Advertisement

ರವಿ ಮಾಮ ಮತ್ತು ಮಕ್ಕಳ ಸೈನ್ಯ

11:47 AM Dec 01, 2017 | |

ರವಿಚಂದ್ರನ್‌ ಅವರು ಈ ಹಿಂದೆ ಡ್ಯಾನ್ಸ್‌ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದರೆ ಹೊರತು, ಸಂಗೀತ ಕಾರ್ಯಕ್ರಮದ ಕಡೆ
ಹೋಗಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ “ಉದಯ ಸಿಂಗರ್ ಜ್ಯೂನಿಯರ್‌’ ಎಂಬ ಮಕ್ಕಳ ಸ್ಪರ್ಧೆಗೆ ಜಡ್ಜ್ ಆಗಿದ್ದಾರೆ. ಅವರಿಗೆ ಬಲಗೈ ಮತ್ತು ಎಡಗೈ ಆಗಿ ಜನಪ್ರಿಯ ಗಾಯಕರಾದ ಮನೋ ಮತ್ತು ಅರ್ಚನಾ ಉಡುಪಾ ಅವರಿದ್ದಾರೆ.

Advertisement

ಈಗಾಗಲೇ ಕಾರ್ಯಕ್ರಮದ ಮೊದಲೆರೆಡು ಕಂತುಗಳು ಕಳೆದ ವಾರ ಪ್ರಸಾರವಾಗಿದೆ. ಈ ಮಧ್ಯೆ ಕಾರ್ಯಕ್ರಮ ನೋಡುವುದಕ್ಕೆ
ಅಭಿಮಾನ್‌ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್‌ಗೆ ಕರೆಯಲಾಗಿತ್ತು. ಮುಂದಿನ ಕಂತುಗಳ ಕೆಲ ಭಾಗದ ಚಿತ್ರೀಕರಣ ಮುಗಿಸಿ, ಮಕ್ಕಳನ್ನೂ ಕೂರಿಸಿಕೊಂಡು ಮಾತಿಗೆ ಕುಳಿತ ರವಿಚಂದ್ರನ್‌, ತೀರ್ಪು ಕೊಡುವುದು ಬಹಳ ಕಷ್ಟ ಎಂದರು. “ನನಗೆ ಸ್ವರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಹಾಗಾಗಿ ಎಡ, ಬಲದಲ್ಲಿ ಸ್ವಲ್ಪ ಸ್ಟ್ರಾಂಗ್‌  ಆಗಿರುವವರು ಕೂತಿದ್ದಾರೆ. ನಿಜ, ಹೇಳಬೇಕೆಂದರೆ, ನಾನು ಅಲಂಕಾರ ಅಷ್ಟೇ. ಅವರು ನಿಜವಾದ ತೀರ್ಪು ಕೊಡುತ್ತಾರೆ. ನಾನು ಆಗಾಗ ಉಲ್ಲಾಸ, ಉತ್ಸಾಹ ಕೊಡುವುದರ ಜೊತೆಗೆ ಉದ್ದೇಶ ಹೇಳುತ್ತಾ, ಉಪದೇಶ ಕೊಡುತ್ತಿರುತ್ತೇನೆ’ ಎಂದರು ರವಿಚಂದ್ರನ್‌.

ಗಾಯಕ ಮನೋ ಈ ಹಿಂದೆ ತೆಲುಗಿನಲ್ಲಿ ಹಲವು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಈಗ ಮೊದಲ ಬಾರಿಗೆ
ಕನ್ನಡ ಕಿರುತೆರೆಗೆ ಬಂದಿದ್ದಾರೆ. “ಇಲ್ಲಿ ಮಕ್ಕಳು ಹಾಡುತ್ತಿರುವುದನ್ನು ನೋಡಿದರೆ, ಒಂದೊಳ್ಳೆಯ ತಂಡ ಸಿಗುತ್ತದೆ ಎಂಬ ನಂಬಿಕೆ  ದೆ. ಬೇರೆ ಬೇರೆ ಜಾನರ್‌ಗಳಲ್ಲಿ, ಒಂದಿಷ್ಟು ಒಳ್ಳೆಯ ಗಾಯಕರು ಹೊರಹೊಮ್ಮುತ್ತಾರೆ’ ಎಂದರು. ಅರ್ಚನಾ ಉಡುಪಾ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಹಲವು ವರ್ಷಗಳ ಹಿಂದೆ ಸ್ಪರ್ಧಿಯಾಗಿದ್ದ ಅವರು, ನಂತರ ಗಾಯಕಿಯಾಗಿ, ನಿರೂಪಕಿಯಾಗಿ, ಮೆಂಟರ್‌ ಆಗಿ, ಇದೀಗ ತೀರ್ಪುಗಾರರ ಸ್ಥಾನಕ್ಕೆ ಬಂದಿದ್ದಾರೆ. “ಮಕ್ಕಳಿಗೆ ಇದೊಂದು ಅದ್ಭುತ ವೇದಿಕೆ. ಇಂಥದ್ದೊಂದು 
ವೇದಿಕೆಯನ್ನು ಬಳಸಿಕೊಂಡು, ತುಂಬಾ ಕಲಿಯುವುದಕ್ಕೆ ಸಾಧ್ಯತೆ ಇದೆ’ ಎಂದರು. ಗಾಯನ ರಿಯಾಲಿಟಿ ಶೋಗಳೆಂದರೆ
ಮೊದಲಿಗೆ ನೆನಪಿಗೆ ಬರುವುದು ಜೀ ಟಿವಿಯಲ್ಲಿ ಪ್ರಸಾರವಾದ “ಸಾರೆಗಾಮ’. ಆ ಕಾರ್ಯಕ್ರಮವನ್ನು ರೂಪಿಸಿದ್ದ ಗಜೇಂದ್ರ
ಸಿಂಗ್‌, ಈಗ ಈ ಕಾರ್ಯಕ್ರಮವನ್ನು ಸಹ ರೂಪಿಸುತ್ತಿದ್ದಾರೆ. “ಆಗ ನಾನು ಹಿಂದಿಯಲ್ಲಿ ಕಾರ್ಯಕ್ರಮ ಶುರು ಮಾಡಿದೆ. ಆ ನಂತರ ಎಲ್ಲಾ  ಭಾಷೆಗಳಲ್ಲೂ ಆ ಕಾರ್ಯಕ್ರಮ ಬಂತು. ಈಗ ಈ ಕಾರ್ಯಕ್ರಮದಲ್ಲೂ ಏನೋ ಮಾಡಬಹುದು ಅಂತ ಬಂದಿದ್ದೇನೆ. ಸವಾಲಿನ ಕೆಲಸ’ ಎಂದು ಹೇಳಿ ಸುಮ್ಮನಾದರು ಗಜೇಂದ್ರ ಸಿಂಗ್‌.

ಈ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಸಿನಿಮಾ ಹಾಡುಗಳನ್ನು ಹಾಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಶೈಲಿಯ ಗೀತೆಗಳನ್ನು ಹಾಡಿಸಲಾಗುತ್ತದಂತೆ. ಸಿನಿಮಾ ಗೀತೆಗಳಲ್ಲೇ ಜಾನಪದ, ಶಾಸ್ತ್ರೀಯ ಹೀಗೆ ವಿವಿಧ ಪ್ರಾಕಾರಗಳನ್ನು ಹಾಡಿಸಲಾಗುತ್ತಿದೆ. 30 ಕಂತುಗಳೊಂದಿಗೆ ಪ್ರಸಾರವಾಗುವ ಈ ಕಾರ್ಯಕ್ರಮ, ಗ್ರಾಂಡ್‌ಫಿನಾಲೆಯೊಂದಿಗೆ ಅಂತ್ಯವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next