ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಹಾಗೂ ಪೂರೈಕೆ ಮಾಡಿದ ಆರೋಪದಲ್ಲಿ ತೆಲುಗಿನ ಪೋಷಕ ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.
ಪಾರ್ಟಿಯಲ್ಲಿ ಭಾಗಿಯಾ ಗಿದ್ದ 120ಕ್ಕೂ ಹೆಚ್ಚು ಮಂದಿ ಪೈಕಿ 88 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್ ಜಾರಿಗೊಳಿಸಿ ಮೇ 27ರಂದು ಸಿಸಿಬಿಯ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಈ ಆರೋಪಿಗಳು ಮಾದಕ ವಸ್ತು ಸೇವನೆ ಮಾತ್ರವಲ್ಲ, ತಮ್ಮ ಸ್ನೇಹಿತರಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಅನುಮಾನದ ಮೇರೆಗೆ ಮೊದಲಿಗೆ ಇವರಿಗೆ ನೋಟಿಸ್ ಕೊಡಲಾಗಿದೆ. ಬಾಕಿ 80 ಮಂದಿಗೆ ಹಂತ-ಹಂತವಾಗಿ ನೋಟಿಸ್ ಕೊಡಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಮೇ 19ರಂದು ನಡೆದ ರೇವ್ ಪಾರ್ಟಿಯಲ್ಲಿ ನಟಿಯರಾದ ಹೇಮಾ, ಆಶಿರಾಯ್ ಸೇರಿ 120ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಮಾಹಿತಿ ಮೇರೆಗೆ ಮೇ 20ರಂದು ನಸುಕಿನ 3 ಗಂಟೆ ಸುಮಾರಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮಾದಕ ವಸ್ತು ಮಾರಾಟ ಸಂಬಂಧ ವಾಸು, ವೈ. ಎಂ.ಅರುಣ್‌ಕುಮಾರ್, ನಾಗಬಾಬು, ರಣಧೀರ್ ಬಾಬು, ಮೊಹಮ್ಮದ್ ಅಬೂಬಕ್ಕರ್ ಸಿದ್ದಿಕಿ ಎಂಬವರನ್ನು ಬಂಧಿಸಿದ್ದರು. ಅಲ್ಲದೆ, ನಟಿ ಹೇಮಾ ಹಾಗೂ ಇತರೆ 120ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ವೈದ್ಯರ ಮೂಲಕ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದಾಗ 88 ಮಂದಿಯ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿತ್ತು.
ಆಂಧ್ರ ಎಂಎಲ್‌ಎ ಆಪ್ತ ವಶಕ್ಕೆ: ರೇವ್ ಪಾರ್ಟಿಯಲ್ಲಿ ಪತ್ತೆಯಾದ ಕಾರಲ್ಲಿ ಶಾಸಕ ಕಾಕಾನಿ ಗೋವರ್ಧನ ರೆಡ್ಡಿ ಎಂಬವರ ಪಾಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಬೆನ್ನತ್ತಿದ ಸಿಸಿಬಿ, ಹೈದರಾಬಾದ್ ಮೂಲದ ಪೂರ್ಣ ರೆಡ್ಡಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತ ಸಿಸಿಬಿ ದಾಳಿ ವೇಳೆ ಕಾರು ಬಿಟ್ಟು ಪರಾರಿಯಾಗಿದ್ದ. ಅಲ್ಲದೆ, ರೇವ್ ಪಾರ್ಟಿ ಆಯೋಜನೆಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಜತೆಗೆ ಶಾಸಕ ಕಾಕಾನಿ ಗೋವರ್ಧನ ರೆಡ್ಡಿಗೆ ಆಪ್ತ ಎಂಬ ಮಾಹಿತಿ ತಿಳಿದುಬಂದಿದೆ.
ಐವರು ಆರೋಪಿಗಳ ಬ್ಯಾಂಕ್ ಖಾತೆ ಜಪ್ತಿ: ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಪೂರೈಕೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಾಸು, ವೈ.ಎಂ.ಅರುಣ್ ಕುಮಾರ್, ನಾಗಬಾಬು, ರಣಧೀರ್ ಬಾಬು, ಮೊಹಮ್ಮದ್ ಅಬೂಬಕ್ಕರ್ ಸಿದ್ದಿಕಿ ಎಂಬವ ರನ್ನು ಬಂಧಿಸಲಾಗಿದ್ದು, ಆರೋಪಿಗಳ ಬ್ಯಾಂಕ್ ಖಾತೆ ಗಳ ಪರಿಶೀಲಿಸಿದಾಗ, ಲಕ್ಷಾಂತರ ರೂ. ಪತ್ತೆಯಾಗಿತ್ತು. ಹೀಗಾಗಿ ಅವರ ಬ್ಯಾಂಕ್ ಖಾತೆಗಳ ಜಪ್ತಿ ಮಾಡಲಾಗಿದೆ. ಜತೆಗೆ ಅವರ ಮೊಬೈಲ್‌ಗಳ ಜಪ್ತಿ ಮಾಡಿ, ಪರಿಶೀಲಿಸುತ್ತಿದ್ದು, ಈ ಹಿಂದೆ ಬೇರೆ ಯಾವ ಪಾರ್ಟಿ ಆಯೋಜಿಸಿದ್ದರು. ಜತೆಗೆ ಯಾರನ್ನೆಲ್ಲಾ ಆಹ್ವಾನಿಸಿದ್ದರು ಎಂಬ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಸದ್ಯದಲ್ಲೇ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆರೋಪಿ ಅರುಣ್‌ಗೆ ಆಂಧ್ರ ರಾಜಕೀಯದ ನಂಟು? ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೈದ್ರಾಬಾದ್ ಮೂಲದ ವೈ. ಎಂ.ಅರುಣ್‌ಕುಮಾರ್‌ಗೆ ಆಂಧ್ರ ಪ್ರದೇಶದ ರಾಜಕೀಯ ನಂಟು ಇರುವುದು ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಮುಖ್ಯ ಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ವೈಎಸ್‌ಆರ್ ಪಕ್ಷದ ಶಾಸಕ ಶ್ರೀಕಾಂತ್‌ರೆಡ್ಡಿ ಸೇರಿ ಕೆಲ ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೋರಮಂಗಲದಲ್ಲಿ ವಾಸವಾಗಿದ್ದ ಅರುಣ್‌ಕುಮಾರ್, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ರೇವ್ ಪಾರ್ಟಿ ಪ್ರಕರಣದ ಪ್ರಮುಖ ಆರೋಪಿ ವಾಸುವಿನ ಆತ್ಮೀಯ ಸ್ನೇಹಿತನಾಗಿದ್ದಾನೆ. ಹೀಗಾಗಿ ಇಬ್ಬರು ಪಾರ್ಟಿ ಆಯೋಜಿಸುತ್ತಿದ್ದರು ಎಂಬುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.