Advertisement

ರಾಜಸ್ಥಾನ್‌ ಬಿಟ್ಟು ಗುಜರಾತ್‌ ಸೇರಿಕೊಂಡ ರವಿ ಬಿಷ್ಣೋಯಿ

11:45 PM Jun 26, 2023 | Team Udayavani |

ಜೈಪುರ: ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ತಮ್ಮ ದೇಶಿ ಕ್ರಿಕೆಟ್‌ ನೆಲೆಯನ್ನು ಬದಲಿಸಿದ್ದಾರೆ. ರಾಜಸ್ಥಾನ ಬಿಟ್ಟು ಗುಜರಾತ್‌ ಪರ ಆಡಲು ನಿರ್ಧರಿಸಿದ್ದಾರೆ.
ಆದರೆ ಗುಜರಾತ್‌ ಕ್ರಿಕೆಟ್‌ ಮಂಡಳಿ ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. “ಈತನಕ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ” ಎಂದು ಹೇಳಿದೆ. ಆದರೆ ರವಿ ಬಿಷ್ಣೋಯಿ ಮಾತ್ರ ಗುಜರಾತ್‌ ಜೆರ್ಸಿ ಧರಿಸಿ “ನ್ಯೂ ಬಿಗಿನಿಂಗ್ಸ್‌…” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಜೋಧ್‌ಪುರ ಮೂಲದ ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಭಾರತದ ಪರ 10 ಟಿ20 ಹಾಗೂ ಏಕೈಕ ಏಕದಿನ ಪಂದ್ಯವನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ಕಳೆದ ಸೀಸನ್‌ನಲ್ಲಿ 16 ವಿಕೆಟ್‌ ಉರುಳಿಸಿದ್ದಾರೆ.

ತಂಡದ ಪ್ರಮುಖ ಬೌಲರ್‌ ಆಗಿದ್ದೂ ಕಳೆದ ರಣಜಿ ಋತುವಿನಲ್ಲಿ ರವಿ ಬಿಷ್ಣೋಯಿ ಅವರಿಗೆ ರಾಜಸ್ಥಾನ್‌ ಪರ ಹೆಚ್ಚಿನ ಅವಕಾಶ ಒದಗಿ ಬರಲಿಲ್ಲ. ತವರಿನ ಜೋಧ್‌ಪುರದಲ್ಲಿ ನಡೆದ 2 ಪಂದ್ಯಗಳಲ್ಲೂ ಅವರು ಬೆಂಚ್‌ ಬಿಸಿ ಮಾಡಬೇಕಾಗಿ ಬಂತು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ ಬಿಷ್ಣೋಯಿ ಈವರೆಗೆ ಪ್ರತಿಕ್ರಿಯೆಗೆ ಲಭಿಸಿಲ್ಲ.

ರವಿ ಬಿಷ್ಣೋಯಿ ಅಹ್ಮದಾಬಾದ್‌ನಲ್ಲಿದ್ದು, ಗುಜರಾತ್‌ ತಂಡದ ರಣಜಿ ಪೂರ್ವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ರಮೇಶ್‌ ಪೊವಾರ್‌ ಈ ತಂಡದ ಕೋಚ್‌ ಆಗಿದ್ದಾರೆ.
2020ರಲ್ಲಿ ಭಾರತದ ಅಂಡರ್‌-19 ವಿಶ್ವಕಪ್‌ ತಂಡವನ್ನು ಪ್ರತಿನಿಧಿಸುವ ಮೂಲಕ ರವಿ ಬಿಷ್ಣೋಯಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕೆ ಶರಣಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next