ಕಾಪು: ಅನಾರೋಗ್ಯದಿಂದ ಬಳಲುತ್ತಿರುವ ಅಶಕ್ತ ಕುಟುಂಬದ ಮಕ್ಕಳ ನೋವಿಗೆ ಸ್ಪಂದಿಸುವ ಉದ್ದೇಶ ದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ರವಿ ಕೆ.ಮತ್ತು ಫ್ರೆಂಡ್ಸ್ ಕಟಪಾಡಿ ತಂಡವು ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಸೆ. 19 ರಂದು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಉಪನ್ಯಾಸಕ ದಯಾನಂದ್ ಹೇಳಿದರು.ಕಾಪು ಪ್ರಸ್ ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರವಿ ಅವರ ಈ ಬಾರಿಯ ವೇಷ 5.12 ಲಕ್ಷ ರೂ. ದೇಣಿಗೆ ಸಂಗ್ರಹಿಸಿದೆ. ಇಂಗ್ಲಿಷ್ ಸಿನೆಮಾದ ಗ್ರಾಂಫರ್ ವೇಷವನ್ನು ಧರಿಸಿದ್ದ ರವಿ ಕಟಪಾಡಿ ಮತ್ತು ಅವರ 80 ಮಂದಿ ಸ್ನೇಹಿತರನ್ನೊಳಗೊಂಡ ತಂಡ ಎರಡು ದಿನಗಳ ಕಾಲ ಕಟಪಾಡಿ, ಉಡುಪಿ, ಮಲ್ಪೆ ಸೇರಿದಂತೆ ವಿವಿಧೆಡೆ ತೆರಳಿದೆ.
ತಂಡದ ಮುಖ್ಯಸ್ಥ ರವಿ ಕಟಪಾಡಿ ಮಾತನಾಡಿ, ಸಮಾಜದಲ್ಲಿರುವ ಅಶಕ್ತರ ನೋವಿಗೆ ಧ್ವನಿಯಾಗುವ ಸಂಕಲ್ಪ ದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ವೇಷ ಧರಿಸಿ ಹಣ ಸಂಗ್ರಹಿಸಿ ಅಶಕ್ತರಿಗೆ ನೀಡುತ್ತಿದ್ದೇವೆ. ಇದು ಸಂತೃಪ್ತಿ ತಂದಿದ್ದು, ಮುಂದುವರಿಸುವ ಇಚ್ಛೆ ಇದೆ ಎಂದರು.ರವಿ ಮತ್ತು ಫ್ರೆಂಡ್ಸ್ ತಂಡದ ಪ್ರಮುಖರಾದ ಸಂತೋಷ್, ರವಿ ಕೋಟ್ಯಾನ್, ಅರುಣ್, ಚರಣ್,ಸುಧೀಶ್ ಮೊದಲಾದವರು ಉಪಸ್ಥಿತರಿದ್ದರು.
ಐವರಿಗೆ ವಿತರಣೆ
ರವಿ ಫ್ರೆಂಡ್ಸ್ ಸಂಗ್ರಹಿಸಿರುವ 5.12 ಲಕ್ಷ ರೂ. ಹಣವನ್ನು ಮೂಡಬಿದಿರೆ ದರೆಗುಡ್ಡೆಯ ಲಾವಣ್ಯ, ಶಿವಮೊಗ್ಗದ ಮೆಹಕ್‌ಜೀ, ದೆಂದೂರುಕಟ್ಟೆಯ ಒಂದೂ ವರೆ ತಿಂಗಳ ಮಗು, ಬನ್ನಂಜೆ ಮತ್ತು ಕುಂದಾಪುರದ ಮಕ್ಕಳಿಗೆ ಹಂಚಲು ತೀರ್ಮಾನಿಸಲಾಗಿದ್ದು, ಅವರ ಆವಶ್ಯಕತೆ ಮತ್ತು ಖರ್ಚು ವೆಚ್ಚಗಳನ್ನು ಅಂದಾ ಜಿಸಿ ಹಂಚಲಾಗುವುದು ಎಂದು ರವಿ ಕಟಪಾಡಿ ತಿಳಿಸಿದ್ದಾರೆ.