ಕನ್ನಡದಲ್ಲಿ “ಉರ್ವಿ’ ಚಿತ್ರದ ಮೂಲಕ ನಿರ್ದೇಶಕರಾದ ಪ್ರದೀಪ್ ವರ್ಮ ಈಗ ಇನ್ನೊಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಈ ಬಾರಿ ಅವರು ರವಿಚಂದ್ರನ್ ಹಾಗು ಅವರ ಪುತ್ರ ಮನೋರಂಜನ್ ಅವರನ್ನು ನಿರ್ದೇಶಿಸುತ್ತಿದ್ದಾರೆ. ಹೌದು, ರವಿಚಂದ್ರನ್ ಮತ್ತು ಮನೋರಂಜನ್ ಇಬ್ಬರನ್ನೂ ಒಟ್ಟಿಗೆ ತೆರೆಯ ಮೇಲೆ ತೋರಿಸುವ ಉತ್ಸಾಹದಲ್ಲಿದ್ದಾರೆ ಪ್ರದೀಪ್ ವರ್ಮ.
ಹಾಗಾದರೆ, ರವಿಚಂದ್ರನ್ ಹಾಗು ಮನೋರಂಜನ್ ಅವರ ಪಾತ್ರವೇನು? ಈ ಕುರಿತು ಪ್ರದೀಪ್‌ವರ್ಮ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದು ಇಷ್ಟು. “ನಾನು ಈ ಕಥೆಯನ್ನು ಕಳೆದ ಎರಡು ತಿಂಗಳ ಹಿಂದೆಯೇ ರವಿಚಂದ್ರನ್ ಅವರಿಗೆ ಹೇಳಿದ್ದೆ. ಆಗಲೇ ರವಿಚಂದ್ರನ್ ಸರ್, ಕಥೆ ಚೆನ್ನಾಗಿದೆ. ಪಾತ್ರವೂ ವಿಭಿನ್ನವಾಗಿದೆ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ, ಇನ್ನೊಂದು ಪಾತ್ರಕ್ಕೆ ಮನೋರಂಜನ್ ಅವರು ತಲೆಯಲ್ಲಿರಲಿಲ್ಲ.
ಬೇರೆ ಯಾರನ್ನಾದರೂ ಹುಡುಕಬೇಕು ಎಂಬ ಆಲೋಚನೆಯಲ್ಲಿದ್ದೆ. ಆದರೆ, ಒಂದು ದಿನ ಮನೋರಂಜನ್ ಅವರನ್ನು ಭೇಟಿಯಾಗಿದ್ದಾಗ, ಅವರಿಗೆ ಈ ಕಥೆ ವಿವರಿಸಿದೆ. ಆಗ ಅವರು ಚೆನ್ನಾಗಿದೆ ನಾನು ಮಾಡ್ತೀನಿ ಅಂದರು. ಅಲ್ಲಿಗೆ ರವಿಚಂದ್ರನ್ ಮತ್ತು ಮನೋರಂಜನ್ ಇಬ್ಬರನ್ನೂ ಒಟ್ಟಿಗೆ ಸೇರಿಸಿ ಚಿತ್ರ ಮಾಡುವ ನಿರ್ಧಾರ ಮಾಡಿದೆ’ ಎಂದು ವಿವರ ಕೊಡುತ್ತಾರೆ ಪ್ರದೀಪ್ ವರ್ಮ.ಚಿತ್ರದಲ್ಲಿ ರವಿಚಂದ್ರನ್ ಮತ್ತು ಮನೋರಂಜನ್ ಅಪ್ಪ, ಮಗನಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.
ಇದು ರವಿಚಂದ್ರನ್ ಅಭಿಮಾನಿಗಳಿಗಂತೂ, ಅಪ್ಪ, ಮಗನನ್ನು ಒಟ್ಟಿಗೆ ಅದರಲ್ಲೂ ತೆರೆಯ ಮೇಲೂ ಅಪ್ಪ, ಮಗನಾಗಿಯೇ ನೋಡುವುದೇ ಹಬ್ಬ. ಇದು ಸ್ವಮೇಕ್ ಚಿತ್ರವಾಗಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯನ್ನು ನಿರ್ದೇಶಕ ಪ್ರದೀಪ್ ವರ್ಮ ಅವರೇ ವಹಿಸಿಕೊಂಡಿದ್ದಾರೆ. ಸದ್ಯಕ್ಕೆ ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ. ಈಗಾಗಲೇ ರವಿಚಂದ್ರನ್ ಮತ್ತು ಮನೋರಂಜನ್ ಇಬ್ಬರ ಕಡೆಯಿಂದಲೂ ಸಹಕಾರ ಸಿಗುತ್ತಿರುವುದರಿಂದ ಪ್ರದೀಪ್ ವರ್ಮ ಮತ್ತಷ್ಟು ಖುಷಿಗೊಂಡಿದ್ದಾರೆ.
ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಲಿದ್ದು, ಈ ಹಿಂದೆ “ಉರ್ವಿ’ ತಂಡದಲ್ಲಿದ್ದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆ ಪೈಕಿ ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕರು ಬೇರೆಯವರು ಕೆಲಸ ಮಾಡಲಿದ್ದಾರೆ ಎನ್ನುವ ಪ್ರದೀಪ್ ವರ್ಮ, ನನ್ನ ಬಾಲ್ಯದ ಗೆಳೆಯ ಗುರುಪ್ರಸಾದ್ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ನನ್ನ ಹಿಂದಿಯ ಶಾರ್ಟ್‌ಫಿಲ್ಮ್ಗೂ ಅವನೇ ಕ್ಯಾಮೆರಾ ಹಿಡಿದಿದ್ದಾನೆ. ಸಂಕಲನ ಕೂಡ ಅವರೇ ಮಾಡಲಿದ್ದಾರೆ.
ಉಳಿದಂತೆ ಇದೊಂದು ಸಂಗೀತ ಪ್ರಧಾನ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತಹ ಸಂಗೀತ ನಿರ್ದೇಶಕರೇ ಕೆಲಸ ಮಾಡಲಿದ್ದಾರೆ ಎನ್ನುತ್ತಾರೆ ಅವರು. ಪ್ರದೀಪ್ ವರ್ಮ ಹೇಳುವಂತೆ, ಇದೊಂದು ಕನ್ನಡದಲ್ಲಿ ಹೊಸ ಜಾನರ್‌ನ ಸಿನಿಮಾ ಆಗಲಿದೆ. ಇಲ್ಲಿ ಕಥೆಯೇ ನಾಯಕ. ರವಿಚಂದ್ರನ್ ಮತ್ತು ಮನೋರಂಜನ್ ಇಬ್ಬರಿಗೂ ಇಲ್ಲಿ ಸಮನಾದ ಪಾತ್ರಗಳಿವೆ. ಯಾರಿಗೂ ಕಡಿಮೆ ಇಲ್ಲ, ಯಾರಿಗೂ ಜಾಸ್ತಿ ಇಲ್ಲ.
ಇಲ್ಲಿ ಮುಖ್ಯವಾಗಿ ನಾಲ್ಕು ಪಾತ್ರಗಳು ಬರಲಿವೆ. ಇದು ಪಕ್ಕಾ ಕೌಟುಂಬಿಕ ಸಿನಿಮಾ ಅದರಲ್ಲೂ ಅಪ್ಪ, ಮಗನ ಬಾಂಧವ್ಯ, ಎಮೋಷನಲ್ ಇತ್ಯಾದಿ ಇಲ್ಲಿ ಹೈಲೈಟ್ ಆಗಿದೆ. ಪ್ರತಿಯೊಬ್ಬ ತಂದೆ ನನ್ನ ಮಗ ಹೀಗೆ ಇರಬೇಕು, ನಾನು ಪಟ್ಟ ಕಷ್ಟ ಅವನಿಗೆ ಬರಬಾರದು ಅಂತಾನೇ ಬಯಸುತ್ತಾನೆ. ಇಲ್ಲಿ ಸಂಗೀತವೇ ಮೂಲಾಧಾರ. ಅದೇ ಆಧಾರದ ಮೇಲೆ ಕಥೆ ಸಾಗಲಿದೆ.
ಕನ್ನಡಕ್ಕೊಂದು ಅಪ್ಪಟ ಸಂಗೀತಮಯ ಸಿನಿಮಾ ಆಗಲಿದೆ. ಇಲ್ಲಿ ಅಪ್ಪ ಮತ್ತು ಮಗ ಇಬ್ಬರಿಗೂ ನಾಯಕಿಯರು ಇರುತ್ತಾರಾ? ಈ ಪ್ರಶ್ನೆಗೆ, ಇರುತ್ತಾರೆ ಆದರೆ, ಒಬ್ಬರು ವಿಶೇಷ ಅತಿಥಿಯಾಗಿ ಬರಲಿದ್ದಾರೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ. ಅಂದಹಾಗೆ, ಇನ್ನೂ ಶೀರ್ಷಿಕೆ ಪಕ್ಕಾ ಆಗದ ಈ ಚಿತ್ರಕ್ಕೆ ಡಿಸೆಂಬರ್ ಹೊತ್ತಿಗೆ ಚಾಲನೆ ಸಿಗಲಿದೆ.