ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪ ಸಂಬಂಧ “ಹಾಯ್ ಬೆಂಗಳೂರು’ ವಾರಪತ್ರಿಕೆ ಸಂಪಾದಕ ರವಿಬೆಳಗೆರೆಗೆ ಡಿ.21ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ಸೋಮವಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರವಿಬೆಳಗೆರೆ ಪರ ವಕೀಲ ದಿವಾಕರ್ ಮತ್ತೂಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿ, ಅನಾರೋಗ್ಯ ಕಾರಣವೊಡ್ಡಿ ಆರೋಪಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿಬೆಳಗೆರೆ ಜೈಲಿನಲ್ಲಿದ್ದ ವೇಳೆ ಅಮಾಯಕರಂತೆ ನಟಸಿ, ಅನಾರೋಗ್ಯ ನೆಪವೊಡ್ಡಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಮಧ್ಯಂತರ ಜಾಮೀನು ಕೊಡಬಾರದು ಎಂದು ಮನವಿ ಮಾಡಿದರು. ಇದೇ ವೇಳೆ ವಾದಮಂಡಿಸಿದ ಸುನಿಲ್ ಹೆಗ್ಗರವಳ್ಳಿ ಪರ ವಕೀಲ ಹರೀಶ್, ಮೇಲ್ನೋಟಕ್ಕೆ ಪ್ರಕರಣವನ್ನು ದಾಖಲಿಸಿಲ್ಲ.
ಸೂಕ್ತ ಸಾûಾ$Âಧಾರಗಳ ಆಧಾರದ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಜತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ದಿವಾಕರ್, ಸುನಿಲ್ ಹತ್ಯೆಗೆ ಆರೋಪಿಗಳು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ಆರೋಪಿಸುತ್ತಿದ್ದು, ಸತ್ಯಕ್ಕೆ ದೂರವಾಗಿದೆ. ಜತೆಗೆ ಪೊಲೀಸರು ರವಿಬೆಳಗೆರೆ ಮನೆ ಮೇಲೆ ದಾಳಿ ನಡೆಸಿದಾಗ 2 ಗನ್‌ಗಳು ಪತ್ತೆಯಾಗಿವೆ. ಈ ಗನ್‌ಗಳಿಗೆ ಪರವಾನಿಗೆ ಪಡೆಯಲಾಗಿದೆ.
ಒಂದು ಪಿಸ್ತೂಲ್, 53 ಗುಂಡುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಕಾನೂನು ಬದ್ಧವಾಗಿಯೇ ಖರೀದಿ ಮಾಡಲಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾ.ಮಧುಸೂದನ್ ಡಿ.21ರವರೆಗೆ ರವಿ ಬೆಳಗೆರೆ ಮಧ್ಯಂತರ ಜಾಮೀನು ವಿಸ್ತರಿಸಿದರು.
ಜಯದೇವದಲ್ಲಿ ಚಿಕಿತ್ಸೆ: ರವಿ ಬೆಳಗೆರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂಜಿಯೋಗ್ರಾಂ ಚಿಕಿತ್ಸೆ ಅಗತ್ಯ ಇದೆ. ಹೀಗಾಗಿ ಇನ್ನಷ್ಟು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಜಯದೇವ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.