ಟೋಕಿಯೊ : 57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಉಗುವೆವ್ ವಿರುದ್ಧ ರವಿ ಕುಮಾರ್ ಸೋಲನುಭವಿಸಿದರು.
ಸೆಮಿ ಫೈನಲ್ ಪಂದ್ಯದಲ್ಲಿ ಕಜಕಿಸ್ಥಾನದ ನುರ್ ಇಸ್ಲಾಂ ಸನಾಯೆವ್ ವಿರುದ್ಧ ರೋಚಕ ಹಣಾಹಣಿಯಲ್ಲಿ ಗೆದ್ದಿದ್ದ ರವಿ ಕುಮಾರ್ ಫೈನಲ್ ಗೇರಿದ್ದರು. ಈ ಮೂಲಕ ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್ ನ ಮೊದಲ ಚಿನ್ನದ ಪದಕ ಆಸೆ ಹುಟ್ಟು ಹಾಕಿದ್ದರು. ಆದರೆ ಇಂದಿನ ಅಂತಿಮ ಪಂದ್ಯದಲ್ಲಿ ಉಗುವೆವ್ ವಿರುದ್ಧ 4-7 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಇದನ್ನೂ ಓದಿ:ಮಾನಸಿಕ ಆರೋಗ್ಯ ಸುಧಾರಣೆಗಾಗಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದ ಕಿವೀಸ್ ಆಲ್ ರೌಂಡರ್
ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಐದನೇ ಕುಸ್ತಿಪಟು ಎಂಬ ಹಿರಿಮೆಗೆ ರವಿ ಕುಮಾರ್ ದಹಿಯಾ ಪಾತ್ರರಾದರು. 1952ರಲ್ಲಿ ಕೆ.ಡಿ.ಜಾಧವ್ ಕಂಚಿನ ಪದಕ, 2008 ಮತ್ತು 2012ರಲ್ಲಿ ಸುಶೀಲ್ ಕುಮಾರ್ ಕ್ರಮವಾಗಿ ಕಂಚು ಮತ್ತು ಬೆಳ್ಳಿ, 2012ರಲ್ಲಿ ಯೋಗೇಶ್ವರ್ ದತ್ ಕಂಚು ಮತ್ತು 2016ರಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದುಕೊಂಡಿದ್ದರು.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಇದುವರೆಗೆ ಒಟ್ಟು ಐದು ಪದಕ ಗೆದ್ದುಕೊಂಡಿದೆ. ಇಂದು ಬೆಳಗ್ಗೆ ನಡೆದ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು.