Advertisement
40 ವರ್ಷಗಳಿಗೆ ಹಿಂದೆ ಹತ್ತನೇ ತರಗತಿಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ರವೀನಾ ಅವರು ಮಂಗಳಮುಖೀಯಾಗಿರಲಿಲ್ಲ. ಸಹಪಾಠಿಗಳಿಗೆ ಇವರು ರವೀಂದ್ರ ಆಗಿದ್ದರು. ಉಳಿದವರ ಮುಂದೆ ನಿಜಾಂಶ ಪ್ರಕಟಿಸಲಾಗದೆ ಏಕಾಂಗಿತನವನ್ನು ಅನುಭವಿಸುತ್ತಿದ್ದರು. ಇದರ ಫಲ ಪರೀಕ್ಷೆಯ ಮೇಲೂ ಅಂದು ಪ್ರಭಾವ ಬೀರಿತ್ತು. ಪರೀಕ್ಷೆಯಲ್ಲಿ ಸೋಲು ಅನುಭವಿಸಬೇಕಾಗಿ ಬಂದಿತ್ತು. ಈಗ ಎಲ್ಲ ಪರಿಸ್ಥಿಯೂ ಬದಲಾಗಿದ್ದು, ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳಿಸಿದ್ದಾರೆ.
Related Articles
Advertisement
ಹಿಂದಿ ತಮ್ಮ ಇಷ್ಟ ವಿಷಯವಾಗಿದ್ದರೂ, ನಿರೀಕ್ಷಿಸಿದ ರೀತಿ ಅಂಕಗಳಿಕೆ ಸಾಧ್ಯವಾಗಿರಲಿಲ್ಲ. ಗಣಿತವೂ ಕಬ್ಬಿಣದ ಕಡಲೆಯಾಗಿರುವ ಕಾರಣ ಹ್ಯುಮಾನಿಟಿಸ್ ಆಯ್ಕೆ ಮಾಡಿರುವುದಾಗಿ ಅವರು ಹೇಳಿದರು. ಅನೇಕ ವರ್ಷಗಳ ಕಾಲ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಇನ್ನಿತರ ದುಡಿಮೆ ನಡೆಸಿ ಬದುಕಿದರು. ಕೊಂಚ ಕಾಲ ಅಸ್ಸಾಂನಲ್ಲೂ ನೌಕರಿ ನಡೆಸಿದರು. ಈ ಮೂಲಕ ಹಿಂದಿ ಸುಲಲಿತವಾಯಿತು. ನಂತರ ಏಡ್ಸ್ ನಿಯಂತ್ರಣ ಸೊಸೈಟಿಯ ಹೆಲ್ತ್ ಲೈನ್ ಪ್ರಾಜೆಕ್ಟ್ ನಲ್ಲಿ ಮೂರು ವರ್ಷ ಕರಾರು ಮೇರೆಗೆ ನೌಕರಿ ನಡೆಸಿದರು. ಇದು ಬದುಕಿನಲ್ಲಿ ಅನೇಕ ತಿರುವುಗಳಿಗೆ ಕಾರಣವಾಯಿತು ಎಂದವರು ತಿಳಿಸುತ್ತಾರೆ.
ಉತ್ತಮ ಚಿತ್ರರಚನಾ ಕಲಾವಿದರೂ ಆಗಿರುವ ರವೀನಾ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಜೊತೆಗೆ ಅತ್ಯುತ್ತಮ ಮೇಕಪ್ ಕಲಾವಿದರೂ ಹೌದು.
65 ವರ್ಷ ಪ್ರಾಯದಲ್ಲೂ ಯುವಕರಂತೆ ಚಟುವಟಿಕೆ ನಡೆಸುತ್ತಿರುವ ರವೀನಾ ತತ್ಸಮಾನ ತರಗತಿಗಳಿಗೆ ಬರುತ್ತಿದ್ದಾಗ ಪುರುಷ ವೇಷದಲ್ಲೇ ಬರುತ್ತಿದ್ದರು. ಶಿಕ್ಷಣ ಪಡೆಯುವ ಮೂಲಕ ಹಿಂದೆ ಕಾಡುತ್ತಿದ್ದ ಏಕಾಕಿತನ ದೂರವಾಗಿದೆ ಎನ್ನುತ್ತಾರೆ ಅವರು.
ತನ್ನಂಥವರನ್ನು ಸಮಾಜದ ಪ್ರಧಾನವಾಹಿನಿಗೆ ಕರೆತರುವಲ್ಲಿ ರಾಜ್ಯ ಸರಕಾರದ ಇಂಥಾ ಯೋಜನೆಗಳು ಪೂರಕವಾಗಿದೆ ಎಂದು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.