗಳನ್ನು ಆಧರಿಸಿ ಕತೆ ಹೆಣೆದಿದ್ದು, ಹಾಡು, ಐಟಂ ಸಾಂಗ್, ಪೈಟ್, ದ್ವಂದ್ವಾರ್ಥದ ಆಶ್ಲೀಲ ಸಂಭಾಷಣೆಗಳಿಲ್ಲದೆ ಹಾಲಿವುಡ್ ಶೈಲಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದ್ದು, ಇದೊಂದು ಕಮರ್ಷಿಯಲ್ ಚಿತ್ರವಾದರೂ ಲಂಡನ್ ಫಿಲ್ಮ್ ಫೆಸ್ಟಿವಲ್, ಅಮೆರಿಕನ್ ಫಿಲ್ಮ್ ಫೆಸ್ಟಿವಲ್‌ಗೂ ಈ ಚಿತ್ರವನ್ನು ಕಳುಹಿಸುವ ಉದ್ದೇಶವಿದೆ ಎಂದು ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿರುವ ಜೂಮ್ ರವಿ ತಮ್ಮ 3ನೇ ಚಿತ್ರ “ಆಘಾತ’ದ ಬಗ್ಗೆ ಒಂದೇ ಉಸುರಿಗೆ ಎಲ್ಲವನ್ನೂ ಬಿಚ್ಚಿಟ್ಟರು.
ಶ್ರೀಸಾಯಿಸಿದ್ಧಿ ಪ್ರೊಡಕ್ಷನ್ಸ್ ಲಾಂಛನದಡಿ ಮೈಸೂರಿನ ಪೂರ್ವ ಪ್ರಾಪರ್ಟಿಸ್‌ನ ರಿಯಲ್ ಎಸ್ಟೇಟ್ ಉದ್ಯಮಿ ಜಿ.ಪಿ.ಪ್ರಕಾಶ್ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು, ರಂಗಿ ತರಂಗ ಅರವಿಂದ್, ಯತಿರಾಜ್, ಮಂಡ್ಯ ರಮೇಶ್, ಕುರಿಬಾಂಡ್ ರಂಗ, ಪ್ರೇಕ್ಷ, ತರುಣ್, ಅಶ್ವಿನಿ, ಪ್ರೀತಿ ಮುಂತಾದವರ ತಾರಾ ಬಳಗದಲ್ಲಿ ನಿರ್ಮಿಸುತ್ತಿರುವ ಆಘಾತ ಚಿತ್ರದ ಚಿತ್ರೀಕರಣ ಮೈಸೂರು-ಬೆಂಗಳೂರು ಹೆದ್ದಾರಿಗೆ ಹೊಂದಿ ಕೊಂಡಂತಿರುವ ಶ್ರೀರಂಗಪಟ್ಟಣ ತಾಲೂಕಿನ ನಗುವಿನ ಹಳ್ಳಿಯ ಮನೆಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದು ಚಿತ್ರದ ಬಗ್ಗೆ ವಿವರ ನೀಡಿತು.
ಒಂದು ಮನೆ, ಮೈಸೂರು ಸುತ್ತಮುತ್ತಲಿನ ಕೆಲ ಸ್ಥಳಗಳು ಹಾಗೂ ರಿಂಗ್ ರೋಡ್ ಸುತ್ತ ಮುತ್ತಲೇ ಚಿತ್ರದ ಕತೆ ಸಾಗುತ್ತದೆ. ಈಗಾಗಲೇ 20 ದಿನದ ಚಿತ್ರೀಕರಣ ಮುಗಿದಿದ್ದು, ಸ್ವಲ್ಪ ದಿನಗಳಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡ ಲಾಗುವುದು. ಲವ್, ಹಾರರ್, ದ್ವಂದ್ವಾರ್ಥದ ಚಿತ್ರಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ, ತಂತ್ರಜಾnನವನ್ನೂ ಬಳಸಿಕೊಂಡು ಉತ್ತಮ ಚಿತ್ರ ನಿರ್ಮಿಸಲಾಗುತ್ತಿದೆ. ಸೋನಿ ಸಣ್ಣ ಕ್ಯಾಮರಾ ಬಳಸುತ್ತಿದ್ದು, ಚಿತ್ರದಲ್ಲಿ 22 ಶಾಟ್ ಹೊಸದಾಗಿ ಪರಿಚಯಿಸುತ್ತಿದ್ದೇನೆ. ಇನ್ನು 25ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ ಎಂದರು ಜೂಮ್ ರವಿ.
ಚಿತ್ರದ ನಿರ್ಮಾಪಕ ಜಿ.ಪಿ.ಪ್ರಕಾಶ್ ಮಾತನಾಡಿ, ಸಿನಿಮಾ ಮಾಡುವ ಉದ್ದೇಶವಿತ್ತು. ಆದರೆ, ಇಷ್ಟು ಬೇಗ ಮಾಡುತ್ತೇನೆ ಎಂದು ಕೊಂಡಿರಲಿಲ್ಲ. ಸ್ನೇಹಿತರೆಲ್ಲ ಕಥೆ ಚೆನ್ನಾಗಿದೆ ಎಂದಿದ್ದರಿಂದ ಮಾಡುತ್ತಿದ್ದೇನೆ. ಸಿನಿಮಾಗೆ ಒಂದು ಕೋಟಿ ರೂ. ವೆಚ್ಚವಾಗುತ್ತಿದೆ. ಜತೆಗೆ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಟೈಟಲ್ ಅನ್ನು ಈಗಾಗಲೇ ಫಿಲ್ಮ್ ಛೇಂಬರ್‌ನಲ್ಲಿ ನೋಂದಣಿ ಮಾಡಿಸಿದ್ದೇನೆ. ಹಿರಿಯ ನಟಿ ಜಯಂತಿ, ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದು, ಆರತಿ ಅವರನ್ನೂ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದರು. ಅರವಿಂದ್ ಮತ್ತು ಯತಿರಾಜ್, ಮಂಡ್ಯ ರಮೇಶ್, ನಟಿ ಶಿಲ್ಪ ಮಾತನಾಡಿದರು. ಛಾಯಾ ಗ್ರಹಣವನ್ನು ರಾಜ್‌ಕಡೂರು ಮಾಡಿದ್ದು, ಸಂಗೀತ ಪುರಂದರ ನೀಡಿದ್ದಾರೆ.
* ಗಿರೀಶ್ ಹುಣಸೂರು