ಕಟಪಾಡಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಟಪಾಡಿಯ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡವು ಈ ಬಾರಿ ಡಾರ್ಕ್ ವನ್ ಎಲೈಟ್ ವೇಷಧಾರಿಯಾಗಿ ಅಷ್ಟಮಿಯಂದು ಸಂಗ್ರಹಿಸಿದ 7,22,350 ರೂ.ವನ್ನು 8 ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆ.16ರಂದು ನೀಡಿದರು.
ಈ ಸಂದರ್ಭ ಕೇಮಾರು ಶ್ರೀ ಈಶ ವಿಠ್ಠಲ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಬಡವರ ಮಕ್ಕಳ ಆರೋಗ್ಯ ಸೇವೆಯಲ್ಲಿ ದೇವರ ಕಾಣುವ ರವಿ ಕಟಪಾಡಿಯ ಜೀವನ ಮೌಲ್ಯ, ಮಾನವೀಯ ಸೇವೆಯು ಹೃದಯ ಶ್ರೀಮಂತಿಕೆಯುಕ್ತವಾಗಿದೆ ಎಂದರು.
ಮಣಿಪಾಲ ಡಿಜಿಟಲ್ ನೆಟ್ ವರ್ಕ್ ಲಿ.ನ ಮುಖ್ಯಸ್ಥ ಹರೀಶ್ ಭಟ್ ಮಾತನಾಡಿ, ರವಿ ಕಟಪಾಡಿ ಅವರ ಎಳೆಯ ಮಕ್ಕಳ ಆರೋಗ್ಯ ಸೇವೆಯ ಮೂಲಕ ಸಮಾಜದ ಸಂಕಷ್ಟಕ್ಕೆ ನೀಡುವ ಮಾನವೀಯತೆ ಸೇವೆಯು ಶ್ರೇಷ್ಠ ಸತ್ಕಾರ್ಯವಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಬಲು ದೊಡ್ಡ ಕೊಡುಗೆ ಎಂದರು.
ತಾಯಿಯ ಗರ್ಭದ ಋಣ ತೀರಿಸುತ್ತಿರುವ ಹೃದಯ ಶ್ರೀಮಂತಿಕೆಯ ಸೇವೆಗೆ ರವಿ ಕಟಪಾಡಿಗೆ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಶುಭ ಹಾರೈಸಿದರು
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ಗುರಿಕಾರ ಹರಿಶ್ಚಂದ್ರ ಪಿಲಾರು, ರವಿ ಫ್ರೆಂಡ್ಸ್ ತಂಡದ ಮಾರ್ಗದರ್ಶಕ ಕೆ. ಮಹೇಶ್ ಶೆಣೈ, ಡಾ|ಎ.ರವೀಂದ್ರನಾಥ ಶೆಟ್ಟಿ ರವಿ ಕಟಪಾಡಿ ನಡೆಸುತ್ತಿರುವ ಅಶಕ್ತರ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ರವಿ ಕಟಪಾಡಿ ಮತ್ತು ಅವರ ತಾಯಿಯನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.