ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ “ಹಾಯ್ ಬೆಂಗಳೂರು’ ವಾರ ಪತ್ರಿಕೆ ಸಂಪಾದಕ ರವಿಬೆಳಗೆರೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಮಂಗಳವಾರ ರಾತ್ರಿ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ನೀಡಿದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ನ್ಯಾಯಾಂಗ ಬಂಧನದಲ್ಲಿರುವ ರವಿಬೆಳಗೆರೆ , ತಮ್ಮ ಪುತ್ರಿ ಚೇತನಾ ಮನೆಯಿಂದ ತಂದ ಊಟ ಸೇವಿಸಿ ನಿದ್ದೆಗೆ ಜಾರಿದರು. ಕೆಲ ಹೊತ್ತಿನ ಬಳಿಕ ಖಾಲಿ ಹಾಳೆ, ಪೆನ್ನು ಪಡೆದು ಬರೆಯುತ್ತಾ ಕಾಲ ಕಳೆದರು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಕಾರಣ ಜೈಲಿನಲ್ಲಿರುವ ಆಸ್ಪತ್ರೆ ಕೊಠಡಿ ಸಂಖ್ಯೆ 10ರಲ್ಲಿಯೇ ರಾತ್ರಿ ಕಳೆದಿದ್ದರು. ವೈದ್ಯರು ಕೂಡ ಅವರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಮಧ್ಯರಾತ್ರಿ 3ರ ನಂತರ ಮಲಗಿ¨ªಾರೆ.
ಈ ವೇಳೆ ಜೈಲು ಸಿಬ್ಬಂದಿ “ಮಲಗಿ ಸಾರ್’ ಎಂದರೂ, ರವಿಬೆಳಗೆರೆ ನಾನು ಮಲಗೋದೆ ಬೆಳಗಿನ ಜಾವ ಕಣಪ್ಪ. ಕಾಲು ನೋವು, ನಿದ್ದೆ ಬರೋದಿಲ್ಲ ಎಂದು ಜೈಲು ಸಿಬ್ಬಂದಿ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಮಲಗಿದ ನಂತರ ಬೆಳಿಗ್ಗೆ 6.30ಕ್ಕೆ ಜೈಲು ಸಿಬ್ಬಂದಿ ಎಬ್ಬಿಸಿದ್ದು ನಿತ್ಯಕರ್ಮ ಮುಗಿಸಿ ಬಂದ ನಂತರ ಪ್ರಮುಖ ದಿನ ಪತ್ರಿಕೆಗಳ ಮೇಲೆ ಗಮನಹರಿಸಿದರು.
ನಾನು ಯಾರು ಗೊತ್ತಾ?: ನಂತರ ಜೈಲು ಸಿಬ್ಬಂದಿ ಅಲ್ಲೇ ತಯಾರಾದ ಚಿತ್ರಾನ್ನ ನೀಡಿದ್ದಾರೆ ಅದಕ್ಕೆ ಸಿಬ್ಬಂದಿಗೆ ಗದರಿದ್ದಾರೆ ಎನ್ನಲಾಗಿದೆ. ಅರ್ಧ ತಾಸಿನ ನಂತರ ಮತ್ತೆ ಚಿತ್ರಾನ್ನದ ತಟ್ಟೆ ಪಡೆದು ಸೇವಿಸಿ ಟೀ ಕುಡಿದಿದ್ದಾರೆ.ನಂತರ ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ರವಿ ಬೆಳಗೆರೆ ಇರುವ ಬ್ಯಾರಕ್‌ಗೆ ಭದ್ರತೆ ಒದಗಿಸಲಾಗಿದೆ. ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯೇ ಮಲಗಲು ವ್ಯವಸ್ಥೆ ಮಾಡಲಾಗಿದೆ. ಕೊಠಡಿಗೆ ಹೋಗಲು ವ್ಹಿಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.
ಸಿಗರೇಟ್‌ಗಾಗಿ ಹಠ: ಸೋಮವಾರ ಸಂಜೆ ಜೈಲು ಪಾಲಾಗಿರುವ ರವಿ ಬೆಳಗೆರೆ ಕಾರಾಗೃಹದಲ್ಲಿ ಸಿಗರೇಟ್ ನೀಡುವಂತೆ ಸಿಬ್ಬಂದಿ ಬಳಿ ಹಠ ಹಿಡಿದಿದ್ದಾರೆ. ಮೊದಲು ಸಿಗರೇಟಿಗಾಗಿ ರಾದ್ಧಾಂತ ನಡೆಸಿ ಸಿಗರೇಟ್ ನೀಡುವಂತೆ ಸಿಬ್ಬಂದಿಗೆ ಬೆದರಿಸಿದ್ದಾರೆ. ವೈದ್ಯರ ಮೇರೆಗೆ ಡಿಕೋಟಿನ್ ನೀಡಲಾಗಿದೆ.
ಭೇಟಿ ಮಾಡಿದ ಚೇತನಾ: ಪುತ್ರಿ ಚೇತನಾ ಮಂಗಳವಾರ ಅಪರಾಹ್ನ 12 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರಕ್ಕೆ ಬಂದು ಸಾರ್ವಜನಿಕರ ಜತೆ ಸಾಲಿನಲ್ಲಿ ನಿಂತು ವಿಶೇಷ ಪ್ರವೇಶದ ಅನುಮತಿ ಪಡೆದು ಒಳಹೋಗಿ ತಂದೆಯನ್ನು ಭೇಟಿ ಮಾಡಿದರು. ಚೇತನಾ ಬೆಳಗಿನ ತಿಂಡಿಗಾಗಿ ಇಡ್ಲಿ ಸಾಂಬಾರ್, ಜ್ಯೂಸ್, ಔಷಧಿ ಕೊಟ್ಟು ಬಂದಿದ್ದಾರೆ.